J.P.Nadda: ರಾಜ್ಯಕ್ಕೆ ಜೆ.ಪಿ.ನಡ್ಡಾ ಆಗಮನ, ಬಿಜೆಪಿಗೆ ಮೇಜರ್ ಸರ್ಜರಿ?
ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯ ಬಿಜೆಪಿಗೆ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಬಂದಿದ್ದರು. ಇದರ ಬೆನ್ನಲ್ಲೇ ನಡ್ಡಾ ಅವರ ಆಗಮನ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಬಿಜೆಪಿಯಲ್ಲಿನ ಬಣ ಬಡಿದಾಟವು ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಈ ಬಗ್ಗೆಯೂ ನಡ್ಡಾ ಅವರು ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವ ಬಿ.ವೈ.ವಿಜಯೇಂದ್ರ ಬಗ್ಗೆಯೂ ಹಲವರು ಅಸಮಾಧಾನ ಹೊರಹಾಕುತ್ತಿದ್ದು, ರಾಜ್ಯಾಧ್ಯಕ್ಷರ ಬದಲಾವಣೆಯ ಕೂಗು ಸಹ ಇದೆ.

ಇವುಗಳ ಬಗ್ಗೆ ಜೆ.ಪಿ.ನಡ್ಡಾ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಿಳಿದ ಜೆ.ಪಿ.ನಡ್ಡಾ ಅವರನ್ನು ವಿಜಯೇಂದ್ರ, ವಿರೋಧ ಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಯುವಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜ್ ಸೇರಿದಂತೆ ಬಿಜೆಪಿ ನಾಯಕರು ಬರಮಾಡಿಕೊಂಡರು. ಬಳಿಕ ಅವರೊಟ್ಟಿಗೆ ಕಾರಿನಲ್ಲಿ ಪ್ರಯಾಣಿಸಿ, ಸುಮಾರು ಗಂಟೆಗಳ ಕಾಲ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ.ನಡ್ಡಾ ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಅಕ್ರಮ, ಅನೀತಿ ಹಾಗೂ ಜನವಿರೋಧಿ ಆಡಳಿತದ ವಿರುದ್ಧ ಹೋರಾಡುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ ಮಾನ್ಯ ನಡ್ಡಾಜೀ ಅವರ ಆಗಮನ ಇನ್ನಷ್ಟು ಚೈತನ್ಯ ತುಂಬಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ನಡ್ಡಾ ಅವರೊಂದಿಗೆ ಬಿಜೆಪಿ ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆಯೂ ನಡ್ಡಾ ಮಾಹಿತಿ ಕೇಳಿದ್ದಾರೆ. ಸದ್ಯ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಪೂರೈಸಲು ಕಾಂಗ್ರೆಸ್ ಒದ್ದಾಡುತ್ತಿದೆ ಎಂದು ನಾಯಕರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಬಸ್ ಪ್ರಯಾಣ ದರವನ್ನು ಏರಿಸುವ ವಿಚಾರವನ್ನು ಕೂಡ ಗಮನಕ್ಕೆ ತಂದಿದ್ದಾರೆ.
ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗ ಮಾಡಲು ಏನೆಲ್ಲ ಮಾಡಬಹುದು? ಇದನ್ನು ಅಸ್ತ್ರವಾಗಿ ಹೇಗೆಲ್ಲ ಬಳಸಿಕೊಳ್ಳಬಹುದು ಎಂಬುದರ ಬಗ್ಗೆಯೂ ಸುದೀರ್ಘ ಚರ್ಚೆ ನಡೆದಿದೆಯಂತೆ. ಇನ್ನು ಮುಖ್ಯವಾಗಿ ಸದ್ಯ ಬಿಜೆಪಿಯಲ್ಲಿ ತಲೆದೂರಿರುವ ಬಣ ಬಡಿದಾಟದ ಬಗ್ಗೆ ಕೂಡ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಬಗ್ಗೆಯೂ ವಿಜಯೇಂದ್ರ ಅವರು ಈಗಾಗಲೇ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದು, ನಡ್ಡಾ ಕೂಡ ಇದಕ್ಕೆ ಬ್ರೇಕ್ ಹಾಕಲು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications