ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಆಸ್ಪತ್ರೆಗೆ ದಾಖಲು
ಉಡುಪಿ, ಅಕ್ಟೋಬರ್ 09: ಬಿಜೆಪಿ ಹಿರಿಯ ನಾಯಕ ಹಾಗೂ ಮೀನುಗಾರಿಕೆ ಇಲಾಖೆಯ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಜ್ವರ, ಉಸಿರಾಟ ಸಮಸ್ಯೆ, ಗಂಟಲಿನ ಸೋಂಕಿನಿಂದ ಬಳಲುತ್ತಿರುವ ಪ್ರಮೋದ್ ಮದ್ವರಾಜ್ ಅವರು ಕಳೆದ ರಾತ್ರಿಯ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರು ಚಿಕಿತ್ಸೆಗೆ ಸ್ಪಂಧಿಸುತ್ತಿದ್ದು, ಇನ್ನು ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳಿಂದ ಮಾಹಿತಿ ದೊರೆತಿದೆ.

ಕಳೆದ ಒಂದು ತಿಂಗಳಿಂದ ನಿರಂತರವಾಗಿ ಪ್ರವಾಸ ಮತ್ತು ಹಲವಾರು ಕಾರ್ಯಕ್ರಮಗಳಿಗೆ ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದ್ದು, ವಿಪರೀತ ಜ್ವರ ತಲೆಗೆ ಏರಿದ ಕಾರಣ ಮನೆಯಲ್ಲಿ ಪ್ರಮೋದ್ ಮಧ್ವರಾಜ್ ತೀವ್ರ ಅಸ್ವಸ್ಥರಾದರು. ಕೂಡಲೇ ಮಣಿಪಾಲ ಕೆಎಂಸಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಜ್ವರ ಕಡಿಮೆಯಾಗಿದ್ದು, ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಲಿದ್ದಾರೆ ಎಂದು ಆಪ್ತ ಮೂಲಗಳಿಂದ ಮಾಹಿತಿ ದೊರಕಿದೆ.
ಪ್ರಮೋದ್ ಮಧ್ವರಾಜ್ ಟ್ವೀಟ್
ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಕೂಡಾ ಅನೇಕ ಕಾರ್ಯಕ್ರಮಗಳಿಗೆ ಆಹ್ವಾನದ ಮೇರೆಗೆ ವ್ಯಾಪಕವಾಗಿ ಪ್ರವಾಸ ಮತ್ತು ಭಾಗವಹಿಸಿದ ಸಂದರ್ಭದಲ್ಲಿ ಮಂಗಳವಾರ ರಾತ್ರಿ ತೀವ್ರ ಅನಾರೋಗ್ಯ ಉಂಟಾದ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಆ ಕಾರಣದಿಂದ ಅನೇಕ ಶಾರದೋತ್ಸವಗಳಿಗೆ ನಾನು ಭಾಗವಹಿಸಬೇಕಾಗಿತ್ತು ಮತ್ತು ವಿಶೇಷವಾಗಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾದ ಕಿಶೋರ್ ಕುಮಾರ್ ಪುತ್ತೂರು ಪರವಾಗಿ ನಾನು ಪ್ರಚಾರ ಪ್ರವಾಸ ಮಾಡಬೇಕಾಗಿತ್ತು ಅತೀ ಶೀಘ್ರದಲ್ಲಿ ಗುಣಮುಖನಾಗಿ ಎಂದಿನಂತೆ ನನ್ನ ಕಾರ್ಯ ಚಟುವಟಿಕೆಯನ್ನು ಮುಂದುವರಿಸುತ್ತೇನೆ ಹಾಗೂ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಕೂಡಾ ಭಾಗವಹಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರು ಅನಾರೋಗ್ಯದ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದು, ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಪಕ್ಷದ ಮುಖಂಡರು ಹಾಗೂ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಿ ಎಂದಿನಂತೆ ತಮ್ಮ ಕ್ರಿಯಾಶೀಲ ಚಟುವಟಿಕೆಯೊಂದಿಗೆ ಎಲ್ಲರೊಂದಿಗೆ ಬೆರೆಯುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯತ್ ನೌಕರರ ಬೇಡಿಕೆ ಈಡೇರಿಕೆ ಆಗ್ರಹ: ವಿಜಯೇಂದ್ರ
ರಾಜ್ಯದ ಎಲ್ಲ ಗ್ರಾಮ ಪಂಚಾಯತ್‍ಗಳ ನೌಕರರು ಹಲವು ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರನಿರತರಾಗಿದ್ದು, ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯತ್‍ಗಳ 11 ವೃಂದಗಳ ನೌಕರರು ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಬೃಹತ್ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆ ಸ್ಥಗಿತಗೊಂಡಿದೆ. ಇದನ್ನು ರಾಜ್ಯದ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಗಮನಿಸಿ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಪಿಡಿಒಗಳು ಸೇರಿ ಎಲ್ಲ ನೌಕರವೃಂದದವರು ನಾಲ್ಕನೇ ಬಾರಿ ಮುಷ್ಕರನಿರತರಾಗಿದ್ದು, ಮೂರು ಬಾರಿ ನಡೆಸಿದ ಸಭೆಯ ನಿರ್ಣಯಗಳು ಈಡೇರಿಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. 28 ಬೇಡಿಕೆಗಳನ್ನು ಸಂಘವು ಸರಕಾರದ ಮುಂದಿಟ್ಟಿತ್ತು. ಈ ಸರಕಾರ ಒಂದೇ ಒಂದು ಬೇಡಿಕೆಯನ್ನೂ ಈಡೇರಿಸಿಲ್ಲ ಎಂಬ ಆಕ್ಷೇಪವಿದೆ. ಬೆಂಗಳೂರಿನಲ್ಲಿ ಸಾವಿರಾರು ನೌಕರರು ಪ್ರತಿಭಟನೆ ನಡೆಸಿದ್ದರು ಎಂದು ಗಮನ ಸೆಳೆದಿದ್ದಾರೆ.












Click it and Unblock the Notifications