BREAKING: ಬಿಜೆಪಿ ಶಾಸಕ ಮುನಿರತ್ನ ಪೊಲೀಸರ ವಶಕ್ಕೆ
ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಮೇರೆಗೆ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಬಳಿ ಮುನಿರತ್ನ ಅವರನ್ನು ಪೊಲೀಸರು ಲಾಕ್ ಮಾಡಿದ್ದಾರೆ ಎನ್ನಲಾಗಿದೆ.
ಕೋಲಾರದಿಂದ ಆಂಧ್ರದ ಚಿತ್ತೂರು ಕಡೆಗೆ ಹೋಗಲು ಶಾಸಕ ಮುನಿರತ್ನ ಮುಂದಾಗಿದ್ದರು. ಮುನಿರತ್ನ ಅವರ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿ ಅವರಿದ್ದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದಾರಂತೆ. ಇಂದು ಬೆಳಿಗ್ಗೆಯಿಂದಲೂ ಶಾಸಕ ಮುನಿರತ್ನ ನಾಪತ್ತೆಯಾಗಿದ್ದರು ಎಂದು ಹೇಳಲಾಗಿತ್ತು. ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುನಿರತ್ನ ನಾನೆಲ್ಲೂ ನಾಪತ್ತೆಯಾಗಿಲ್ಲ ಎಂದು ಹೇಳಿದ್ದರು.

ಮುನಿರತ್ನ ಅವರ ಬೆನ್ನು ಹತ್ತಿದ್ದ ಪೊಲೀಸರು, ಅವರ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದರು. ಹಾಗಾಗಿ ಮುನಿರತ್ನ ಕೋಲಾರದಲ್ಲಿ ಇರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಕೂಡಲ್ಲೇ ಅಲ್ಲಿನ ಪೊಲೀಸರ ನೆರವಿನಿಂದ ಮುನಿರತ್ನ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಮುನಿರತ್ನ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಏನಿದು ಪ್ರಕರಣ?: ಬಿಜೆಪಿ ಶಾಸಕ ಮುನಿರತ್ನ ಅವರು ಗುತ್ತಿಗೆದಾರ ಚಲುವರಾಜು ಎಂಬುವರಿಗೆ ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾದ ಆಡಿಯೋ ಸದ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನು ಈ ಸಂಬಂಧ ಶಾಸಕ ಮುನಿರತ್ನ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಮುನಿರತ್ನ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ʼಆ ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆʼ ಎಂದು ಮುನಿರತ್ನ ಹೇಳಿದ್ದರು.

ಕಸದ ಗುತ್ತಿಗೆ ವಿಚಾರವಾಗಿ ಗುತ್ತಿಗೆದಾರ ಚಲುವರಾಜು ಎಂಬುವವರಿಗೆ ಮುನಿರತ್ನ ಅವರು ಕೆಟ್ಟದಾಗಿ ಹಾಗೂ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಕೆಲವು ಸಮುದಾಯಗಳ ಬಗ್ಗೆಯೂ ಮುನಿರತ್ನ ಅವರು ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನುವ ಆರೋಪವೂ ಇದೆ. ಈ ಸಂಬಂಧ ನಿನ್ನೆ ಪ್ರೆಸ್‌ಮೀಟ್ ನಡೆಸಿದ್ದ ಗುತ್ತಿಗೆದಾರ ಚಲುವರಾಜು, ಮುನಿರತ್ನ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದರು.
ಅಲ್ಲದೆ, ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೂ ಹೋಗಿ ದೂರು ನೀಡಿ, ತನಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದರು. ಆಡಿಯೋದಲ್ಲಿ ಒಕ್ಕಲಿಗರು ಹಾಗೂ ದಲಿತರ ಬಗ್ಗೆಯೂ ಶಾಸಕ ಮುನಿರತ್ನ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಲಾಗಿದ್ದು, ಈಗ ಇದೇ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ವಶಕ್ಕೂ ಮುನ್ನ ತನ್ನ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಶಾಸಕ ಮುನಿರತ್ನ, ʼಚಲುವರಾಜು ಅವರು ಆ ಆಡಿಯೋ ತೆಗೆದುಕೊಂಡು ಕೂಡಲೇ ಸ್ಪೀಕರ್ ಕಚೇರಿಗೆ ಬರಲಿ. ಎರಡು ಸಮುದಾಯಗಳು ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿವೆ. ಚಲುವರಾಜು ಹಲವು ವರ್ಷಗಳಿಂದ ನನ್ನೊಂದಿಗೆ ಇದ್ದವರು, ಒಂದು ತಿಂಗಳ ಹಿಂದಷ್ಟೇ ಇದೇ ಚಲುವರಾಜ್ ನನ್ನ ಬಗ್ಗೆ ಹೊಗಳಿದ್ದರು. ಈಗ ನಾನು ಅವರ ಬಳಿ ಹಣ ಕೇಳುತ್ತೀನಾ?ʼ ಎಂದು ಮುನಿರತ್ನ ಪ್ರಶ್ನಿಸಿದ್ದರು. ರಾಜಕೀಯ ಪಿತೂರಿಯಿಂದಾಗಿ ಈ ರೀತಿಯ ಆರೋಪಗಳನ್ನು ನನ್ನ ಮೇಲೆ ಮಾಡಿದ್ದಾರೆ. ನಾನೆಲ್ಲೂ ನಾಪತ್ತೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಪೊಲೀಸರು ಮುನಿರತ್ನ ಅವರನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications