Opposition Leader: ವಿಪಕ್ಷ ನಾಯಕನಾಗಲು ಅಶೋಕ್ ಯೋಗ್ಯರಲ್ಲ: ಬಿಜೆಪಿ ನಾಯಕನಿಂದಲೇ ವಿರೋಧ
ಕರ್ನಾಟಕ ಬಿಜೆಪಿಯಲ್ಲಿ ಈಗ ರಾಜ್ಯಾಧ್ಯಕ್ಷರ ಬದಲಾವಣೆಗೆ ಹಲವು ನಾಯಕರಿಂದ ಒತ್ತಾಯ ಕೇಳಿಬಂದಿದೆ. ಬಿವೈ ವಿಜಯೇಂದ್ರ ಅವರನ್ನು ಕೂಡಲೇ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಿಸುವಂತೆ ಹೈಕಮಾಂಡ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಇದೀಗ ಆರ್.ಅಶೋಕ್ ಅವರ ವಿರೋಧ ನಾಯಕ ಸ್ಥಾನವನ್ನು ಬದಲಾಯಿಸುವ ಬಗ್ಗೆಯೂ ಒತ್ತಾಯ ಕೇಳಿಬಂದಿದೆ. ಸ್ವಪಕ್ಷ ನಾಯಕರಿಂದಲೇ ವಿಪಕ್ಷ ನಾಯಕನಾಗಿ ಅಶೋಕ್ ಮುಂದುವರಿಯಲು ವಿರೋಧ ವ್ಯಕ್ತವಾಗಿದೆ.
ಈ ಹಿಂದೆಯೂ ಬೆಳಗಾವಿ ಅಧಿವೇಶನದ ಸಮಯದಲ್ಲಿ ಅಶೋಕ್ ಅವರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಮರ್ಥರಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಮತ್ತೆ ಅಶೋಕ್ ವಿರುದ್ಧ ಅಪಸ್ವರ ಕೇಳಿಬಂದಿದೆ. ತಮ್ಮದೇ ಪಕ್ಷದ ನಾಯಕರ ಬಾಯಲ್ಲಿ ಈ ಮಾತು ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ. ಇಷ್ಟಕ್ಕೂ ವಿಪಕ್ಷ ನಾಯಕರ ಬದಲಾವಣೆ ಬಗ್ಗೆ ಧ್ವನಿ ಎತ್ತಿರುವ ಬಿಜೆಪಿ ನಾಯಕ ಯಾರು ಗೊತ್ತಾ?

ಬಿಜೆಪಿ ಶಾಸಕರಾಗಿರುವ ಎಸ್.ಟಿ.ಸೋಮಶೇಖರ್ ಅವರು ವಿರೋಧ ಪಕ್ಷದ ನಾಯಕರಾಗಿ ಅಶೋಕ್ ಅವರು ಬೇಡ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ರಾಜ್ಯ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಎಸ್‌ಟಿ ಸೋಮಶೇಖರ್, ಬಜೆಟ್ ಬಗ್ಗೆ ಸಂಪೂರ್ಣವಾಗಿ ಯಾವುದೇ ಅಧ್ಯಯನ ಮಾಡದೆ ಕುರಿತು ಹೇಳಿಕೆ ನೀಡಿರುವ ಆರ್. ಅಶೋಕ್ ಅವರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಕೋಲಾಹಲ ಸೃಷ್ಟಿಸಿದೆ.
ಬಿಜೆಪಿಯವರಿಗೆ ಅಧ್ಯಯನದ ಕೊರತೆ ಸಾಕಷ್ಟಿದೆ. ಸುಮಾರು 197 ಪುಟಗಳ ಬಜೆಟ್ ಅನ್ನು ಸಂಪೂರ್ಣವಾಗಿ ಓದಿ ಅದರಲ್ಲಿರುವ ಅಂಶಗಳನ್ನು ಪರಿಶೀಲಿಸದೆ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದವರ ಅಭಿವೃದ್ಧಿ ದೃಷ್ಟಿಯೊಂದಿಗೆ ಈ ಬಜೆಟ್ ಮಂಡಿಸಲಾಗಿದೆ ಎಂದು ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಬಜೆಟ್ ಬಗ್ಗೆ ಸರಿಯಾಗಿ ಅಧ್ಯಯನ ಮಾಡದ ಕಾರಣದಿಂದಲೇ ವಿರೋಧ ಪಕ್ಷದ ಸ್ಥಾನದಲ್ಲಿರುವ ಆರ್.ಅಶೋಕ್ ಅವರು ಈ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಕರೆದಿದ್ದಾರೆ. ಬಿಜೆಪಿಗರಿಗೆ ಜನರ ಭಾವನೆಯನ್ನು ಕೆರಳಿಸುವುದೇ ದೊಡ್ಡ ಕೆಲಸವಾಗಿಬಿಟ್ಟಿದೆ ಎಂದು ತಮ್ಮದೇ ಪಕ್ಷದ ನಾಯಕರ ಬಗ್ಗೆ ದೂರಿದ್ದಾರೆ. ಬಜೆಟ್‌ನಲ್ಲಿ ತಪ್ಪುಗಳಿದ್ದರೆ, ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿರುವವರು ಅದನ್ನು ಸದನ ಮುಂದೆ ಇಡುವ ಮೂಲಕ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ಪಕ್ಕದಲ್ಲಿದ್ದವರು ಯಾರೋ ಬೋಗಸ್ ಬಜೆಟ್ ಅಂದ್ರೂ ಅಂತಾ ಅದನ್ನೇ ರಿಪೀಟ್ ಮಾಡಬಾರದು ಎಂದು ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದು ಅತ್ಯಂತ ನಿರಾಶಾದಾಯಕ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ರಹಿತ ಅಡ್ಡಕಸುಬಿ ಬಜೆಟ್ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದರು. ಸಿದ್ದರಾಮಯ್ಯನವರು ಔಟ್‌ಗೋಯಿಂಗ್ ಸಿಎಂ ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ಗಟ್ಟಿಯಾದ ಅಭಿಪ್ರಾಯ ಮೂಡಿರುವುದರಿಂದ, ಈ ಬಜೆಟ್‌ನಿಂದ ಕನ್ನಡಿಗರಿಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆದರೂ ತಮ್ಮ ಕಡೆಯ ಬಜೆಟ್‌ನಲ್ಲಿ ಒಂದಿಷ್ಟು ಜನಪರ ಯೋಜನೆಗಳನ್ನ ಘೋಷಿಸುತ್ತಾರೆ ಎಂದು ನಿರೀಕ್ಷೆಯಲ್ಲಿದ್ದ ಜನರಿಗೆ ಈ ಬಜೆಟ್ ಸಂಪೂರ್ಣ ನಿರಾಸೆ ಮೂಡಿಸಿದೆ. ಇದು ಕೇವಲ ಬೊಗಳೆರಾಮಯ್ಯ ಬಜೆಟ್ ಎಂದು ವ್ಯಂಗ್ಯವಾಡಿದ್ದರು.












Click it and Unblock the Notifications