ಸಿದ್ದರಾಮಯ್ಯ ವಿರುದ್ಧ ದೂರು ನೀಡಲು ಬಿಜೆಪಿ ಸಿದ್ಧತೆ
ಬೆಂಗಳೂರು, ಜ. 14 : ಕರ್ನಾಟಕ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಹೋರಾಟವನ್ನು ಪುನಃ ಆರಂಭಿಸಲು ನಿರ್ಧರಿಸಿದೆ. ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಸಿಎಂ ವಿರುದ್ಧ ದೂರು ಸಲ್ಲಿಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ.
ಬುಧವಾರ ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಬಿಜೆಪಿ ನಾಯಕರು ಮತ್ತು ಹಿರಿಯ ವಕೀಲರ ಸಭೆ ನಡೆಯಿತು. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದೂರು ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸಭೆಯಲ್ಲಿ ಪಾಲ್ಗೊಂಡಿದ್ದರು. [ಸಿದ್ದರಾಮಯ್ಯ ಡಿನೋಟಿಫಿಕೇಷನ್ ಮಾಡಿದ್ದು 707 ಎಕರೆ]

ಸಭೆಯ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಹೋರಾಟವನ್ನು ನಾವು ಮುಂದುವರೆಸಲಿದ್ದೇವೆ. ಸಿಎಂ ವಿರುದ್ಧ ದೂರು ನೀಡಲು ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದೇವೆ. ಇದಕ್ಕೆ ಹೈಕಮಾಂಡ್ ನಾಯಕರ ಒಪ್ಪಿಗೆಯೂ ದೊರೆತಿದೆ ಎಂದು ಹೇಳಿದರು. [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]
ಅರ್ಕಾವತಿ ಬಡಾವಣೆಯಲ್ಲಿ ನಡೆದಿರುವ ಅಕ್ರಮ ಡಿನೋಟಿಫಿಕೇಶನ್ ಕುರಿತು ವರದಿ ತಯಾರಿಸಲು ಬಿಜೆಪಿ ಸತ್ಯಶೋಧನಾ ಸಮಿತಿ ರಚಿಸಿತ್ತು. ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಮತ್ತು ವಿ.ಸೋಮಣ್ಣ ನೇತೃತ್ವದ ಬಿಜೆಪಿಯ ಸತ್ಯಶೋಧನಾ ಸಮಿತಿ ಮೂರು ತಿಂಗಳಿಗೂ ಹೆಚ್ಚು ಕಾಲ ಅಧ್ಯಯನ ನಡೆಸಿ ವರದಿಯನ್ನು ತಯಾರಿಸಿತ್ತು, 707 ಎಕರೆ ಅಕ್ರಮ ಡಿನೋಟಿಫಿಕೇಶನ್ ನಡೆದಿದೆ ಎಂದು ಹೇಳಿತ್ತು.
ಸದ್ಯ ಈ ವರದಿಯ ಆಧಾರದ ಮೇಲೆಯೇ ಬಿಜೆಪಿ ಕಾನೂನು ಹೋರಾಟ ಮುಂದುವರೆಸಲು ನಿರ್ಧರಿಸಿದೆ. ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಸಿಎಂ ವಿರುದ್ಧ ದೂರು ನೀಡಲು ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದೆ.











Click it and Unblock the Notifications