'ಸಿದ್ದರಾಮಯ್ಯಗೆ ಕೇಸರಿ ಕಂಡರೆ ಆಗಲ್ಲ, ಹಿಂದೂ ಕಾರ್ಯಕರ್ತರು ಭಯ ಪಡುವ ಅವಶ್ಯಕತೆ ಇಲ್ಲ'
ಮಂಡ್ಯ, ಸೆಪ್ಟೆಂಬರ್ 11: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರ ಹೇಳಿಕೆ ಗಮನಿಸಿದರೆ ಇವರು ಹಿಂದೂಗಳ ಮತ ಪಡೆಯದೇ ಅಧಿಕಾರಕ್ಕೆ ಬಂದಂತೆ ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೇಸರಿ ಕಂಡರೆ ಆಗುವುದಿಲ್ಲ, ಇವರ ನಡವಳಿಕೆಯೂ ಕುಮ್ಮಕ್ಕನ್ನು ನೀಡುತ್ತಿದೆ. ಹಿಂದೂ ಕಾರ್ಯಕರ್ತರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದರು.
ದೇಶದ್ರೋಹಿಗಳು, ಕೆಲವರಲ್ಲಿರುವ ಜಿಹಾದಿ ಮಾನಸಿಕ ಸ್ಥಿತಿ ಏನಿದೆಯೋ ಅವರಿಗೂ ಇದೇ ಕಾರಣಕ್ಕಾಗಿ ಧೈರ್ಯ ಬಂದಿದೆ ಎಂದು ಆರೋಪಿಸಿದರು. ಮದ್ದೂರು ಗಲಭೆಗೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ ಹೊರಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳ ಹೇಳಿಕೆ, ಭದ್ರಾವತಿ ಶಾಸಕರ ಹೇಳಿಕೆ- ಇವೆಲ್ಲವುಗಳ ಮೂಲಕ ರಾಜ್ಯ ಸರಕಾರದ ಕಡೆಯಿಂದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಆಗುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಪೊಲೀಸ್ ವೈಫಲ್ಯ ಮೊದಲಾದವು ಬಹಿರಂಗವಾಗಲಿ; ಇದಕ್ಕಾಗಿ ಮದ್ದೂರು ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು. ವಿಪಕ್ಷ ನಾಯಕರು, ಪ್ರಮುಖರು ಎಲ್ಲರೂ ಚರ್ಚೆ ಮಾಡಿದ್ದೇವೆ. ಮೆರವಣಿಗೆಯಲ್ಲಿ ನಾವೂ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದರು. ಹಿಂದೂ ಸಂಘಟನೆಗಳು, ಕಾರ್ಯಕರ್ತರಿಗೆ ಧೈರ್ಯ ತುಂಬುತ್ತೇವೆ ಎಂದು ಹೇಳಿದರು. ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಬಿಜೆಪಿಯವರು ಕೋಮು ಸೌಹಾರ್ದ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಹೇಳಿಕೆ ನೀಡಿದ್ದಾರೆ. ಯಾವಾಗ ಮಸೀದಿ ಒಳಗೆ ತೆರಳಿ ಕಲ್ಲನ್ನು ಹಿಡಿದಿದ್ದರೋ ಆ ಷಡ್ಯಂತ್ರ ರೂಪಿಸಿದಾಗಲೇ ಇವರು ಎಚ್ಚೆತ್ತುಕೊಳ್ಳಬೇಕಿತ್ತು. ಈಗ ನಮ್ಮ ಮೇಲೆ, ಹಿಂದೂಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನು ಮುಖ್ಯಮಂತ್ರಿಗಳು ರಾಜಕಾರಣ ಎಂದಾದರೂ ಅಂದುಕೊಳ್ಳಲಿ. ಇನ್ನೇನಾದರೂ ಅಂದುಕೊಳ್ಳಲಿ. ನಮ್ಮ ಕರ್ತವ್ಯ ಮಾಡಲಿದ್ದೇವೆ.
ಸರಕಾರಕ್ಕೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ, ಮಸೀದಿ ಒಳಗೆ ಕಲ್ಲು ಶೇಖರಿಸಿ ಬಿಸಾಡಿದ ಹಾಗೂ ಗೂಂಡಾವರ್ತನೆ ಪ್ರಾರಂಭಿಸಿದ ದೇಶದ್ರೋಹಿಗಳ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕು. ಅವರನ್ನು ಒದ್ದು ಒಳಗೆ ಹಾಕಲಿ. ಸುಮ್ಮನೆ ಅಮಾಯಕ ಹಿಂದೂ ಮಹಿಳೆಯರ ಮೇಲೆ ಎಫ್‍ಐಆರ್ ದಾಖಲಿಸಿ, ಹಿಂದೂ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಎಂದು ಬಿ ವೈ ವಿಜಯೇಂದ್ರ ಹೇಳಿದರು.
ಪೊಲೀಸರು ಮುಂಜಾಗ್ರತೆ ಕೈಗೊಳ್ಳದ ಪರಿಣಾಮವಾಗಿಯೇ ಈ ಬೆಳವಣಿಗೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು, ಸಣ್ಣಪುಟ್ಟ ಘಟನೆ ಎಂದಿರುವ ಗೃಹ ಸಚಿವರು ತಮ್ಮ ಸ್ಥಾನಕ್ಕೆ ಕಿಂಚಿತ್ತಾದರೂ ಗೌರವ ಇದ್ದರೆ ಮದ್ದೂರಿಗೆ ಬರಲಿ ಎಂದು ಆಗ್ರಹಿಸಿದರು. ನಿಮ್ಮ ಆಡಳಿತ ಪಕ್ಷದ ಶಾಸಕರು ಪಾಪ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು. ಅವರಿಗೆ ಇಂಥ ಸಂದರ್ಭದಲ್ಲಿ ಅವರ ಮೋಜೇ ಹೆಚ್ಚಾಗಿದೆ ಹೊರತು ಕಾನೂನು- ಸುವ್ಯವಸ್ಥೆ ಕಾಪಾಡುವ ಕಡೆ ಶಾಸಕರು ಗಮನಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದೂ ಕಾರ್ಯಕರ್ತರು ಭಯ ಪಡುವ ಅವಶ್ಯಕತೆ ಇಲ್ಲ. ಬಿಜೆಪಿ ಮಾತ್ರವಲ್ಲ, ಜೆಡಿಎಸ್‍ನವರೂ ಇಲ್ಲಿ ಬಂದಿದ್ದಾರೆ. ಪಕ್ಷಾತೀತವಾಗಿ ನಾವೆಲ್ಲರೂ ಹಿಂದೂ ಸಂಘಟನೆ- ಕಾರ್ಯಕರ್ತರ ಪರವಾಗಿದ್ದೇವೆ. ರಾಜ್ಯ ಸರಕಾರವು ಹುಡುಗಾಟಿಕೆ ಮಾಡುವುದನ್ನು ಬಿಟ್ಟು ಅಯೋಗ್ಯರನ್ನು ಒದ್ದು ಒಳಗೆ ಹಾಕಲಿ. ಹಿಂದೂ ಸಂಘಟನೆ- ಕಾರ್ಯಕರ್ತರನ್ನು ಮುಟ್ಟದಿರಿ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications