ಸಿದ್ದರಾಮಯ್ಯ ಕಾಡುತ್ತಿರುವ 5 ಸಮಸ್ಯೆಗಳು, ಪಟ್ಟಿ!
ಬೆಂಗಳೂರು, ಸೆಪ್ಟೆಂಬರ್ 15; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಜಯಗಳಿಸಿ ಸ್ಪಷ್ಟ ಬಹುಮತದ ಸರ್ಕಾರ ರಚನೆ ಮಾಡಿದರೂ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಇದು ಪ್ರತಿಪಕ್ಷವಾದ ಬಿಜೆಪಿ ಆರೋಪವಾಗಿದೆ. ಪಕ್ಷದಲ್ಲಿನ ಬಣ ರಾಜಕೀಯ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಡುತ್ತಿದೆ.
ಬರಗಾಲ, ಜಲಾಶಯಗಳು ಖಾಲಿ ಆಗಿರುವುದು, ಬೆಲೆ ಏರಿಕೆ ಮುಂತಾದ ಸಮಸ್ಯೆಗಳು ಕರ್ನಾಟಕ ರಾಜ್ಯವನ್ನು ಕಾಡುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಡುತ್ತಿರುವ 5 ಸಮಸ್ಯೆಗಳು ಬೇರೆ ಇವೆ.

ಶುಕ್ರವಾರ ಕರ್ನಾಟಕ ಬಿಜೆಪಿ ಈ ಕುರಿತು ಟ್ವೀಟ್ ಮಾಡಿದೆ. ರಾಜ್ಯದ ಜನರನ್ನು ಕಾಡುತ್ತಿರುವ ಸಮಸ್ಯೆಗಳು ಮತ್ತು ಸಿದ್ದರಾಮಯ್ಯರನ್ನು ಕಾಡುತ್ತಿರುವ 5 ಸಮಸ್ಯೆಗಳ ಪಟ್ಟಿಯನ್ನು ನೀಡಿದೆ.
ಬಿಜೆಪಿಯ ಟ್ವೀಟ್
ರಾಜ್ಯದ ಜನರನ್ನು ಕಾಡುತ್ತಿರುವ 5 ಸಮಸ್ಯೆಗಳು
* ಬರಗಾಲ
* ಬರಿದಾದ ಜಲಾಶಯಗಳು
* ಬೆಲೆ ಏರಿಕೆ
* ಕಲುಷಿತ ನೀರು ಪೂರೈಕೆ
* ರೈತರ ಆತ್ಮಹತ್ಯೆ
ಅದೇ ಸಿದ್ದರಾಮಯ್ಯ ಅವರನ್ನು ಕಾಡುತ್ತಿರುವ 5 ಸಮಸ್ಯೆಗಳು
* ಬಿ. ಕೆ. ಹರಿಪ್ರಸಾದ್
* ಡಿ. ಕೆ. ಶಿವಕುಮಾರ್
* ಬಿ. ಕೆ. ಹರಿಪ್ರಸಾದ್
* ಡಿ. ಕೆ. ಶಿವಕುಮಾರ್
* ಬಿ. ಕೆ. ಹರಿಪ್ರಸಾದ್ ಎಂದು ಬಿಜೆಪಿ ಟ್ವೀಟ್‌ನಲ್ಲಿ ಹೇಳಿದೆ.
ಸಚಿವ ಸ್ಥಾನ ವಂಚಿತರಾಗಿರುವ ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹೇಳದೇ ಪರೋಕ್ಷವಾಗಿ ಅವರ ವಿರುದ್ಧ ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ. ಹೈಕಮಾಂಡ್ ನಾಯಕರು ಹೇಳಿಕೆಗಳನ್ನು ನೀಡದಂತೆ ಬಿ. ಕೆ. ಹರಿಪ್ರಸಾದ್‌ಗೆ ನೋಟಿಸ್ ಸಹ ನೀಡಿದ್ದರು.
ನೋಟಿಸ್ ನೀಡಿರುವ ಕುರಿತು ಮಾತನಾಡಿದ ಬಿ. ಕೆ. ಹರಿಪ್ರಸಾದ್, "ನೋಟಿಸ್ ಬಂದಿದೆ, ಈ ಬಗ್ಗೆ ವಾಟ್ಸಪ್ ಮೂಲಕ ತಿಳಿದುಕೊಂಡಿದ್ದೇನೆ. ಹತ್ತು ದಿನಗಳ ಕಾಲ ಸಮಯಾವಕಾಶ ನೀಡಲಾಗಿದೆ. ಇದಕ್ಕೆ ಉತ್ತರ ಕೊಡುತ್ತೇನೆ" ಎಂದರು.
ಈ ಕುರಿತು ಮಾತನಾಡಿದ್ದ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ಬಿ. ಕೆ. ಹರಿಪ್ರಸಾದ್ ಅವರಿಗೆ ನೋಟಿಸ್ ನೀಡಿರುವ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಪಕ್ಷದಲ್ಲಿ ಶಿಸ್ತು ಕಾಪಾಡಬೇಕಿದೆ" ಎಂದು ಹೇಳಿದ್ದರು.
ಈಡಿಗ ಬಿಲ್ಲವ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ್ದ ಬಿ. ಕೆ. ಹರಿಪ್ರಸಾದ್ ಸಿದ್ದರಾಮಯ್ಯ ಹೆಸರು ಹೇಳಿರಲಿಲ್ಲ. ಆದರೆ, "ನಾನು ಸರ್ಕಾರ ಮಾಡಿದ್ದೇನೆ. ದೇವರಾಜ ಅರಸು ಕಾರಿನಲ್ಲಿ ಕುಳಿತರೆ ನೀವು ದೇವರಾಜ ಅರಸು ಆಗೋದಿಲ್ಲ, ಅವರ ಚಿಂತನೆ ಇರಬೇಕು" ಎಂದು ಟೀಕಿಸಿದ್ದರು.
ಗುರುವಾರ ಟ್ವೀಟ್ ಮಾಡಿದ್ದ ಬಿಜೆಪಿ, 'ಸಿದ್ದರಾಮಯ್ಯರವರ ಅಹಿಂದ ರಾಜಕಾರಣದ ಅಸಲಿ ಮುಖವಾಡವನ್ನು ಎಳೆಎಳೆಯಾಗಿ ಬಿ. ಕೆ. ಹರಿಪ್ರಸಾದ್ ಅವರು ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯರವರ ಅಹಿಂದದ ನೈಜತೆ ಹೊರಬಂದಿದ್ದು ಇದೇ ಮೊದಲಲ್ಲ. ಆಗಾಗ ಕಿಡಿ ರೂಪದಲ್ಲಿ ಹೊರಬರುತ್ತಿದ್ದ ಅಸಮಾಧಾನ ಈಗ ಹರಿಪ್ರಸಾದ್ ಅವರ ರೂಪದಲ್ಲಿ ಬೆಂಕಿಯಾಗಿದೆ. ರಾಜ್ಯದ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯ ಸಿದ್ದರಾಮಯ್ಯರವರ ಅಹಿಂದ ರಾಜಕಾರಣಕ್ಕೆ ಸಿಲುಕಿ ರಾಜಕೀಯ ಪ್ರಾತಿನಿಧ್ಯವನ್ನು ಬಹುತೇಕ ಕಳೆದುಕೊಂಡಿದೆ' ಎಂದು ಟೀಕಿಸಿತ್ತು.
'ಚುನಾವಣೆಗಳಲ್ಲಿ ಅಹಿಂದ ಹೆಸರಿನಲ್ಲಿ ರಾಜಕಾರಣ ಮಾಡಿ ಯಶಸ್ಸನ್ನು ಕಂಡಿರುವ ಸಿದ್ದರಾಮಯ್ಯರವರು, ಚುನಾವಣೆ ಬಳಿಕ "ಹಿಂದ"ದವರನ್ನು ಹಿಂದೆಯೇ ಬಿಟ್ಟು, ತಾವು ಮತ್ತು ತಮ್ಮ(ಅ)ವರನ್ನು ಮಾತ್ರ ಮುಂದಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬುದು ಬಿ. ಕೆ. ಹರಿಪ್ರಸಾದ್ ಅವರ ಪ್ರಮುಖ ಆರೋಪ' ಎಂದು ಬಿಜೆಪಿ ಹೇಳಿತ್ತು.
ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ, "ರಾಜ್ಯದ ಅತಿ ಸಣ್ಣ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕವಾಗಿ, ಅತಿ ಸಣ್ಣ ಹಿಂದುಳಿದ ವರ್ಗಗಳ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ, ಪ್ರತಿ ವರ್ಷ 500 ಕೋಟಿ ಅನುದಾನ ಒದಗಿಸುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಆದರೆ ಸಿದ್ದರಾಮಯ್ಯರವರ ಬಜೆಟ್‌ನಲ್ಲಿ ಈ ಬಗ್ಗೆ ಉಲ್ಲೇಖವೇ ಆಗಿಲ್ಲ. ಹಿಂದುಳಿದ ವರ್ಗಗಳ ಜೊತೆ ದಲಿತ ಸಮುದಾಯಗಳಿಗೂ ಅನ್ಯಾಯವೆಸಗಿರುವ ಸಿದ್ದರಾಮಯ್ಯರವರು, ದಲಿತ ಸಮುದಾಯಗಳಿಗೆ ಮಾತ್ರ ಮೀಸಲಾಗಿದ್ದ 11,144 ಕೋಟಿ ಎಸ್.ಸಿ.ಪಿ/ ಟಿ.ಎಸ್.ಪಿ ಅನುದಾನವನ್ನು, ಜಾರಿಯಿದ್ದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ" ಎಂದು ದೂರಿತ್ತು.












Click it and Unblock the Notifications