BJP-KRPP: ಬಿಜೆಪಿಗೆ ಗಾಲಿ ಜನಾರ್ಧನ್ ರೆಡ್ಡಿ ಕರೆತರಲು ತೆರೆಮರೆಯಲ್ಲಿ ಕಸರತ್ತು?
ಬೆಂಗಳೂರು, ನವೆಂಬರ್ 19: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಂತರದಿಂದ ಸೋತ ಬಿಜೆಪಿ ಪಕ್ಷವು ಮುಂದೆ ಎದುರಾಗಲಿರುವ ಲೋಕಸಭಾ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಗೆಲ್ಲಲು ತಂತ್ರಗಾರಿಕೆ ಹೆಣೆಯತ್ತಿದೆ. ಇದರ ಭಾಗವಾಗಿಯೇ KRPP ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸರ್ವ ಯತ್ನಗಳು ನಡೆಯುತ್ತಿವೆ.
ಹೌದು, ಇತ್ತೀಚೆಗಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಕಟ್ಟಿ ಚುನಾವಣೆಯಲ್ಲಿ ಗೆದ್ದ ಗಾಲಿ ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆತರುವ ಮೂಲಕ ಮುಂದಿನ ಚುನಾವಣೆಗಳಲ್ಲಿ ಸ್ಥಾನ ಕೈತಪ್ಪದಂತೆ ಬಿಜೆಪಿ ಯೋಚಿಸಿದೆ. ಇದರಿಂದ ಕಾಂಗ್ರೆಸ್‌ಗು ತಕ್ಕ ಉತ್ತರ ನೀಡಿದಂತಾಗುತ್ತದೆ ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.

ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ದಶಕದಿಂದಲೂ ರಾಜಕೀಯದಿಂದ ದೂರ ಉಳಿದಿದ್ದ ಗಾಲಿ ಜನಾರ್ಧನ್ ರೆಡ್ಡಿ ಇದೇ 2023ರ ಚುನಾವಣೆ ವೇಳೆ ಸ್ವಂತ ಪಕ್ಷ ಕೆಆರ್‌ಪಿಪಿ ಕಟ್ಟುವ ಮೂಲಕ ಕಲ್ಯಾಣ ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳಿಗೆ ಠಕ್ಕರ್ ಕೊಟ್ಟಿದ್ದರು.
ಬಿಜೆಪಿಯಿಂದ ಎಚ್ಚರಿಕೆ ಹೆಜ್ಜೆ
ಅಲ್ಲದೇ ರಾಜ್ಯದ ವಿವಿಧ ಕಡೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರ ರಾಜಕೀಯ ಪ್ರವೇಶ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ರೆಡ್ಡಿಯವರ ಈ ನಡೆಯಿಂದ ಬಿಜೆಪಿಗೆ ಕಲ್ಯಾಣ ಕರ್ನಾಟಕದಲ್ಲಿ ಸವಾಲುಗಳು ಸೃಷ್ಟಿಯಾದವು. ಮತಗಳು ಒಡೆದು ಹೋಗುವ ಜೊತೆಗೆ ಕ್ಷೇತ್ರಗಳು ಕೈತಪ್ಪುವ ಭೀತಿ ಎದುರಾಗಿತ್ತು.
ಇದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸ್ಪರ್ಧಿಸಿ ಕೆಆರ್‌ಪಿಪಿಯಿಂದ ರೆಡ್ಡಿಯವರು ಮಾತ್ರವೇ ಗೆದ್ದರು. ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಗೆ ವಿರುದ್ಧ ಪತ್ನ ಲಕ್ಷ್ಮೀ ಅರುಣಾ ಅವರನ್ನು ಅಖಾಡಕ್ಕಿಳಿಸಿ ಬಿಜೆಪಿಗೆ ಸೆಡ್ಡು ಹೊಡೆದಿದ್ದರು. ಇದೆಲ್ಲ ಗಮನಿಸಿರುವ ಬಿಜೆಪಿ ಮುಂದೆ ಹೀಗಾಗದಂತೆ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಕೆಆರ್‌ಪಿಪಿ ಸಂಸ್ಥಾಪಕರನ್ನು ಕರೆತರಲು ಕೇಂದ್ರ ವರಿಷ್ಠರ ಜೊತೆಗೆ ರಾಜ್ಯ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ರೆಡ್ಡಿ ಬಿಜೆಪಿ ಸೇರ್ಪಡೆಯ ಲಾಭ-ನಷ್ಟದ ಲೆಕ್ಕಾಚಾರ?
ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆತಂದರೆ ಪಕ್ಷದ ಮುಂದಿನ ಸವಾಲುಗಳು ಏನು?, ಇದರಿಂದ ಸ್ಥಳೀಯ ಮಟ್ಟದಲ್ಲಿ ಆಗುವ ಲಾಭಗಳು ಕುರಿತು ಚರ್ಚೆ ನಡೆಸಲಾಗಿದೆ. ಸದ್ಯ ರಾಜಕೀಯ ವಲಯದಲ್ಲಿ ಈ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ರೆಡ್ಡಿಯನ್ನು ಕರೆತರುವ ಮೂಲಕ ಲೋಕಸಭಾ ಚುನಾವಣೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಮುಂದಾಗಿದೆ. ಇದರೊಂದಿಗೆ ನಂತರ ಬರಲಿರುವ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಪದವಿಧರರ ಕ್ಷೇತ್ರದ ಚುನಾವಣೆಗಳಲ್ಲಿ ಸೀಟು ಭದ್ರಪಡಿಸಿಕೊಳ್ಳಲು, ತಮ್ಮ ಮತ ಬ್ಯಾಂಕ್ ಕೈತಪ್ಪದಂತೆ ರಣತಂತ್ರ ಹೆಣೆಯುತ್ತಿದೆ. ಸದ್ಯ ಈ ಕುರಿತು ಎಲ್ಲವು ಅಂತಿಮಗೊಳ್ಳಬೇಕಿದೆ.
ಕೆಆರ್‌ಪಿಪಿ ಕಾರ್ಯಕರ್ತರ ಗತಿ ಏನು?
ಇನ್ನೊಂದು ಸಮಸ್ಯೆ ಎಂದರೆ ಒಂದು ಗಾಲಿ ಜನಾರ್ಧನ್ ರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾದರೆ, ಇತ್ತೀಚೆಗೆಷ್ಟೇ ರಚನೆಯಾದ ಜಿಲ್ಲಾಮಟ್ಟದ ಘಟಕ, ಅಧ್ಯಕ್ಷರು ಮತ್ತು ಕಾರ್ಯಕರ್ತರ ಗತಿ ಏನು. ಸಂಸ್ಥಾಪಕರನ್ನೇ ನಂಬಿ ಬಂದ ಅವರು ಬಿಜೆಪಿ ವಿರುದ್ಧ ಸೆಣಸಿ ತಮ್ಮ ಅಭ್ಯರ್ಥಿ ಗೆಲ್ಲಿಸುವಲ್ಲಿ ಶ್ರಮಿಸಿದ್ದಾರೆ. ಮುಂದೆ ಅವರ ನಡೆ ಹೇಗಿರಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.












Click it and Unblock the Notifications