'ಜನತಾದಳದ ಮನೆಯೊಳಗೆ ಅಸಮಾಧಾನ, ಕಾಂಗ್ರೆಸ್‌ನಲ್ಲಿ ಭಾರೀ ಬಂಡಾಯ' ವಿಪಕ್ಷಗಳ ರಾಜಕೀಯ ಭವಿಷ್ಯ ನುಡಿದ ಬಿಜೆಪಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ವಿಪಕ್ಷಗಳ ರಾಜಕೀಯ ಭವಿಷ್ಯವನ್ನು ಬಿಜೆಪಿ ನುಡಿದಿದೆ. ಟ್ವೀಟ್ ಮಾಡುವ ಮೂಲಕ ವಿಪಕ್ಷಗಳ ಆಂತರಿಕ ಕಲಹಗಳ ಬಗ್ಗೆ ಬಹಿರಂಗಪಡಿಸಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಈ ನಡುವೆ ಪಕ್ಷಗಳ ಆಂತರಿಕ ಕಲಹವನ್ನು ಬಹಿರಂಗಪಡಿಸಿದ ಬಿಜೆಪಿ ಮುಂಬರುವ ಚುನಾವಣೆಗೆ ವಿಪಕ್ಷಗಳ ರಾಜಕೀಯ ಭವಿಷ್ಯವನ್ನು ನುಡಿದಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೋಲು ಖಚಿತ ಎಂದಿದೆ.
'ಕಾಂಗ್ರೆಸ್ ಪಕ್ಷದಲ್ಲಿ ಬಣಗಳ ನಡುವಿನ ಕದನ ಮುಂದುವರಿದಿದೆ. ಇನ್ನು ಜನತಾದಳದ ಮನೆಯೊಳಗಿನ ಅಸಮಾಧಾನ ಉಲ್ಬಣಗೊಂಡಿದೆ. ಡಿಕೆ ಶಿವಕುಮಾರ್ ಮತ್ತು ಡಾ ಪರಮೇಶ್ವರ್ ಒಟ್ಟಾಗಿ ಹೊರಟಿರುವ ಯಾತ್ರೆ ಸಿದ್ದರಾಮಯ್ಯ ನಿದ್ದೆಗೆಡಿಸಿದೆ. ಹಾಗಾಗಿ ಕೋಲಾರದಲ್ಲಿ ಸಿದ್ದರಾಮಯ್ಯ ಸೋಲುವುದು ಖಚಿತವಾಗಿದೆ' ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ರಾಜಕೀಯ ರಣತಂತ್ರಗಳು ಸಿದ್ದವಾಗುತ್ತಿವೆ. ಯಾವ ಪಕ್ಷ? ಎಲ್ಲಿ? ಹೇಗೆ ಪ್ರಾಬಲ್ಯ ಹೊಂದಿವೆ ಎಂಬಿತ್ಯಾದಿ ಮಾಹಿತಿಯನ್ನು ಪಕ್ಷಗಳು ಗುಟ್ಟಾಗಿ ಪಡೆದುಕೊಳ್ಳುತ್ತಿವೆ. ಅದರಲ್ಲೂ ಬಿಜೆಪಿ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸತಾಯಗತಾಯ ಪ್ರಯತ್ನದಲ್ಲಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಬಲವಾಗಿರುವ ಕ್ಷೇತ್ರಗಳತ್ತ ಗಮನ ಹರಿಸಿದ ಬಿಜೆಪಿ ವಿಪಕ್ಷದಲ್ಲಿ ಬಣಗಳ ನಡುವಿನ ಕದನವನ್ನು ಅಸ್ತ್ರವನ್ನಾಗಿಸಿಕೊಂಡಿದೆ. ಜೊತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಸರಿಣಿ ವಾಗ್ದಾಳಿಯನ್ನು ಮಾಡುತ್ತಿದೆ.
