C.T.Ravi: ಕಾಂಗ್ರೆಸ್ ಮೈಸೂರು ಸಂಸ್ಥಾನವನ್ನ ಮುಲ್ಲಾ ಸಾಮ್ರಾಜ್ಯ ಎಂದು ಘೋಷಿಸುತ್ತೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ 65ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ಸರ್ಕಾರ ವಕ್ಫ್ ಆಸ್ತಿ ಎಂದು ಪರಿಗಣಿಸಿದೆ. ಈ ಬಗ್ಗೆ ಕಿಡಿಕಾರಿರುವ ಬಿಜೆಪಿ ನಾಯಕರು ಮುಂದೊಂದು ದಿನ ಕಾಂಗ್ರೆಸ್ ಸರ್ಕಾರವು ಮೈಸೂರು ಸಂಸ್ಥಾನವನ್ನು ಮುಲ್ಲಾ ಸಾಮ್ರಾಜ್ಯ ಎಂದೂ ಘೋಷಿಸಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ಸಿ.ಟಿ.ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಈ ವಕ್ಫ್ ಇನ್ನಷ್ಟು ವಿಸ್ತಾರವಾಗಿ ತನ್ನ ಕಬಂಧಬಾಹುಗಳನ್ನು ಚಾಚಿ ಐತಿಹಾಸಿಕ, ಪಾರಂಪರಿಕ ಕಟ್ಟಡಗಳನ್ನು ಸ್ವಾಹ ಮಾಡುತ್ತಿರುವುದನ್ನು ನೋಡಿದರೆ, ಇತಿಹಾಸ ಪುರಾಣ ಪ್ರಸಿದ್ಧ ದೇವಾಲಯಗಳು, ಮಠಮಾನ್ಯಗಳನ್ನೂ ನುಂಗಿ ನೀರು ಕುಡಿಯುವಂತೆ ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಹೇಳಿದಂತೆ ದೇವಾಲಯ, ಮಠ, ಐತಿಹಾಸಿಕ ಸ್ಮಾರಕಗಳ ಮೇಲೆ ಹಸಿರು ಧ್ವಜ ನೆಡುವ ಮುನ್ನ ಎಚ್ಚೆತ್ತುಕೊಳ್ಳಬೇಕಾದ ತುರ್ತು ಇದೆ ಎಂದು ಕರೆ ನೀಡಿದ್ದಾರೆ. ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣದ 65ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ವಕ್ಫ್ ಆಸ್ತಿಯನ್ನಾಗಿ ಪರಿಗಣಿಸಲಾಗಿದೆ. ಹೀಗೆ ಬಿಟ್ಟರೆ ಮುಂದೊಂದು ದಿನ ಈ ಕಾಂಗ್ರೆಸ್ ಸರ್ಕಾರ ಇಡೀ ಮೈಸೂರು ಸಂಸ್ಥಾನವನ್ನು "ಮುಲ್ಲಾನ ಸಾಮ್ರಾಜ್ಯ" ಎಂದು ಘೋಷಿಸುವುದಕ್ಕೂ ಹೇಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೈವ ಭೂಮಿ ಶ್ರೀರಂಗಪಟ್ಟಣವನ್ನು ಇಸ್ಲಾಮೀಕರಣ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಜಿಲ್ಲಾಡಳಿತ ಕೂಡಲೇ ಕಾಲಂ 11ರಿಂದ ವಕ್ಫ್ ಹೆಸರನ್ನು ತೆಗೆಯಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

ಏನಿದು ಆರೋಪ?: ಶ್ರೀರಂಗಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ಸುಮಾರು 70ಕ್ಕೂ ಹೆಚ್ಚು ಆರ್‌ಟಿಸಿಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗಿರುವುದು ಇಲ್ಲಿನವರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಆಸ್ತಿಗಳು ಮಾತ್ರವಲ್ಲದೆ ಇಲ್ಲಿನ ಹಲವು ರೈತರ ಜಮೀನುಗಳ ಆರ್‌ಟಿಸಿಯಲ್ಲಿನ ಕಾಲಂ ನಂ.11ರಲ್ಲೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿದೆ ಎಂದು ಹೇಳಲಾಗಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದ ಚಿಕ್ಕಮ್ಮ ಚಿಕ್ಕದೇವಿ ದೇವಾಲಯ ಹಾಗೂ ಸರ್ಕಾರಿ ಶಾಲೆ ಕೂಡ ವಕ್ಫ್ ಮಂಡಳಿ ಆಸ್ತಿ ಎಂದು ಹೇಳಲಾಗಿದೆ. ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಯ ಮ್ಯೂಸಿಯಂ ಸೇರಿದಂತೆ ಹಲವು ಐತಿಹಾಸಿಕ ಸ್ಮಾರಕಗಳು ಕೂಡ ವಕ್ಫ್ ಆಸ್ತಿ ಎಂದು ನಮೂದಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಶ್ರೀರಂಗಪಟ್ಟಣದ ಸರ್ವೇ ನಂ.17, 28, 63, 68 ಹಾಗೂ 73 ಆರ್‌ಟಿಸಿಗಳಲ್ಲಿ ಕರ್ನಾಟಕ ಸರ್ಕಾರದ್ದು ಎಂದು ನಮೂದಾಗಿದ್ದ ಆಸ್ತಿಗಳು ಇದೀಗ ಆರ್‌ಟಿಸಿಯಲ್ಲಿನ ನಮೂನೆ 11ರಲ್ಲಿ 2014-15ನೇ ಸಾಲಿಗೆ ಸೇರಿದಂತೆ ಇವೆಲ್ಲವೂ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಹಲವು ರೈತರ ಆಸ್ತಿಗಳು ಕೂಡ ವಕ್ಫ್ ಆಸ್ತಿ ಎಂದು ಆರ್‌ಟಿಸಿಯಲ್ಲಿ ನಮೂದಾಗಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ವಕ್ಫ್ ವಿರುದ್ಧ ಸಮರ ಸಾರಿರುವ ಬಿಜೆಪಿ ನಾಯಕರಿಗೆ ಇದು ಮತ್ತೊಂದು ಅಸ್ತ್ರವಾಗಿದೆ.












Click it and Unblock the Notifications