KMF: ಏಕಾಏಕಿ ಕೆಎಂಎಫ್ ಎಂಡಿ ವರ್ಗಾವಣೆ; ಸರ್ಕಾರದ ವಿರುದ್ಧ ಕನ್ನಡಿಗರ ಆಕ್ರೋಶ
ಕೆಎಂಎಫ್ ಕನ್ನಡಿಗರ ಹೆಮ್ಮೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಮುಲ್ ಜೊತೆ ವಿಲೀನ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಾಗ ಕನ್ನಡಿಗರು ಒಗ್ಗಟ್ಟಾಗಿ ವಿರೋಧಿಸಿದ್ದರು. ಕಾಂಗ್ರೆಸ್ ಕೂಡ ಹೋರಾಟ ನಡೆಸಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕೆಎಂಎಫ್ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿತ್ತು, ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಮೂಲಕ ಲಾಭದತ್ತ ಮುನ್ನಡೆಯುತ್ತಿತ್ತು. ಹೀಗಿರುವಾಗಲೇ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ.
ಎಂ.ಕೆ. ಜಗದೀಶ್ ಕೆಎಂಎಫ್ ಮಾರುಕಟ್ಟೆ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐರ್ಲೆಂಡ್, ಸ್ಕಾಟ್ಲಾಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡುವುದು, ಐಎಸ್‌ಎಲ್‌ನಲ್ಲಿ ಬಿಎಫ್‌ಸಿ ತಂಡಕ್ಕೆ, ಪ್ರೊ ಕಬ್ಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಪ್ರಾಯೋಜತ್ವ ನೀಡಿ ಸದ್ದು ಮಾಡಿತ್ತು.

ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಲ್ಲದೆ ದುಬೈ, ಅಮೆರಿಕ ಸೇರಿದಂತೆ ವಿಶ್ವದ ಹಲವು ಕಡೆ ನಂದಿನಿ ಉತ್ಪನ್ನ ಸಿಗುವಂತೆ ಮಾಡುವ ಗುರಿ ಹೊಂದಿತ್ತು, ತಿರುಪತಿ ಪ್ರಸಾದಕ್ಕೆ ಮತ್ತೆ ನಂದಿನಿ ತುಪ್ಪ ಪೂರೈಸುವ ಒಪ್ಪಂದ ಪಡೆದುಕೊಂಡಿದ್ದು ದೊಡ್ಡ ಗೆಲುವಾಗಿತ್ತು. ಇದೆಲ್ಲದರ ಹಿಂದೆ ಕೆಲಸ ಮಾಡಿದ್ದು ಎಂಡಿ ಎಂ.ಕೆ. ಜಗದೀಶ್, ಈಗ ನಂದಿನಿಯ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ತರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಈ ಬೆನ್ನಲ್ಲೇ ಅವರನ್ನು ಸ್ಥಳ ತೋರಿಸದೆ ಏಕಾಏಕಿ ವರ್ಗಾವಣೆ ಮಾಡಲಾಗಿದೆ.
ಈ ವರ್ಗಾವಣೆ ಹಿಂದೆ ಕೇರಳ ಲಾಭಿ ಕೆಲಸ ಮಾಡಿದೆ ಎನ್ನುವ ಅನುಮಾನ ಕೂಡ ಇದೆ. ಕೆಲವು ಖಾಸಗಿ ಕಂಪನಿಗಳು ನಂದಿನಿ ಇಡ್ಲಿ, ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬರದಂತೆ ತಡೆಯಲು ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ.
ಕನ್ನಡಿಗರ ಆಕ್ರೋಶ
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ವರ್ಗಾವಣೆ ಮಾಡಿರುವುದಕ್ಕೆ ಕನ್ನಡಿಗರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸರ್ಕಾರಕ್ಕೆ ಕೆಎಂಎಫ್ ಬಗ್ಗೆ ಕಾಳಜಿ ಇದ್ದರೆ ಕೂಡಲೇ ವರ್ಗಾವಣೆ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬೇಡಿಕೆ ಇರುವ ರೆಡಿ ಮೇಡ್ ಇಡ್ಲಿ, ದೋಸೆ ಹಿಟ್ಟು, ವೇ ಪ್ರೋಟೀನ್ ಸೇರಿದಂತೆ ಅನೇಕ ಹೊಸ ಉತ್ಪನ್ನಗಳ ಮೂಲಕ 'ನಂದಿನಿ' ಬ್ರ್ಯಾಂಡ್ ನ ಮಾರುಕಟ್ಟೆ ವಿಸ್ತರಿಸಲು ಅತ್ಯಂತ ಉತ್ಸಾಹ ಮತ್ತು ಬದ್ಧತೆ ತೋರಿದ್ದ ದಕ್ಷ ಅಧಿಕಾರಿ ಕೆಎಂಎಫ್ ಎಂಡಿ ಎಂ.ಕೆ.ಜಗದೀಶ್ ಅವರನ್ನ ದಿಢೀರನೆ ವರ್ಗಾವಣೆ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಸರ್ಕಾರದ ನಿರ್ಧಾರದ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆಯಾ? ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಪರಿಚಯಿಸಲು ಹೊರಟಿದ್ದ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರದಂತೆ ಖಾಸಗಿ ಕಂಪನಿಗಳ ಲಾಭಿಗೆ ಸರ್ಕಾರ ಮಣಿದಿದೆಯಾ? ಎನ್ನುವ ಪ್ರಶ್ನೆಗಳನ್ನು ಎತ್ತಿರುವ ಅವರು, ಸಹಕಾರ ಸಚಿವ ರಾಜಣ್ಣ ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದು, ನಂದಿನಿಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಕೆಎಂಎಫ್ ಎಂಡಿ ಎಂಕೆ ಜಗದೀಶ್, ಇಡ್ಲಿ/ದೋಸೆ ಹಿಟ್ಟಿನಂತಹ ಹೊಸ ಉತ್ಪನ್ನಗಳ ಬಿಡುಗಡೆಗೆ ಮುನ್ನವೇ ವರ್ಗಾವಣೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ. ಅವರ ನಾಯಕತ್ವದಲ್ಲಿ ಸಂಸ್ಥೆಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದರು. ಕೇರಳ ಲಾಬಿಗೆ ಕೈಜೋಡಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಖಾಸಗಿ ಬ್ರಾಂಡ್ ಗಳನ್ನು ರಕ್ಷಿಸಲು ನಂದಿನಿಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ಸಿಕ್ಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications