ಡಿ.ಕೆ.ಶಿವಕುಮಾರ್ ಒಬ್ಬಂಟಿಯಾಗಿದ್ದಾರೆ: ಛಲವಾದಿ ನಾರಾಯಣ ಸ್ವಾಮಿ
ಬೆಂಗಳೂರು,ಡಿಸೆಂಬರ್ 17: ಡಿ.ಕೆ.ಶಿವಕುಮಾರ್ ಹೇಳಿಕೆ ಅತ್ಯಂತ ಖಂಡನಾರ್ಹ. ಅವರ ಪಕ್ಷದಲ್ಲಿರುವ ಯಾರೂ ಕೂಡ ಅವರ ಬೆಂಬಲಕ್ಕೆ ನಿಂತಿಲ್ಲ. ಇದು ಅತ್ಯಂತ ಹಾಸ್ಯಾಸ್ಪದ ಹೇಳಿಕೆ ಎಂದು ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡ ಖಾದರ್ ಅವರು ಹೇಳಿಕೆ ನೀಡಿ, ಮಂಗಳೂರಿನ ಘಟನೆಗೆ ಯಾರೂ ಬೆಂಬಲ ಕೊಡಬಾರದು ಎಂದಿದ್ದಾರೆ ಎಂದು ವಿವರಿಸಿದರು. ಕುಕ್ಕರ್ ಒಲೆ ಮೇಲೆ ಇಟ್ಟಾಗ ಸ್ಫೋಟವಾಗಿಲ್ಲ; ಅದರೊಳಗೆ ಬಾಂಬ್ ಇತ್ತಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು.
ಟೆರರಿಸ್ಟ್ ಎಂದೊಡನೆ ನಿಮಗ್ಯಾಕೆ ನೋವಾಗಿದೆ? ಅಂದರೆ ನೀವು ಟೆರರಿಸ್ಟ್ ಪರ ಇದ್ದಂತಲ್ಲವೇ ಎಂದು ಕೇಳಿದರು. ಈ ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯನ್ನು ತೆಗಳುವ ಭರದಲ್ಲಿ ಭಯೋತ್ಪಾದಕರ ಪರವಾಗಿ ಮಾತನಾಡಿದ್ದನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ನಮಗೆ ದೇಶ ದೊಡ್ಡದೇ ಹೊರತು ಭಯೋತ್ಪಾದನೆ ದೊಡ್ಡದಲ್ಲ ಎಂದರು. ಭಯೋತ್ಪಾದನೆ ಪರವಾಗಿ ನಿಂತ ಕಾಂಗ್ರೆಸ್ ಪರಿಸ್ಥಿತಿ ಈಗಾಗಲೇ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಜೊತೆಗಿನ ಸಂಬಂಧದ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ದೂಳು ತಿನ್ನುವಂತೆ ಮಾಡಿದೆ. ಅವರು ಮತಕ್ಕಾಗಿ ಓಲೈಕೆ ಮಾಡುತ್ತ ದೇಶದಲ್ಲಿ ಅಸ್ತಿತ್ವ ಕಳಕೊಂಡಿದ್ದಾರೆ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರ ನಿಲುವನ್ನು ಸಿದ್ದರಾಮಯ್ಯರವರು ಬೆಂಬಲಿಸುತ್ತಾರಾ ಅಥವಾ ಆಕ್ಷೇಪಿಸುತ್ತಾರಾ ಎಂದು ತಿಳಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ವಕ್ತಾರ ಮೈಸೂರಿನ ಲಕ್ಷ್ಮಣ್ ಅವರು ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಬಗ್ಗೆ ಮಾತನಾಡಿ, "ಅವರ ಅಪ್ಪ ಆಟೋ ಚಾಲಕರಾಗಿದ್ದರು. ಸಿ.ಟಿ.ರವಿ ಮೇಲೆ ಕ್ರಿಮಿನಲ್ ಕೇಸುಗಳಿವೆ ಎಂದು ತಿಳಿಸಿದ್ದಲ್ಲದೆ ಅವಹೇಳನಕಾರಿ ಮಾತನಾಡಿದ್ದಾರೆ. ಲಕ್ಷ್ಮಣ್ ಅವರಿಗೆ ಹುಚ್ಚು ಹಿಡಿದಿದೆಯೇ ಗೊತ್ತಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸಿ ಚೆಕಪ್ ಮಾಡಿಸುವುದು ಒಳ್ಳೆಯದು" ಎಂದು ಅಭಿಪ್ರಾಯಪಟ್ಟರು.
"ಸಿ.ಟಿ.ರವಿ ಅವರ ತಂದೆ ಯಾವತ್ತೂ ಆಟೋ ಡ್ರೈವರ್ ಆಗಿರಲಿಲ್ಲ. ಅವರೊಬ್ಬ ಜಮೀನ್ದಾರರಾಗಿದ್ದರು. ಅವರಿಗೆ ಕಾಫಿ ಎಸ್ಟೇಟ್ ಇತ್ತು. ಸಿ.ಟಿ.ರವಿ ಒಬ್ಬ ಹೋರಾಟಗಾರರು. ವಿದ್ಯಾರ್ಥಿ ಸಂಘಟನೆಗಳಿಂದ ಹೋರಾಟ ಮಾಡುತ್ತ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟವರು. ಇವತ್ತು ರಾಷ್ಟ್ರಮಟ್ಟದ ನಾಯಕತ್ವವನ್ನು ಹೊಂದಿದ್ದು, ಅವರನ್ನು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಖಂಡನೀಯ" ಎಂದರು.

ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದರು ಎಂಬ ಕಾರಣಕ್ಕಾಗಿ ಈ ಹೇಳಿಕೆ ನೀಡಿದ್ದಾರೆ. ಸಿ.ಟಿ.ರವಿ ಅವರು ಮಾನನಷ್ಟ ಮೊಕದ್ದಮೆ ಹೂಡಲು ನೋಟಿಸ್ ಕಳಿಸಿದರೆ ಅದನ್ನು ತೆಗೆದುಕೊಳ್ಳಲು ಲಕ್ಷ್ಮಣ್ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು. ಇಂಥ ಹೇಡಿತನ ಪ್ರದರ್ಶಿಸುವವರು ಸಿ.ಟಿ.ರವಿ ಅವರ ಬಗ್ಗೆ ಮಾತನಾಡುವುದು ಖಂಡನೀಯ. ಆ ಪಕ್ಷಕ್ಕೆ ಜನರು ಬುದ್ಧಿ ಕಲಿಸುತ್ತಾರೆ ಎಂದು ತಿಳಿಸಿದರು.
ದೇಶದಲ್ಲಿ ಆದ ಭಯೋತ್ಪಾದನಾ ಕೃತ್ಯಗಳಿಂದ ದೇಶವು ಅಭಿವೃದ್ಧಿಯನ್ನು ಕಳಕೊಂಡಿದೆ ಎಂಬ ಪ್ರಜ್ಞೆ ಕಾಂಗ್ರೆಸ್ ಮುಖಂಡರಿಗೆ ಇನ್ನೂ ಬಂದಂತಿಲ್ಲ. ಬಿಜೆಪಿ ಉಗ್ರವಾದ ಮತ್ತು ದೇಶವನ್ನು ಅಭದ್ರಗೊಳಿಸುವ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸ ಮಾಡುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಬದಲಾವಣೆಯೇ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.
ಪ್ರತಿದಿನ ಉಗ್ರರ ಜೊತೆ ಕಾಳಗ, ಮಿಲಿಟರಿಯವರನ್ನೇ ಸಾಯಿಸಿದ್ದು ಸೇರಿ ಎಷ್ಟೊಂದು ಸುದ್ದಿಗಳು ಬರುತ್ತಿದ್ದವು. ಈಗ ಅಲ್ಲಿ ಕಲ್ಲು ತೂರಾಟ, ಗಲಭೆ, ಗುಂಡಿನ ಕಾಳಗ ನಿಂತಿದೆ. ಹದ್ದುಬಸ್ತಿಗೆ ತರುವ ಕೆಲಸವನ್ನು ಮೋದಿಜಿ ಅವರ ನೇತೃತ್ವದ ಸರಕಾರ ಮಾಡಿದೆ ಎಂದರು.












Click it and Unblock the Notifications