Breaking; ಮಳೆ ಅಬ್ಬರ, ಬಿಜೆಪಿ ಜನಸಂಕಲ್ಪ ಯಾತ್ರೆ ಮುಂದೂಡಿಕೆ
ಬೆಂಗಳೂರು, ಡಿಸೆಂಬರ್ 11; ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮ್ಯಾಂಡಸ್ ಚಂಡಮಾರುತದ ಪ್ರಭಾವದಿಂದ ಬೆಂಗಳೂರು ನಗರದಲ್ಲಿ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಬಿಜೆಪಿಯ ಜನಸಂಕಲ್ಪ ಯಾತ್ರೆ ಮುಂದೂಡಲಾಗಿದೆ.
ಶುಕ್ರವಾರದಿಂದ ಬೆಂಗಳೂರು ನಗರದಲ್ಲಿ ದಿನವಿಡೀ ಜಿಟಿ-ಜಿಟಿ ಮಳೆಯಾಗುತ್ತಿದೆ. ಭಾನುವಾರ ಮಳೆಯ ಅಬ್ಬರ ಕೊಂಚ ಜೋರಾಗಿದೆ. ಈ ಹಿನ್ನಲೆಯಲ್ಲಿ ಭಾನುವಾರ ನಿಗದಿಯಾಗಿದ್ದ ಜನಸಂಕಲ್ಪ ಯಾತ್ರೆಯ ಸಮಾವೇಶ ರದ್ದುಗೊಳಿಸಲಾಗಿದೆ.
ಮಳೆಯ ಅಬ್ಬರ ಕಡಿಮೆಯಾದ ಬಳಿಕ ಕರ್ನಾಟಕ ಬಿಜೆಪಿ ಬೆಂಗಳೂರು ನಗರದಲ್ಲಿ ಜನಸಂಕಲ್ಪ ಯಾತ್ರೆ ಸಮಾವೇಶ ನಡೆಸಲು ಹೊಸ ದಿನಾಂಕ ನಿಗದಿ ಮಾಡಲಿದೆ. ಎರಡು ತಿಂಗಳಿನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಜನ ಸಂಕಲ್ಪ ಸಮಾವೇಶಗಳು ಯಶಸ್ವಿಯಾಗಿ ನಡೆದಿವೆ.

ಜೆಡಿಎಸ್ ಯಾತ್ರೆಯೂ ಮುಂದೂಡಿಕೆ; ಭಾನುವಾರ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪುನಾರಂಭ ಆಗಬೇಕಿದ್ದ ಪಂಚರತ್ನ ರಥಯಾತ್ರೆಯನ್ನು ನಾಲ್ಕು ದಿನಗಳ ಮಟ್ಟಿಗೆ ಮುಂದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಬಂಗಾಳಕೊಲ್ಲಿಯಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣಕ್ಕೆ ಪಂಚರತ್ನ ರಥಯಾತ್ರೆಯನ್ನು ಅನಿವಾರ್ಯವಾಗಿ ಮುಂದಕ್ಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಯೆಲ್ಲೋ ಅಲರ್ಟ್; 'ಮ್ಯಾಂಡಸ್' ಚಂಡಮಾರುತದ ಪರಿಣಾಮ ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಜೆಯಿಂದ ಮಳೆಯಾಗುತ್ತಿದೆ. ಶನಿವಾರ ದಿನವಿಡೀ ಜಿಟಿ-ಜಿಟಿ ಮಳೆಯಾಗಿದೆ. ಭಾನುವಾರ ಬೆಳಗ್ಗೆ ಮಳೆ ತುಸು ಜೋರಾಗಿಯೇ ಸುರಿಯುತ್ತಿದೆ. ಮಳೆಯ ಜೊತೆಗೆ ವಿಪರೀತ ಚಳಿ ಇದ್ದು, ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಭಾನುವಾರ ಸಹ ನಗರದಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಳೆ, ಚಳಿಯ ವಾತಾವರಣ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಿನವಿಡೀ ಸೂರ್ಯನ ದರ್ಶನವಿಲ್ಲದೇ ಜನರು ಕಾಲ ಕಾಳೆಯುತ್ತಿದ್ದಾರೆ.











Click it and Unblock the Notifications