ಯಡಿಯೂರಪ್ಪ ಬದಲಿಸಿದರೆ ಮುಂದೆ ಯಾರು? ಬಿಜೆಪಿ ಹೈಕಮಾಂಡ್ ಜಿಜ್ಞಾಸೆ
Recommended Video

ಬೆಂಗಳೂರು, ನವೆಂಬರ್ 15: ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಯ ನಂತರ ರಾಜ್ಯ ಬಿಜೆಪಿಯಲ್ಲಿ ಆವರಿಸಿರುವ ಸೋಲಿನ ಛಾಯೆಯಿಂದ ಎಚ್ಚೆತ್ತಿರುವ ರಾಷ್ಟ್ರೀಯ ವರಿಷ್ಠರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜಾಗದಲ್ಲಿ ಮುಂದೆ ಯಾರನ್ನು ತಂದು ಕೂರಿಸಬೇಕೆಂಬ ಗಾಢ ಚಿಂತೆಯಲ್ಲಿ ಮುಳುಗಿದ್ದಾರೆ.
ರಾಜ್ಯ ಬಿಜೆಪಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಬದಲಿಸುವ ಗಂಭೀರ ಚಿಂತನೆ ಪಕ್ಷದ ಆಂತರಿಕ ವಲಯದಲ್ಲಿ ಆರಂಭಗೊಂಡಿದ್ದು, ಒಂದು ವೇಳೆ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಅವರ ಸ್ಥಾನವನ್ನು ಯಾರು ತುಂಬಬಹುದು ಎಂಬ ಗೊಂದಲವು ಬಹುದೊಡ್ಡ ಸಂಕಟವಾಗಿ ಗೋಚರಿಸುತ್ತಿದೆ.

ಯಡಿಯೂರಪ್ಪ ಬದಲಾವಣೆಯಾದರೆ ಪಕ್ಷಕ್ಕೆ ಹಿನ್ನಡೆ
ಪ್ರಬಲ ಲಿಂಗಾಯತ ಕೋಮಿನ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಪಕ್ಷಕ್ಕೆ ಹಿನ್ನೆಡೆಯಾಗುತ್ತದೆ ಎಂಬ ಚಿಂತನೆ ಒಂದೆಡೆಯಾದರೆ ಮೊದಲಿನಂತೆ ಯಡಿಯೂರಪ್ಪ ಪಕ್ಷದ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತಿಲ್ಲ, ರಾಜ್ಯದ ಜನರ ವಿಶ್ವಾಸವನ್ನು ಮರುಗಳಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಚಿಂತೆ ಕಾಡುತ್ತಿದೆ.

ಲೋಕಸಭಾ ಚುನಾವಣೆ ನಂತರ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ?
ಈ ಎರಡೂ ಸಂದಿಗ್ಧಗಳ ನಡುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಬದಲಿಸಬೇಕೋ ಬೇಡವೋ ಎಂಬ ಜಿಜ್ಞಾಸೆ ಪಕ್ಷದಲ್ಲಿದೆ ಈ ಹಿಂದೆ ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ಹಾಗೂ ಯಡಿಯೂರಪ್ಪ ನಡುವಿನ ಆಂತರಿಕ ಭಿನ್ನಮತದ ಕಾರಣದಿಂದ ಪಕ್ಷದಲ್ಲೇ ಉಂಟಾಗಿದ್ದ ಎರಡು ಗುಂಪುಗಳು ಇನ್ನೂ ಕೂಡ ಒಂದಾಗಲು ಸಾಧ್ಯವಾಗಿಲ್ಲ.
ಕೆಜೆಪಿ ಸ್ಥಾಪಿಸಿ ಮತ್ತೆ ಬಿಜೆಪಿಗೆ ಬಂದ ಬಳಿಕ ಯಡಿಯೂರಪ್ಪ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು ಆದರೆ ಆ ನಿರೀಕ್ಷೆ ಎಲ್ಲಾ ಹುಸಿಯಾಗಿದೆ.

ಯಡಿಯೂರಪ್ಪ ಒಂದೆಡೆ, ನಾಯಕರು ಇನ್ನೊಂದೆಡೆ
ಯಡಿಯೂರಪ್ಪ ಒಂದೆಡೆಯಾದರೆ ಎಲ್ಲಾ ನಾಯಕರು ಒಂದೆಡೆ ಎನ್ನುವ ಪರಿಸ್ಥಿತಿ ಇದೆ, ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಯಾರಿಗೆ ನಾಯಕತ್ವ ನೀಡಬೇಕು ಎನ್ನುವ ಚಿಂತನೆ ನಡೆದಿದೆ.
ಆದರೆ ಲೋಕಸಭಾ ಚನಾವಣೆ ಹತ್ತಿರದಲ್ಲೇ ಇರುವುದರಿಂದ ಯಡಿಯೂರಪ್ಪ ಬದಲಾಯಿಸಿದರೆ ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಮತ ಚಲಾಯಿಸಬಹುದು ಎಂಬ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳೊಳಗಾಗಿ ಬಿಜೆಪಿ ಹೈಕಮಾಂಡ್ ಕರ್ನಾಟಕದ ಕುರಿತಂತೆ ಸ್ಪಷ್ಟ ನಿರ್ಧಾರಕ್ಕೆ ಬರಲಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಆರ್‌ಎಸ್‌ಎಸ್ ಮುಖಂಡರು, ಅಮಿತ್ ಶಾ ಸಭೆ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಮುಖಂಡರ ಸಭೆ ಬೆಂಗಳೂರಿನಲ್ಲಿ ಬುಧವಾರ ತಡರಾತ್ರಿವರೆಗೂ ನಡೆದಿದೆ. ಸಭೆಯಲ್ಲಿ ಆರ್‌ಎಸ್ಎಸ್ ಪ್ರಮುಖರಾದ ಭಯ್ಯಾಜಿ ಜೋಶಿ, ಮುಕುಂದ್, ಸಂತೋಷ್ ಸೇರಿದಂತೆ ನಾಲ್ಕು ರಾಜ್ಯಗಳ ಸಂಘಟನಾ ಕಾರ್ಯದರ್ಶಿಗಳ ಜತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ.












Click it and Unblock the Notifications