|
ಪಕ್ಷದ ಮೇಲೆ ಡಾ ಪರಮೇಶ್ವರ್ ಅಸಮಧಾನ
ಕರ್ನಾಟಕ ವಿಧಾನಸಭಾ ಚುನಾವಣೆ ಮುನ್ನವೇ ಕಾಂಗ್ರೆಸ್ ನಲ್ಲಿ ಭಾರೀ ಬಂಡಾಯ ಎದುರಾಗಿದೆ. ಸ್ವಪಕ್ಷದ ಮೇಲೆ ಡಾ ಪರಮೇಶ್ವರ್ ಅಸಮಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ತಮ್ಮೊಡನೆ ಚರ್ಚೆ ನಡೆಸದೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಭರವಸೆಗಳನ್ನು ಘೋಷಿಸುತ್ತಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು, ಜೊತೆಗೆ ಜಮೀನು ಇಲ್ಲದವರಿಗೆ ಸರ್ಕಾರದಿಂದ ಭೂಮಿ ನೀಡುವ ಘೋಷಣೆ, ರೈತರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಹಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಭರವಸೆಗಳ ಘೋಷಣೆ ಮಾಡಲಾಗುತ್ತಿದೆ. ಜಿಲ್ಲಾ ಪ್ರವಾಸದ ವೇಳೆ ತಾವೇ ತೀರ್ಮಾನ ಮಾಡಿ ಉಚಿತ ಘೋಷಣೆಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಆಪ್ತರ ಬಳಿ ಪರಮೇಶ್ವರ್ ಬೇಸರ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪರಮೇಶ್ವರ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ಕೋಲಾರದ ಅಖಾಡಕ್ಕಿಳಿಯಲು ಸಿದ್ದರಾಮಯ್ಯ ಸಿದ್ಧ
ಕೋಲಾರದಲ್ಲಿ ಅಖಾಡಕ್ಕಿಳಿಯಲು ನಿರ್ಧಾರ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸುವುದು ಬಿಜೆಪಿಗೂ ಬಹುದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೋಲಾರದಲ್ಲಿ ಸಿದ್ದು ಸೋಲಿಸಲು ವ್ಯೂಹ ರಚನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಆಪ್ತರ ಮೂಲಕವೇ ಸಿದ್ದರಾಮಯ್ಯ ಅವರನ್ನು ಮಣಿಸಲು ವ್ಯೂಹ ರಚನೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಸೋಮವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೋಲಾರ ಭಾಗದ ನಾಯಕರ ಜೊತೆಗೆ ಮಹತ್ವದ ಚರ್ಚೆಯನ್ನು ಸಿಎಂ ಬೊಮ್ಮಾಯಿ ನಡೆಸಿದ್ದಾರೆ ಎನ್ನಲಾಗುತ್ತಿದೆ.ಸಚಿವ ಸುಧಾಕರ್ , ಕೋಲಾರ ಸಂಸದ ಮುನ್ನಿಸ್ವಾಮಿ , ಎಂಎಲ್ಸಿ ಛಲವಾದಿ ನಾರಾಯಣ್ ಸ್ವಾಮಿ ಜೊತೆಗೆ ಸಿಎಂ ಸುಧೀರ್ಘ ಚರ್ಚೆ ನಡೆಸಿದ್ದಾರೆ.ಸದ್ಯ ಕೋಲಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಗಾ ಇಡಲು ಸೂಚನೆಯನ್ನೂ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ಲಸ್ ನೆಗೆಟ್ಯೂಗಳ ಬಗ್ಗೆ ಹಾಗೂ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಚಟುವಟಿಕೆ ಮೇಲೆ ನಿಗ ಇಡುವಂತೆ ಸಚಿವರಾದ ಸುಧಾಕರ್ ಮತ್ತು ಮುನಿರತ್ನಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

