ಯಡಿಯೂರಪ್ಪ ಬಜೆಟ್ ನಲ್ಲಿ ಬೆಲ್ಲ ತಿಂದಂತೆ ಖುಷಿಪಟ್ಟ ನಾಯಕರು
ಬೆಂಗಳೂರು, ಮಾರ್ಚ್ 5: ಪ್ರತಿ ವರ್ಷವೂ ಕೇಂದ್ರ ಅಥವಾ ರಾಜ್ಯ ಬಜೆಟ್ ಮಂಡನೆ ಆದಾಗ, ಆಡಳಿತ ಪಕ್ಷದವರು ಹೊಗಳುತ್ತಾರೆ. ವಿರೋಧ ಪಕ್ಷದವರು ಖಂಡಿಸುತ್ತಾರೆ. ಈ ಬಾರಿಯೂ ಅದೇ ವರಸೆ ಮುಂದುವರೆದಿದೆ.
ವಿರೋಧ ಪಕ್ಷದ ನಾಯಕರು ಇದು ತೃಪ್ತಿ ತಂದ ಬಜೆಟ್ ಅಲ್ಲ ಎಂದರೆ, ಬಿಜೆಪಿ ಪಕ್ಷದ ನಾಯಕರು ಇದು ಅಭಿವೃದ್ದಿಯ ಬಜೆಟ್ ಎಂದು ಸಂತಸ ಹಂಚಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಬಜೆಟ್ ಬಗ್ಗೆ ಮಾತನಾಡಿದ್ದಾರೆ.
ಯಡಿಯೂರಪ್ಪ 2020 ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಬಿಜೆಪಿ ನಾಯಕರು, ಬಜೆಟ್ ಬಗ್ಗೆ ಸಂತಸದಿಂದ ವ್ಯಕ್ತಪಡಿಸಿದ್ದಾರೆ.

ಜಗದೀಶ್ ಶೆಟ್ಟರ್
''ಕೈಗಾರಿಕಾಭಿವೃದ್ದಿ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ದಿಗೆ ಮನ್ನಣೆ ನೀಡುವ ಬಜೆಟ್. ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹೆಚ್ಚಿನ ಮಹತ್ವ ನೀಡಿರುವುದು ಸ್ವಾಗತಾರ್ಹ. ಮಹದಾಯಿ ಯೋಜನೆಗೆ 500 ಕೋಟಿ ರೂಪಾಯಿ ಅನುದಾನ ಘೋಷಣೆ ಸಂತಸದ ವಿಷಯವಾಗಿದೆ.'' ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಬಜೆಟ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಗೋವಿಂದ್ ಕಾರಜೋಳ
''ರಾಜ್ಯದ ಸರ್ವ ಜನಾಂಗದ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ 2020-21 ನೇ ಸಾಲಿನ ಆಯವ್ಯಯವನ್ನು ಇಂದು ಮಂಡಿಸಿದ್ದಾರೆ. ರಾಜ್ಯವು ನೆರೆ, ಬರ, ರೈತರ ಸಾಲ ಮನ್ನಾ ಯೋಜನೆಯ ವ್ಯವಸ್ಥಿತ ಅನುಷ್ಠಾನ ಸೇರಿದಂತೆ, ಸರ್ಕಾರವು ಆರ್ಥಿಕ ಸಂಕಷ್ಟದಲ್ಲಿದ್ದರೂ ಸಹ ಮುಖ್ಯಮಂತ್ರಿಗಳು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಅತ್ಯುತ್ತಮವಾದ ಆಯವ್ಯಯವನ್ನು ಮಂಡಿಸಿದ್ದಾರೆ.'' ಎಂದು ಉಪ ಮುಖ್ಯಮಂತ್ರಿ ಶ್ರೀ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

ಬಿಸಿ ಪಾಟೀಲ್
''ಬಜೆಟ್ ಕೃಷಿಗೆ ಪೂರಕವಾಗಿದ್ದು, ಇದು ರೈತರ ಅಭಿವೃದ್ಧಿಗೆ ಮಂಡಿಸಿದ ಸಮಗ್ರ ಬಜೆಟ್. ಹನಿ ನೀರಾವರಿಗೆ ಆದ್ಯತೆ ನೀಡಿದ್ದಾರೆ. ಫಸಲ್ ಭೀಮಾ ಯೋಜನೆಗೆ 900 ಕೋಟಿ ಹಣ ಮೀಸಲಿಟ್ಟಿದ್ದಾರೆ. ರೈತರ ಮನೆ ಬಾಗಿಲಿನಲ್ಲಿಯೇ ಮಣ್ಣು, ನೀರು ಪರೀಕ್ಷೆ ಮತ್ತು ಇತರೆ ತಾಂತ್ರಿಕ ನೆರವಿಗಾಗಿ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಆರಂಭಿಸಲಾಗುವುದು. ಸಾವಯವ ಕೃಷಿಯನ್ನು ಪ್ರೋತ್ಸಾಹಕ್ಕಾಗಿ 200 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಒಟ್ಟಾರೆಯಾಗಿ ರೈತರ ಆದಾಯ ದ್ವಿಗುಣಗೊಳಿಸಲು ಅನ್ನದಾತರ ಬದುಕನ್ನು ಹಸನುಮಾಡಲು ಇಲಾಖೆ ಹಾಗೂ ಸರ್ಕಾರ ಬದ್ಧವಾಗಿದೆ.'' ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಶಂಕರ ಪಾಟೀಲ ಮುನೇನಕೊಪ್ಪ
ಬಜೆಟ್ ಮಂಡಿಸಿದ ಸಿಎಂ ಯಡಿಯೂರಪ್ಪರಿಗೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ''ಈ ಭಾಗದ ರೈತರ ಬೇಡಿಕೆಗೆ ಸಿಎಂ ಸ್ಪಂದನೆ ನೀಡಿದ್ದಾರೆ. ರೈತರ ಕನಸು ನನಸು ಮಾಡಲು ಯಡಿಯೂರಪ್ಪ ಮುಂದಾಗಿದ್ದಾರೆ.'' ಎಂದಿರುವ ಮುನೇನಕೊಪ್ಪ ನವಲಗುಂದ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಶರತ್ ಬಚ್ಚೇಗೌಡ
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಬಿಎಸ್ ಯಡಿಯೂರಪ್ಪ ಬಜೆಟ್ ಮೆಚ್ಚಿಕೊಂಡಿದ್ದಾರೆ. ''ಆರ್ಥಿಕ ಒತ್ತಡದ ಮಧ್ಯೆಯೂ ಯಡಿಯೂರಪ್ಪನವರು ಚೆನ್ನಾಗಿ ಬಜೆಟ್ ಕೊಟ್ಟಿದ್ದಾರೆ. ಆದರೆ, ಮೇಕೆದಾಟು ಬಗ್ಗೆ ಪ್ರಸ್ತಾಪ ಮಾಡದೇ ಇದ್ದಿದ್ದು ಬೇಸರ ತಂದಿದೆ.'' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.












Click it and Unblock the Notifications