ಅವಕಾಶವಾದಿಯಲ್ಲವೇ ನೀವು?; ಕುಮಾರಸ್ವಾಮಿಗೆ ಬಿಜೆಪಿ ಪ್ರಶ್ನೆ
ಬೆಂಗಳೂರು, ಜನವರಿ 04; "ನಿಮ್ಮ ರಾಜಕೀಯದ ಆಸೆಗಾಗಿ ಕೆಲ ಕಾಲ ತಂದೆಯನ್ನೇ ದೂರವಿಟ್ಟ ಅವಕಾಶವಾದಿಯಲ್ಲವೇ ನೀವು?" ಎಂದು ಕರ್ನಾಟಕ ಬಿಜೆಪಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ.
ಬುಧವಾರ ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಮಾಡಿದ್ದು, ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡಿದೆ. ಅಮಿತ್ ಶಾ ಕರ್ನಾಟಕ ಭೇಟಿ ಬಳಿಕ ಕುಮಾರಸ್ವಾಮಿ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಲಾಗಿದೆ. ಅಮಿತ್ ಶಾ ಜೆಡಿಎಸ್ ಭದ್ರಕೋಟೆ ಮಂಡ್ಯಕ್ಕೆ ಆಗಮಿಸಿದ್ದರು, ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು.
"ತಂದಿಟ್ಟು ತಮಾಷೆ ನೋಡುವ ಕಲೆ, ನಮ್ಮ ಕುಮಾರಸ್ವಾಮಿ ಅವರಿಗೆ ಸಿದ್ಧಿಸಿದೆ. ನಂದಿನಿ ಬ್ರ್ಯಾಂಡ್ ವಿಷಯ ಮುಂದಿಟ್ಟುಕೊಂಡು ಕರ್ನಾಟಕ ಮತ್ತು ಗುಜರಾತ್ ಮಧ್ಯೆ ವೈಮನಸ್ಯ ಮೂಡಿಸುವ ವಿಫಲ ಯತ್ನ ಮಾಡಿದ್ದಾರೆ. ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿ ಕೊಟ್ಟಿದ್ಯಾರು?" ಎಂದು ಬಿಜೆಪಿ ಎಚ್. ಡಿ. ಕುಮಾರಸ್ವಾಮಿಯನ್ನು ಪ್ರಶ್ನೆ ಮಾಡಿದೆ.
ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್‌ಮುಲ್) ಆವರಣದಲ್ಲಿ ನಿರ್ಮಿಸಿರುವ ಮೆಗಾ ಡೈರಿ ಉದ್ಘಾಟನೆ ಮಾಡಿದ್ದರು. ಗುಜರಾತ್ ಮತ್ತು ಕರ್ನಾಟಕದ ಹಾಲು ಒಕ್ಕೂಟಗಳನ್ನು ವಿಲೀಗೊಳಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು.

ಬಿಜೆಪಿಯಿಂದ ಸ್ಪರ್ಧಿಸುವುದು ಕನ್ನಡಿಗರೇ
ಬಿಜೆಪಿ ತನ್ನ ಟ್ವೀಟ್‌ನಲ್ಲಿ, "ಹಳೇ ಮೈಸೂರು ಭಾಗಕ್ಕೆ ನೀವು ಮಾಡಿದ ಅನ್ಯಾಯದ ಬಗ್ಗೆ ಹೇಳಿದ ಕೂಡಲೇ ಇಷ್ಟೊಂದು ಹೆದರಿಬಿಟ್ಟರೆ ಹೇಗೆ ಕುಮಾಸ್ವಾಮಿಯವರೆ?. ಆ ಭಾಗದಲ್ಲಿ ಜನ ಏನು ಹೇಳುತ್ತಿದ್ದಾರೋ ಅದನ್ನೇ ನಾವೂ ಹೇಳುತ್ತಿದ್ದೇವಷ್ಟೆ. ಜತೆಗೆ ರಾಜ್ಯದ ಅಷ್ಟೂ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಕನ್ನಡಿಗರೇ ಎಂಬುದು ತಮಗೆ ತಿಳಿದಿರಲಿ" ಎಂದು ಹೇಳಿದೆ.

ಕುಟುಂಬ ರಾಜಕಾರಣ ಅಂತ್ಯ
ಬಿಜೆಪಿ ತನ್ನ ಟ್ವೀಟ್‌ನಲ್ಲಿ, "ಕರ್ನಾಟಕದ ಮೇಲೆ ಅಸೂಯೆ, ಅಸಹನೆ ನಮಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರ ಆತಂಕ ನಮಗೆ ಅರ್ಥವಾಗುತ್ತದೆ. ಜನರಲ್ಲಿ ತಪ್ಪು ಕಲ್ಪನೆ ಸೃಷ್ಟಿಸಲು ಸೂತ್ರಗಳನ್ನು ತರಾತುರಿಯಲ್ಲಿ ಹೆಣೆಯುತ್ತಿದ್ದಾರೆ. ಕುಟುಂಬ ರಾಜಕಾರಣ ಅಂತ್ಯವಾಗುವುದೆಂಬ ಭಯವೇ?" ಎಂದು ಪ್ರಶ್ನೆ ಮಾಡಿದೆ.

