ಎಂಪಿ ಆಗೋಕೆ ಬಂದಿದ್ದಾರಾ? ಬೆಂಕಿ ಹಚ್ಚೋಕೆ ಬಂದಿದ್ದಾರಾ?: ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಶಾಸಕ ಕಿಡಿ
ಬೆಂಗಳೂರು, ಮಾರ್ಚ್ 21: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಈಗಾಗಲೇ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳು ಅಂತಿಮವಾಗಿದೆ. ಈ ಪೈಕಿ ಬಿಜೆಪಿಯಲ್ಲಿ ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಉಡುಪಿ-ಚಿಕ್ಕಮಗಳೂರಿನ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲಾಗಿದೆ.
ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿರುವುದು ಬಿಜೆಪಿ ಕೆಲ ನಾಯಕರಲ್ಲಿ ಅಸಮಾಧಾನವಿದ್ದು, ಇದೀಗ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಬಹಿರಂಗವಾಗಿಯೇ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರು ಉತ್ತರದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್, ಇವರು ಎಂಪಿಯಾಗೋಕೆ ಬಂದಿದ್ದಾರಾ? ಇಲ್ಲಾ ಬೆಂಕಿ ಹಚ್ಚೋಕೆ ಬಂದಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಗೆ ನನ್ನ ಕ್ಷೇತ್ರ ಬರುತ್ತದೆ .ಡಿ.ವಿ ಸದಾನಂದ ಗೌಡ ಅವರು 10 ವರ್ಷ ಸಂಸದರಾಗಿದ್ದರು. ಒಂದೇ ಒಂದು ಸಣ್ಣ ವ್ಯತ್ಯಾಸವೂ ಆಗಿರಲಿಲ್ಲ. ಡಿ.ಬಿ.ಚಂದ್ರೇಗೌಡ ಸಂಸದರಾಗಿದ್ದರು. ಆಗಲೂ ಏನೂ ಆಗಿರಲಿಲ್ಲ. ಇದೀಗ ನನ್ನ ಕ್ಷೇತ್ರಕ್ಕೆ ಹೋಗುವುದಕ್ಕೆ ನಾನೇ ಭಯಪಡುತ್ತಿದ್ದೇನೆ. ಕೆಲವು ದಿನಗಳಿಂದ ನಾನೇ ಕ್ಷೇತ್ರಕ್ಕೆ ಹೋಗಲು ಭಯಪಡುವಂತಾಗಿದೆ ಎಂದರು.
ಮಾತು ಮುಂದುವರಿಸಿದ ಅವರು, ಕ್ಷೇತ್ರದಲ್ಲಿ ಯಾರು ಏನು ಮಾತನಾಡ್ತಾರೋ, ಯಾವ ಸಮಯದಲ್ಲಿ ದ್ವೇಷ ಭಾಷಣ ಮಾಡುತ್ತಾರೋ, ಯಾವ ಸಮಯದಲ್ಲಿ ನನ್ನ ವಿರುದ್ಧ ಮಾಡುತ್ತಾರೋ, ಯಾರನ್ನು ಎತ್ತಿ ಕಟ್ಟುತ್ತಾರೋ ಎನ್ನುವ ಭಯವಿದೆ . ಹೀಗೆ ಒಂದು ವಾರದ ಈಚೆಗೆ ನನಗೆ ಭಯವಾಗುತ್ತಿದೆ. ಬೆಂಗಳೂರು ಶಾಂತಿಯುತವಾದ ಸ್ಥಳ. ಇವರು ಎಂಪಿ ಆಗೋಗೆ ಬಂದಿದ್ದಾರಾ..? ಈ ರೀತಿ ಬೆಂಕಿ ಹಚ್ಚೋಕೆ ಬಂದಿದ್ದಾರಾ? ನನಗೆ ಅರ್ಥವಾಗುತ್ತಿಲ್ಲ ಎಂದು ಪರೋಕ್ಷವಾಗಿ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದರು.












Click it and Unblock the Notifications