ಜನಾರ್ದನ ರೆಡ್ಡಿ-ಶ್ರೀರಾಮುಲು ನಡುವೆ ತಂದಿಟ್ಟಿದ್ದು ಯಾರು? ಬಿಜೆಪಿಯಲ್ಲಿ ಹೊಸ ಚರ್ಚೆ
ಇತ್ತೀಚೆಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಸದ ಬಿ.ಶ್ರೀರಾಮುಲು ಅವರು ಪಕ್ಷ ತೊರೆಯುವ ಮಾತನ್ನಾಡಿದ್ದರು. ತಮ್ಮ ಕಾರ್ಯವೈಖರಿ ಬಗ್ಗೆ ಉಸ್ತುವಾರಿಗಳು ಬೇಸರ ಹೊರಹಾಕಿದ್ದರಿಂದ ರಾಮುಲು ಅವರು ಸಭೆಯಲ್ಲೇ ರೆಬೆಲ್ ಆಗಿದ್ದರು. ಇದಕ್ಕೆಲ್ಲ ಕಾರಣ ಶ್ರೀರಾಮುಲು ದೋಸ್ತಿ ಜನಾರ್ದನ ರೆಡ್ಡಿ ಎಂಬ ಹೇಳಿಕೆಯು ಬಿಜೆಪಿಯಲ್ಲಿ ಸಂಚಲನ ಮೂಡಿಸಿತ್ತು. ಆದರೆ, ಅಸಲಿಗೆ ಶ್ರೀರಾಮುಲು ರೆಬೆಲ್ ಆಗಲು ಮತ್ತೊಬ್ಬರ ಕೈವಾಡವೂ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಬಿ.ವೈ.ವಿಜಯೇಂದ್ರ ಅವರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವು ಸದ್ಯ ಅಲುಗಾಡುವ ಪರಿಸ್ಥಿತಿ ತಲುಪಿದೆ. ಸ್ಪಪಕ್ಷದಿಂದಲೇ ಭಾರಿ ವಿರೋಧ ಎದುರಿಸುತ್ತಿರುವ ವಿಜಯೇಂದ್ರ ಅವರ ಬಗ್ಗೆ ಮತ್ತೊಂದು ಗಂಭೀರ ಆರೋಪವೊಂದು ಕೇಳಿಬಂದಿದೆ. ಸ್ವಪಕ್ಷ ನಾಯಕರೊಬ್ಬರು ವಿಜಯೇಂದ್ರ ಅವರ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಶ್ರೀರಾಮುಲು ಅವರ ವಿಚಾರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್‌ವಾಲ್ ಅವರಿಗೆ ತಪ್ಪು ಮಾಹಿತಿಯನ್ನು ನೀಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂದು ಬಿಜೆಪಿ ಶಾಸಕ ಬಿ.ಪಿ.ಹರೀಶ್ ಗಂಭೀರ ಆರೋಪ ಮಾಡಿದ್ದಾರೆ. ವಿಜಯೇಂದ್ರ ಅವರೇ ಕಳೆದ ಸಂಡೂರು ಬೈಎಲೆಕ್ಷನ್ ವಿಚಾರವಾಗಿ ಶ್ರೀರಾಮುಲು ಬಗ್ಗೆ ರಾಧಾಮೋಹನ್ ಅಗರವಾಲ್ ಅವರಿಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಈ ಕಾರಣಕ್ಕೇ ಶ್ರೀರಾಮುಲು ಅವರ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ತರಾಟೆ ತೆಗೆದುಕೊಳ್ಳಲಾಗಿತ್ತು ಎಂದಿದ್ದಾರೆ.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಈ ಕೆಲಸ ಮಾಡಬಾರದು. ಸ್ಥಳೀಯ ಚುನಾವಣೆಗಳಲ್ಲಿ ಪಕ್ಷ ವಿರೋಧಿಗಳಿಗೆ ವಿಜಯೇಂದ್ರ ಸಾಥ್ ಕೊಡುತ್ತಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಅವರು ಬೆಂಗಳೂರಿನಲ್ಲೇ ಮಾಡಿದ್ದು, ದಾವಣಗೆರೆ ಜಿಲ್ಲಾಧ್ಯಕ್ಷರ ಆಯ್ಕೆ ಬಗ್ಗೆ ಅವರ ಮನೆಯಲ್ಲೇ ಸಭೆ ಮಾಡಿದ್ದಾರೆ. ಹೈಕಮಾಂಡ್ ವಿಜಯೇಂದ್ರ ಅವರ ಈ ನಡೆಯನ್ನೆಲ್ಲ ಗಮನಿಸಿ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೋರ್‌ಕಮಿಟಿ ಸಭೆಯಲ್ಲಿ ಸಂಸದ ಶ್ರೀರಾಮುಲು ಅವರು ನಾನು ಪಕ್ಷ ಬಿಡುತ್ತೇನೆಂದು ಹೇಳಿದ್ದರು. ಇತ್ತೀಚೆಗೆ ನಡೆದ ಸಂಡೂರು ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಸೋಲಿನಿಂದಾಗಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ರಾಮುಲು ಅವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಸಂಡೂರು ಚುನಾವಣೆಯ ಬಳಿಕ ಶ್ರೀರಾಮುಲು ವಿರುದ್ಧ ಬಿಜೆಪಿ ನಾಯಕರಿಗೆ ಅಭ್ಯರ್ಥಿಯಾಗಿದ್ದ ಬಂಗಾರು ಹನುಮಂತು ದೂರು ನೀಡಿದ್ದರು ಎನ್ನಲಾಗಿತ್ತು.

ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ನಾಯಕರು ಕೆಲಸ ಮಾಡಿಲ್ಲ ಎಂದು ಶ್ರೀರಾಮುಲು ಅವರ ವಿರುದ್ಧ ಬೇಸರ ವ್ಯಕ್ತಪಡಿಸಿದ ಹಿನ್ನೆಲೆ, ಶ್ರೀರಾಮುಲು ಅವರು ನೇರವಾಗಿ ಎಲ್ಲರ ಮುಂದೆಯೇ ಪಕ್ಷ ಬಿಡುತ್ತೇನೆ ಎನ್ನುವ ಮೂಲಕ ಸಂಚಲನ ಮೂಡಿಸಿದ್ದರು. ನಾನು ಕಷ್ಟಪಟ್ಟು ಕೆಲಸ ಮಾಡಿದ್ದು, ನನ್ನ ಮೇಲೆ ಸುಮ್ಮನೆ ದೂರು ಕೊಟ್ಟಿದ್ದಾರೆ. ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಬೆಲೆಯೇ ಇಲ್ಲ ಎಂದು ಶ್ರೀರಾಮುಲು ಅವರು ಹೇಳಿದ್ದರು. ಬಳಿಕ ಇದಕ್ಕೆಲ್ಲ ಕಾರಣ ತಮ್ಮ ದೋಸ್ತ್ ಜನಾರ್ದನ ರೆಡ್ಡಿ ಎಂದೂ ರಾಮುಲು ಗುಡುಗಿದ್ದರು. ಆದರೆ, ರಾಮುಲು ವಿರುದ್ಧ ವಿಜಯೇಂದ್ರ ಅವರೇ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎನ್ನುವ ಆರೋಪ ಚರ್ಚೆಗೆ ಬಂದಿದೆ.












Click it and Unblock the Notifications