ಮಳೆಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಮೊಟಕು: ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 21: ಕಳೆದ ಬಾರಿ ಕೈಕೊಟ್ಟಿದ್ದ ವರುಣ ಈ ಬಾರಿ ರಾಜ್ಯಾದ್ಯಂತ ಅಬ್ಬರಿಸಿದ್ದಾನೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಈ ವರ್ಷದ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡು ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಪರಿಹಾರವನ್ನು ಮೊಟಕುಗೊಳಿಸಿ ಹೊಸ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಈ ನಡೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಖಂಡಿಸಿದ್ದಾರೆ. ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾದ ವ್ಯಕ್ತಿಗೆ 15 ಲಕ್ಷ ರೂಪಾಯಿ ಪರಿಹಾರ. ಹಾಗೂ ಭೂಕುಸಿತ ಸಂತ್ರಸ್ತರಿಗೆ 100 ಮನೆಗಳ ಭರವಸೆ ನೀಡುವ ರಾಜ್ಯದ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತ ಜನರಿಗೆ ನಿಗದಿಯಾಗಿದ್ದ 5 ಲಕ್ಷ ರೂಗಳ ಪರಿಹಾರ ಮೊತ್ತವನ್ನು 2.4 ಲಕ್ಷಕ್ಕೆ ಕಡಿತಗೊಳಿಸುವ ಮೂಲಕ ರಾಜ್ಯದ ಜನರ ಹಿತವನ್ನು ಬದಿಗೆ ಸರಿಸಿ 'ಕೈ ಹೈಕಮಾಂಡ್' ಅಣತೆಯಂತೆ ನಡೆಯುವ ಸರ್ಕಾರ ಎನ್ನುವುದು ಸಾಬೀತಾಗಿದೆ ಎಂದಿದ್ದಾರೆ.

ನಿರಂತರ ಸುರಿಯುತ್ತಿರುವ ರಣಮಳೆಯಿಂದ ರಾಜ್ಯದ ಹಲವೆಡೆಗಳಲ್ಲಿ ಗುಡ್ಡಗಳು ಕುಸಿದು, ಕೆರೆ-ಕಟ್ಟೆಗಳು ಒಡೆದು ಸಾವು ನೋವುಗಳು ಸಂಭವಿಸುತ್ತಿವೆ, ಅನೇಕ ಕಡೆಗಳಲ್ಲಿ ಜನ ತಮ್ಮ ಮನೆ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಹೊತ್ತಿನಲ್ಲಿ ನಿಗದಿತ ಪರಿಹಾರ ಮೊತ್ತವನ್ನೂ ಕಡಿತಗೊಳಿಸಿ ನೆರೆ ರಾಜ್ಯದ ಜನರ ಮೇಲೆ ಪ್ರೇಮ ಕನ್ನಡಿಗರಿಗೆ ಮಾತ್ರ ದ್ರೋಹ ಬಗೆಯುವ 'ಕೈ' ಸರ್ಕಾರದ ಇಬ್ಬಗೆ ನೀತಿ ಬಯಲಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರದ (2020ರ) ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಏಕಾಂಗಿಯಾಗಿ ನಿಂತು ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ನೆರೆ ಹಾವಳಿಯಿಂದ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದ ಜನರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಪ್ರಾಕೃತಿಕ ವಿಕೋಪಗಳಿಗೆ ನಿಗದಿಯಾಗಿದ್ದ ಪರಿಹಾರದ ಮೊತ್ತದ ಮಿತಿಯನ್ನು ಬದಿಗೆ ಸರಿಸಿದ್ದರು.
ಈ ಸಮಯದಲ್ಲಿ ಆಶ್ರಯವಿಲ್ಲದೆ ಪರಿತಪಿಸುತ್ತಿದ್ದ ಸಂತ್ರಸ್ತ ಜನರಿಗೆ ತುರ್ತಾಗಿ ಮನೆ ಪುನರ್ ನಿರ್ಮಿಸಿಕೊಳ್ಳಲು 3 ಲಕ್ಷದ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಏರಿಸಿ ಜಖಂಗೊಂಡ ಮನೆಗಳಿಗೆ 40 ಸಾವಿರದಿಂದ ಒಂದು ಲಕ್ಷ ರೂಪಾಯಗಳಿಗೆ ಏರಿಸಿ ಪರಿಹಾರವನ್ನು ವಿತರಿಸಿದ್ದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಅದೇ ಮಾದರಿಯಲ್ಲಿ ಹೆಚ್ಚಿನ ಪರಿಹಾರವನ್ನು ರಾಜ್ಯದ ಸಂಕಷ್ಟಿತರಿಗೆ ತತ್ ಕ್ಷಣದಲ್ಲಿ ವಿತರಿಸಿ ಜನರ ನೆರವಿಗೆ ಧಾವಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications