ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಬಿಜೆಪಿ ನಾಯಕರಲ್ಲಿಯೇ ಒಡಕು: ಇದರಿಂದ ಯಾರಿಗೆ ಲಾಭ?
ಬೆಂಗಳೂರು, ಡಿಸೆಂಬರ್ 27: ಲಿಂಗಾಯತರಲ್ಲಿಯೇ ಬಲಿಷ್ಠ ಸಮುದಾಯವಾದ ಪಂಚಮಸಾಲಿ ಮೀಸಲಾತಿ ವಿಚಾರವೀಗ ರಾಜ್ಯ ಬಿಜೆಪಿಯನ್ನು ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿಸಿದೆ. ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳು ಬಾಕಿ ಇರುವಾಗ ಮೀಸಲಾತಿಗೆ ಒತ್ತಾಯಿಸಿ ಹೋರಾಟವನ್ನು ತೀವ್ರಗೊಳಿಸಲಾಗಿದೆ. ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಂಕಷ್ಟ ತಂದೊಡ್ಡಿದೆ.
ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಬಿಜೆಪಿ ನಾಯಕರು ಸಾರ್ವಜನಿಕವಾಗಿಯೇ ಬೈದಾಡಿಕೊಂಡಿದ್ದಾರೆ. ಪಂಚಮಸಾಲಿಗಳ ಪ್ರಬಲ ನಾಯಕರಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಮುರುಗೇಶ ನಿರಾಣಿ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.
ಪಂಚಮಸಾಲಿ ಮೀಸಲಾತಿ ವಿರುದ್ಧ ನಿರಾಣಿ ಇದ್ದಾರೆ ಎಂಬುದು ಯಾತ್ನಾಳ್ ಅವರ ವಾದ. ಇದೇ ವಾದವನ್ನು ಜಯ ಮೃತ್ಯುಂಜಯ ಸ್ವಾಮೀಜಿ ಸಹ ಮುಂದಿಟ್ಟಿದ್ದಾರೆ. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ನಿರಾಣಿ ಅವರು ಸ್ವಾಮೀಜಿ ಹಾಗೂ ಯತ್ನಾಳ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಸ್ವಾಮೀಜಿ ತಮ್ಮ ವಾದವನ್ನು ಸಾಬೀತುಪಡಿಸಲಿ. ಇಲ್ಲವಾದರೆ, ನೇರವಾಗಿ ರಾಜಕೀಯಕ್ಕೆ ಬರಲಿ' ಎಂದು ನಿರಾಣಿ ಹೇಳಿದ್ದಾರೆ.

ಇದು ಬಿಜೆಪಿಗೆ ಸಂಕಷ್ಟ ತಂದೊಡ್ಡಿದೆ. ಕಾರಣ, ಲಿಂಗಾಯತರಲ್ಲಿಯೇ ಬಹುಸಂಖ್ಯಾತರನ್ನು ಹೊಂದಿರುವುದು ಪಂಚಮಸಾಲಿ ಸಮುದಾಯ. ಈ ಸಮುದಾಯ ಸುಮಾರು 90 ಲಕ್ಷಕ್ಕೂ ಅಧಿಕ ಜನರನ್ನು ಒಳಗೊಂಡಿದೆ. ಹೀಗಾಗಿ, ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯದ ಮತಗಳಿಗೆ ಮಹತ್ವವಿದೆ. ಉತ್ತರ ಕರ್ನಾಟಕದ ಅನೇಕ ಬಿಜೆಪಿ ಶಾಸಕರಿಗೂ ಪಂಚಮಸಾಲಿ ಮತಗಳು ನಿರ್ಣಾಯಕವೆಂದೇ ಹೇಳಬಹುದು. ಈ ಕಾರಣಕ್ಕಾಗಿ ಪಂಚಮಸಾಲಿ ಸಮುದಾಯ ಬಿಜೆಪಿಗೆ ಹೆಚ್ಚು ಬೇಕಾಗಿದೆ.
ಸಚಿವ ಸ್ಥಾನಕ್ಕೆ ಆಗ್ರಹ, ಮೀಸಲಾತಿಗೆ ಪಟ್ಟು
ಇತ್ತ ಪ್ರಬಲ ಶಾಸಕರು ಸಚಿವ ಸ್ಥಾನಕ್ಕೆ ಆಗ್ರಹಿಸಿದ್ದಾರೆ. ಅತ್ತ ಮೀಸಲಾತಿಗೆ ಪಟ್ಟು ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಸಿಎಂ ಬೊಮ್ಮಾಯಿ ಅವರು ಬಿಜೆಪಿಯ ಹೈಕಮಾಂಡ್ ಅನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ. ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸಚಿವ ಸ್ಥಾನದ ಆಕಾಂಕ್ಷಿಗಳು. ಇವರ ಮೇಲೆ ಗಂಭೀರ ಆರೋಪ ಕೇಳಿಬಂದಿವೆ. ಇಂತಹ ಸಮಯದಲ್ಲಿ ಇವರಿಗೆ ಸಚಿವ ಸ್ಥಾನ ನೀಡಿದರೆ, ಬಿಜೆಪಿಗೆ ಲಾಭವೇನು? ಅಥವಾ ನಷ್ಟವೇನು? ಎಂಬುದನ್ನು ಬೊಮ್ಮಾಯಿ ಅಳೆದೂ ತೂಗಿ ನಿರ್ಣಯ ಮಾಡಬೇಕಿದೆ.

ಮೀಸಲಾತಿ ವಿಚಾರದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಒಂದು ವೇಳೆ, ಪಂಚಮಸಾಲಿಗಳಿಗೆ ಮೀಸಲಾತಿ ನೀಡಿದರೆ, ಪ್ರಬಲ ಒಕ್ಕಲಿಗ ಸಮುದಾಯದ ಮೀಸಲಾತಿ ಬೇಡಿಕೆ ತೀವ್ರಗೊಳ್ಳುವುದಂತೂ ಸ್ಪಷ್ಟವಾಗಿದೆ. ಎರಡು ಪ್ರಬಲ ಸಮುದಾಯಗಳ ಬೇಡಿಕೆ ವಿಚಾರವಾಗಿ ಸಿಎಂ ಬೊಮ್ಮಾಯಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾಯ್ದು ನೋಡಬೇಕಿದೆ.












Click it and Unblock the Notifications