Budget 2024: ಕೃಷಿಗೆ 1.52 ಲಕ್ಷ ಕೋಟಿ ರೂ ಅನುದಾನ: ಕೇಂದ್ರ ಬಜೆಟ್‌ಗೆ ವಿಜಯೇಂದ್ರ ಮೆಚ್ಚುಗೆ
ಬೆಂಗಳೂರು, ಜುಲೈ 23: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಗಳವಾರ ಲೋಕಸಭೆಯಲ್ಲಿ 2024-25ನೇ ಹಣಕಾಸು ವರ್ಷದ ಮೋದಿ 3.0 ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಮಹತ್ವದ ಯೋಜನೆಗಳಿಗೆ ಹಾಗೂ ಸಾಮಾನ್ಯ ವರ್ಗಕ್ಕೆ ಹೆಚ್ಚುನ ಅನುದಾನವನ್ನು ನೀಡಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಲೋಕಸಭೆಯಲ್ಲಿ ಇಂದು ಮಂಡಿಸಲಾದ 2024-25ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲಿಡುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದ ವಿಕಸಿತ ಭಾರತದ ನಿರ್ಮಾಣಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ.

ದೇಶದ ಅರ್ಥ ವ್ಯವಸ್ಥೆಗೆ ಶರವೇಗ ನೀಡುವ ನಿಟ್ಟಿನಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಹಣದುಬ್ಬರವನ್ನು ನಿಯಂತ್ರಿಸಲಿದ್ದು ಬಡತನ ನಿರ್ಮೂಲನೆ, ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ ಮೀಸಲಿರಿಸಿ, ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ ಅನುದಾನ ನೀಡುವ ಮೂಲಕ ರೈತರ ಏಳಿಗೆಗೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿರುವುದು ರೈತರು ಹಾಗೂ ಸ್ತ್ರೀ ಕುಲದ ಬಗೆಗಿನ ಅದಮ್ಯ ವಿಶ್ವಾಸವನ್ನು ಸಂಕೇತಿಸಿದೆ.
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ಹಾಗೂ ಉದ್ಯಮಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡುವ ಮೂಲಕ ಯುವ ಸಮುದಾಯದಕ್ಕೆ ಸ್ವಾವಲಂಬಿ ಹಾಗೂ ಉದ್ಯೋಗ ಸೃಷ್ಟಿಗೆ ಬೃಹತ್ ಪ್ರಮಾಣದಲ್ಲಿ ಉತ್ತೇಜನ ನೀಡಲು ಮನ್ನಣೆ ದೊರಕಿರುವುದು ನಿಜಕ್ಕೂ ಪ್ರಶಂಸನೀಯ ಹೆಜ್ಜೆಯಾಗಿದೆ.

ಅಂತೆಯೇ ಭಾರತದ ಆರ್ಥಿಕ ಸಂಪನ್ಮೂಲ ಕ್ರೂಡೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ತೆರಿಗೆದಾರನಿಗೆ ಹೊರೆಯಾಗದಂತೆ ವಿತ್ತ ಸಚಿವರು ಎಚ್ಚರವಹಿಸಿ ಜಾಣ್ಮೆತೋರಿದ್ದಾರೆ. ಉಚಿತ ಪಡಿತರ ಯೋಜನೆ 2029ರ ವರೆಗೆ ಮುಂದುವರೆಸಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ ಮಾಡುವ ಮೂಲಕ ಬಡವರ ಬಗೆಗಿನ ಕಾಳಜಿಯಲ್ಲಿ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ರವಾನಿಸಲಾಗಿದೆ. ಸತತ 7ನೇ ಬಾರಿಗೆ ಅತ್ಯುತ್ತಮ ಹಾಗೂ ಪ್ರಗತಿದಾಯಕ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯದ ಜನತೆಯ ಪರವಾಗಿ ಅಭಿನಂದಿಸುವೆ ಎಂದರು.












Click it and Unblock the Notifications