'ಜಾತ್ಯತೀತ ಜನತಾ ದಳ ಅಲ್ಲ ಜಾತಿಯ ದಳ' ಸಿಟಿ ರವಿ
'ಜಾತ್ಯತೀತ ಜನತಾ ದಳ ಅಲ್ಲ ಜಾತಿಯ ದಳ' ಎಂದು ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಜೆಡಿಎಸ್ನ ಹೆಸರನ್ನು ಜಾತ್ಯತೀತ ಜನತಾ ದಳ ಎನ್ನುವ ಬದಲು ಜಾತಿಯ ದಳ ಎಂದು ಹೆಸರು ಬದಲಿಸಿದರೆ ಒಳ್ಳೆಯದು ಎಂದು ಹೆಚ್ಡಿಕೆಗೆ ಸಿ.ಟಿ. ರವಿ ಸಲಹೆ ನೀಡಿದ್ದಾರೆ. ಹಾಗೆಯೇ, ಬಿಜೆಪಿ ಒಡೆಯರ್, ಸಾವರ್ಕರ್ ಸಿದ್ಧಾಂತ ಪ್ರತಿಪಾದಕವಾದರೆ, ಕಾಂಗ್ರೆಸ್ ಟಿಪ್ಪು ಸಮರ್ಥಕ ಎಂದು ಅವರು ಹೇಳಿದ್ದಾರೆ.
ಪ್ರತೀ ಬಾರಿ ಲಾಟರಿ ಹೊಡೆಯಲು ಸಾಧ್ಯವಿಲ್ಲ. ಈ ಹಿಂದೆ ಕುಮಾರಸ್ವಾಮಿಗೆ ಲಾಟರಿ ಹೊಡೆದಿತ್ತು, ಹಾಗಾಗಿ ಅದೇ ವಾದ ಅವರದ್ದಾಗಿದೆ. ಬಿಜೆಪಿ ಪಕ್ಷದಲ್ಲಿ ಬ್ರಾಹ್ಮಣ ಸಿಎಂ ವಿಚಾರ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂಥ ಚರ್ಚೆಗಳು ಎದುರಾಗಿದ್ದವು. ಜಾತ್ಯತೀತ ನಾಯಕರೆನಿಸಿಕೊಂಡವರು ಜಾತಿ ಬಗ್ಗೆ ಮಾತನಾಡುವುದು ಸರಿಯಲ್ಲ. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವುದು ಬಿಜೆಪಿಯ ಸಿದ್ಧಾಂತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

ಡಿಕೆಶಿಗೆ ಬಿಜೆಪಿ ಟಾಂಟ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ ಹೇಳಿಕೆಗೆ ಸಿ.ಟಿ. ರವಿ ವ್ಯಂಗ್ಯದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ಒಂದು ಕಾಲದಲ್ಲಿ ಇಂದಿರಾ ಗಾಂಧಿ ಹೆಸರು ಹೇಳಿದರೆ ಬೇಲಿ ಗೂಟಕ್ಕೂ ಹೋಗಿ ವೋಟು ಹಾಕುತ್ತಿದ್ದರು. ಎಂಎಲ್ಎ, ಎಂಪಿ ಆಗುತ್ತಿದ್ದರು. ಅದರೆ, ಈಗ ಕಾಂಗ್ರೆಸ್ನವರಿಗೆ ರಾಹುಲ್ ಗಾಂಧಿ ಹೆಸರು ಹೇಳಿದರೆ ಬರುವ ವೋಟೂ ಹೋಗುತ್ತದೆ. ಅದೇ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿದರೆ ಬಿಜೆಪಿಗೆ ವೋಟ್ ಬೀಳುತ್ತದೆ. ಇದು ಬಿಜೆಪಿಯ ಅದೃಷ್ಟ, ಕಾಂಗ್ರೆಸ್ನವರ ದುರದೃಷ್ಟ ಎಂದು ಮಾಜಿ ಸಚಿವರು ವಾಗ್ದಾಳಿ ಮಾಡಿದ್ದಾರೆ.












Click it and Unblock the Notifications