ದೇವೇಗೌಡರಿಗೆ ಗೌರವ ಕೊಡುವುದು
ಬಿಜೆಪಿ ಮತ್ತೊಂದು ಟ್ವೀಟ್‌ನಲ್ಲಿ "ಅಪ್ಪಟ ಕನ್ನಡಿಗ, ಮಾಜಿ ಪ್ರಧಾನಿ ದೇವೇಗೌಡರಿಗೆ ಹೇಗೆ ಗೌರವಿಸಬೇಕು ಎಂಬುದನ್ನು ಕುಮಾರಸ್ವಾಮಿ ಅವರು ಬಿಜೆಪಿಯನ್ನು ನೋಡಿ ಕಲಿಯಬೇಕು. ನಿಮ್ಮ ರಾಜಕೀಯದ ಆಸೆಗಾಗಿ ಕೆಲ ಕಾಲ ತಂದೆಯನ್ನೇ ದೂರವಿಟ್ಟ ಅವಕಾಶವಾದಿಯಲ್ಲವೇ ನೀವು? ಕನ್ನಡಿಗರನ್ನು ನೀವು ನಡೆಸಿಕೊಂಡಿದ್ದಕ್ಕಿಂತಲೂ ಗೌರವಯುತವಾಗಿ ಬಿಜೆಪಿ ನಡೆಸಿಕೊಳ್ಳುತ್ತಿದೆ ಎಂಬುದು ನೆನಪಿರಲಿ" ಎಂದು ಹೇಳಿದೆ.

ಎಚ್. ಡಿ. ಕುಮಾರಸ್ವಾಮಿ ಟ್ವೀಟ್
"ನೆಲ, ಜಲ, ನುಡಿಯ ಬಗ್ಗೆ ಕನ್ನಡ ಮತ್ತು ಕರ್ನಾಟಕದ ಮೇಲೆ ಸದಾ ಪ್ರಹಾರ ನಡೆಸುತ್ತಿರುವ ಬಿಜೆಪಿ ಕನ್ನಡಿಗರ ವಿರುದ್ಧ ತನ್ನ ರಕ್ಕಸ ನೀತಿಗಳನ್ನು ಮುಂದುವರಿಸಿದೆ. ಈಗ ಕರ್ನಾಟಕದ ಹಾಲಿನಲ್ಲೂ ಗುಜರಾತಿನ ಹುಳಿ ಹಿಂಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಟಿದ್ದಾರೆ. ಅಮುಲ್ ಜತೆ ನಂದಿನಿ ವಿಲೀನ ಸಾಧ್ಯವಿಲ್ಲ. ನಮ್ಮ ರೈತರ ಅನ್ನ ಕಸಿಯುವ ಕೆಲಸವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೆಎಂಎಫ್ ಕನ್ನಡಿಗರ ಜೀವನಾಡಿ ಮಾತ್ರವಲ್ಲ, ಸಮಸ್ತ ಕನ್ನಡಿಗರ ಆಸ್ತಿ ಮತ್ತು ಅಸ್ಮಿತೆ. ಅಮಿತ್ ಶಾ ಅವರು ಇದೆಲ್ಲವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು" ಎಂದು ಟ್ವೀಟ್ ಮಾಡಿದ್ದರು.

ಮುಖ್ಯಮಂತ್ರಿಗಳ ಹೇಳಿಕೆ
ಅಮುಲ್, ಕೆಎಂಎಫ್ ವಿಲೀನದ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕೆಎಂಎಫ್ ಅನ್ನು ಅಮುಲ್ ಜೊತೆ ವಿಲೀನ ಮಾಡುತ್ತಾರೆ ಎಂಬುದು ತಪ್ಪು ಕಲ್ಪನೆ. ಊಹೆ ಮಾಡಿ ಯಾರೂ ಟೀಕೆ ಮಾಡಬಾರದು. ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ" ಎಂದು ಸ್ಪಷ್ಟಪಡಿಸಿದ್ದರು.
"ನಂದಿನಿ ಮತ್ತು ಅಮುಲ್ ತಾಂತ್ರಿಕವಾಗಿ ಮಾರುಕಟ್ಟೆಯಲ್ಲಿ ಪರಸ್ಪರ ಸಹಕಾರ ಪಡೆಯಬೇಕು. ಈ ವಿಷಯದಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮಾತನಾಡಿರುವುದು ಸ್ಪಷ್ಟವಾಗಿದೆ" ಎಂದು ಹೇಳಿದ್ದರು.












Click it and Unblock the Notifications