Scam: ಸರ್ಕಾರಿ ಇಲಾಖೆಯಲ್ಲಿ ಭಾರಿ ಹಗರಣ, ಎಳೆಎಳೆಯಾಗಿ ಬಿಚ್ಚಿಟ್ಟ ಶಾಸಕ ಯತ್ನಾಳ್
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ದೊಡ್ಡ ಹಗರಣವನ್ನು ಬಯಲಿಗೆಳೆದಿದ್ದಾರೆ. ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ಸರ್ಕಾರದ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಸರ್ಕಾರಿ ಕಾರು ಚಾಲಕರು, ಪೆಟ್ರೋಲ್ ಬಂಕ್‌ಗಳು ಮತ್ತು ಸೇವಾ ಕೇಂದ್ರಗಳನ್ನು ಒಳಗೊಂಡ ಮಾಫಿಯಾ ವ್ಯಾಪಕವಾಗಿದೆ ಎಂದು ಯತ್ನಾಳ್ ದೂರಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ ಕಾರು ಚಾಲಕರು, ಪೆಟ್ರೋಲ್ ಬಂಕ್‌ಗಳು ಮತ್ತು ಸೇವಾ ಕೇಂದ್ರಗಳನ್ನು ಒಗ್ಗೂಟಿ ಈ ಮಾಫಿಯಾ ನಡೆಸುತ್ತಿದ್ದು, ನಕಲಿ ಪೆಟ್ರೋಲ್ ಬಿಲ್‌ಗಳನ್ನು ತಯಾರಿಸಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದೆ. ಇಲಾಖೆಗಳ ಮುಖ್ಯಸ್ಥರು ಬಿಲ್‌ಗಳನ್ನು ಯಾವುದೇ ಕ್ರಾಸ್ ಚೆಕ್ ಮಾಡದೆ, ಪರಿಶೀಲಿಸದೆ ಸಹಿ ಹಾಕುತ್ತಿದ್ದಾರೆ ಎಂದೂ ಆರೋಪ ಮಾಡಿದ್ದಾರೆ.

ಸರ್ಕಾರಿ ಕಾರುಗಳಿಗೆ ಇಂಧನ ತುಂಬಲು ಇಲಾಖೆಯ ಮುದ್ರೆ ಇಲ್ಲ. ಸರ್ಕಾರಿ ಚಾಲಕರು ನಿಗದಿತ ನಿಯಮಗಳನ್ನು ಉಲ್ಲಂಘಿಸಿ ಇಂಡೆಂಟ್ ತುಂಬುತ್ತಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯಿಂದ ಇಂತಹ ದುರುಪಯೋಗವಾಗಿದೆ. ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ತುಂಬಿಸಿಕೊಂಡಿರುವ ಇಂಧನದ ಮಾಹಿತಿ ಸಂಪೂರ್ಣ ಕಗ್ಗಂಟಾಗಿದೆ. 20 ಲೀಟರ್ ಪೆಟ್ರೋಲ್‌ಗೆ ಖರೀದಿಸಿದ ಇಂಡೆಂಟ್ ಅನ್ನು 50 ಲೀಟರ್ ಎಂದು ತಿರುಚಲಾಗಿದೆ ಎಂದು ಯತ್ನಾಳ್ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರದ ಸರ್ವೀಸ್ ಸ್ಟೇಷನ್ ಕೂಡ ಈ ಹಗರಣದಲ್ಲಿ ಭಾಗಿಯಾಗಿದೆ. ಇಲಾಖೆಯ ಸಹಿ ಮತ್ತು ಅಧಿಕೃತ ಮುದ್ರೆ ಇಲ್ಲದಿದ್ದರೂ ಇಂಧನ ತುಂಬಿಸಲಾಗಿದೆ. ನಿರಂತರವಾಗಿ 50 ಲೀಟರ್‌ವರೆಗೆ ಪೆಟ್ರೋಲ್ ತುಂಬಿಸುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಜನವರಿ 6, 11 ಮತ್ತು 13ರಂದು 50 ಲೀಟರ್ ಪ್ರಮಾಣದ ಇಂಧನವನ್ನು ತುಂಬಿಸಲಾಗಿದೆ. ಆದರೆ ಇದಕ್ಕಾಗಿ ನೀಡಿರುವ ಬಿಲ್‌ಗಳಲ್ಲಿ ವ್ಯತ್ಯಾಸವಿದೆ ಎಂದಿದ್ದಾರೆ.
ಈ ಇಂಧನ ಹಗರಣ ಬೆಳಕಿಗೆ ಬಂದಿರುವುದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮಾತ್ರ. ಚಾಲಕರು ಮತ್ತು ಸೇವಾ ಕೇಂದ್ರಗಳನ್ನು ಒಳಗೊಂಡಿರುವ ಇತರ ಇಲಾಖೆಗಳಲ್ಲೂ ಇದೇ ರೀತಿಯ ಹಗರಣ ಇರುವ ಸಾಧ್ಯತೆ ಇದೆ. ಹಾಗಾಗಿ ತೆರಿಗೆದಾರರ ಹಣದ ಸದ್ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕು. ಎಲ್ಲ ಸರ್ಕಾರಿ ಕಾರುಗಳಿಗೆ ಇಂಧನ ತುಂಬುವ ಬಗ್ಗೆ ಸರಿಯಾದ ನಿಯಮ ಪಾಲನೆ ಖಚಿತಪಡಿಸಿಕೊಳ್ಳಲು ಎಲ್ಲ ಇಲಾಖೆಗಳ ಇಂಧನ ಬಿಲ್‌ಗಳನ್ನು ತಕ್ಷಣವೇ ಲೆಕ್ಕಪರಿಶೋಧನೆ ಮಾಡಬೇಕು ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಯತ್ನಾಳ್ ವಿನಂತಿ ಮಾಡಿದ್ದಾರೆ.

ಇದರೊಂದಿಗೆ ತನಿಖಾ ಸಂಸ್ಥೆಯೊಂದು ಪ್ರಕಟಿಸಿರುವ ವರದಿಯ ಲಿಂಕ್ ಅನ್ನು ಸಹ ಯತ್ನಾಳ್ ಅವರು ಹಂಚಿಕೊಂಡಿದ್ದಾರೆ. ಅಲ್ಲಿರುವಂತೆ ಬಿಲ್‌ಗಳ ನೈಜತೆಯನ್ನೇ ಪರಿಶೀಲಿಸದ ಇಲಾಖೆಗಳ ಮುಖ್ಯಸ್ಥರು ಹಣ ಪಾವತಿಗೆ ಸಹಿ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ವಾಹನ ಚಾಲಕರುಗಳೊಂದಿಗೆ ಅಧಿಕೃತ ಸರ್ವಿಸ್ ಸ್ಟೇಷನ್‌ನವರೂ ಶಾಮೀಲಾಗಿ ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ.
ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸಲು ಕಚೇರಿಯ ಮೊಹರು ಕೂಡ ಇಲ್ಲ, ಇಲಾಖಾ ಮುಖ್ಯಸ್ಥರ ಸಹಿಯೂ ಇಲ್ಲ. ವಾಹನ ಚಾಲಕರೇ ಸಹಿ ಮಾಡಿ ಇಂಡೆಂಟ್‌ಗಳನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಗರಣ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯಲ್ಲಿ ನಡೆದಿದೆ ಎಂದು ವರದಿಯಲ್ಲಿದೆ.












Click it and Unblock the Notifications