Yatnal: ಯತ್ನಾಳ್ ರೆಬೆಲ್ ಟೀಂ ಸಭೆಯಲ್ಲಿ ಚರ್ಚೆಯಾಗಿದ್ದೇನು?
ರಾಜ್ಯ ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ರೆಬೆಲ್ ಬಣವು ನಿನ್ನೆ ಸಭೆ ಸೇರುವ ಮೂಲಕ ಮಹತ್ವದ ಚರ್ಚೆ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ, ವಿಜಯೇಂದ್ರ ವಿರುದ್ಧ ರಣತಂತ್ರ, ರಾಜ್ಯಾಧ್ಯಕ್ಷ ಹುದ್ದೆಗೆ ಸ್ಪರ್ಧೆ ಮಾಡಲಿರುವ ಅಭ್ಯರ್ಥಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಭಾರಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಈ ಸಭೆಯಲ್ಲಿ ಏನೆಲ್ಲ ಚರ್ಚೆಯಾಯಿತು ಎನ್ನುವ ಇನ್‌ಸೈಡ್ ಸ್ಟೋರಿ ಇಲ್ಲಿದೆ.
ಈ ಸಭೆಯಲ್ಲಿ ಮುಖ್ಯವಾಗಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ಯಾರನ್ನು ಸ್ಪರ್ಧೆಗೆ ಇಳಿಸಬೇಕು ಎಂಬುದರ ಕುರಿತಾಗಿ ಎಲ್ಲ ಅಭಿಪ್ರಾಯ ವ್ಯಕ್ತವಾಗಿ ಒಮ್ಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೈಮಾಂಡ್ ಶೋಕಾಸ್ ನೀಡಿದ ವಿಚಾರದ ಬಗ್ಗೆಯೂ ಸಭೆಯಲ್ಲಿ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಶಿವರಾಜ್ ಸಿಂಗ್ ಚೌಹಣ್ ಅವರು ರಾಜ್ಯಕ್ಕೆ ಆಗಮಿಸಿ ಚುನಾವಣೆ ಪ್ರಕ್ರಿಯೆ ನಡೆಸುವುದಾದರೆ ಯತ್ನಾಳ್ ಬಣದಿಂದ ನಾಮಪತ್ರ ಸಲ್ಲಿಸಲು ಮುಂದಾಗಲಿದೆ. ಈಗಾಗಲೇ ವಕ್ಫ್ ವಿಚಾರವಾಗಿ ಯತ್ನಾಳ್ ಬಣವು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟದ ಮೂಲಕ ಗಮನ ಸೆಳೆದಿದ್ದು, ಇದೇ ರೀತಿ ಮತ್ತೊಂದು ಹೋರಾಟ ಸಂಘಟಿಸಲು ಕೂಡ ಈ ಟೀಂ ಪ್ಲ್ಯಾನ್ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಸದ್ಯ ರಾಜ್ಯ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ವಿಚಾರವಾಗಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಯತ್ನಾಳ್ ಬಣ ಸಜ್ಜಾಗಿದೆ ಎಂದು ಹೇಳಲಾಗಿದೆ. ಮುಖ್ಯವಾಗಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಏನೆಲ್ಲ ಮಾಡಬಹುದು ಎಂಬ ವಿಚಾರವಾಗಿ ಬಣದ ನಾಯಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರಂತೆ. ಮುಂದೆ ಹೈಕಮಾಂಡ್ ಜೊತೆಗೆ ಯಾವ ಅಂಶಗಳನ್ನು ಪ್ರಸ್ತಾಪಿಸಿ, ವಿಜಯೇಂದ್ರ ಅವರ ಸ್ಥಾನ ಖಾಲಿ ಮಾಡಿಸಬೇಕು ಎಂದೂ ತಂತ್ರಗಾರಿಕೆ ರೂಪಿಸಲಾಗಿದೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸೇರಿದ್ದ ಸಭೆಯಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಂಸದ ಪ್ರತಾಪ್ ಸಿಂಹ, ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಸಭೆ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ನಾವೆಲ್ಲ ಸೇರಿ ಒಂದು ಕಪ್ ಕಾಫಿ ಕುಡಿದೆವು ಅಷ್ಟೇ. ಹಾಗೆಯೇ ಮುಂದಿನ ಹೋರಾಟ ಬಗ್ಗೆಯೂ ಚರ್ಚೆ ಮಾಡಿದೆವು. ಇಂದಿನ ಸಭೆಯಲ್ಲಿ ಆಗಿದ್ದು ಇಷ್ಟೇ ಬೇರೇನೂ ಇಲ್ಲ. ನಮ್ಮ ವಕ್ಫ್ ಹೋರಾಟ ಯಶಸ್ವಿಯಾಗಿದೆ ಎಂದು ಹೈಕಮಾಂಡ್ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಾಗಿ ಒಂದು ಸಣ್ಣ ಸಭೆ ಸೇರಿದ್ದೇವೆ ಅಷ್ಟೇ ಎಂದಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳನ್ನ ಪಟ್ಟಿ ಮಾಡ್ಕೊಂಡು ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಯತ್ನಾಳ್ ಅವರು ಮಾತನಾಡಿದ್ದಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ. ಏಕೆಂದರೆ ನಾನು ರಾಜ್ಯಾಧ್ಯಕ್ಷ, ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ. ನಾನೇ ಸಮಯ ಬಂದಾಗ ಅವರ ಪ್ರಶ್ನೆಗಳಿಗೆ ಉತ್ತರ ಕೊಡುವೆ ಎಂದು ಹೇಳಿದ್ದಾರೆ.












Click it and Unblock the Notifications