ವರಿಷ್ಠರಿಂದ ಶಾಸಕ ಎಂ. ಪಿ. ರೇಣುಕಾಚಾರ್ಯಗೆ ಬುಲಾವ್!

ಬೆಂಗಳೂರು, ಫೆಬ್ರವರಿ 02; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ 15 ಸಚಿವರ ವಿರುದ್ಧ ಕಿಡಿಕಾರುತ್ತಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯಗೆ ದೆಹಲಿಗೆ ಬರುವಂತೆ ಬುಲಾವ್ ಬಂದಿದೆ.

ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈ ಬುಲಾವ್ ನೀಡಿದ್ದು, ಸೋಮವಾರ ಈ ಕುರಿತಂತೆ ರೇಣುಕಾಚಾರ್ಯ ಜೊತೆ ಮಾತುಕತೆ ನಡೆಸಿದ್ದಾರೆ. ಅರುಣ್ ಸಿಂಗ್ ಜೊತೆ ಮಾತುಕತೆ ನಡೆಸಲು ಫೆಬ್ರವರಿ 7 ಅಥವಾ 8ರಂದು ರೇಣುಕಾಚಾರ್ಯ ದೆಹಲಿಗೆ ತೆರಳಲಿದ್ದಾರೆ.

ರೇಣುಕಾಚಾರ್ಯ ಜೊತೆಗಿನ ದೂರವಾಣಿ ಸಂಭಾಷಣೆ ವೇಳೆಯೇ ಅರುಣ್ ಸಿಂಗ್ ಸಚಿವರ ವಿರುದ್ಧ ಕಿಡಿ ಕಾರುತ್ತಿರುವುದಕ್ಕೆ ಕಾರಣ ಕೇಳಿದ್ದಾರೆ. ಈ ಸಂದರ್ಭದಲ್ಲಿ ಸ್ವಪಕ್ಷದ ಕೆಲ ಸಚಿವರು ಮತ್ತು ವಲಸೆ ಬಂದು ಸಚಿವರಾಗಿರುವ ಕೆಲವರ ವರ್ತನೆ ಬಗ್ಗೆ ರೇಣುಕಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದರು.

BJP High Command Calls MP Renukacharya To Delhi

ಸರ್ಕಾರದಲ್ಲಿರುವ ಬಹುತೇಕ ಸಚಿವರು ತಮ್ಮ ವ್ಯಾಪಾರ, ವ್ಯವಹಾರಕ್ಕಾಗಿ ಇರುವಂತೆ ಭಾಸವಾಗುತ್ತಿದೆ. ಇವರಿಗೆ ಶಾಸಕರ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ. ಸರ್ಕಾರಕ್ಕೆ ಗೌರವ ತರುವ, ಆ ಮೂಲಕ ಪಕ್ಷಕ್ಕೆ ಶಕ್ತಿ ತರುವ ಯಾವ ಆಸಕ್ತಿಯೂ ಇಲ್ಲ ಎಂದು ದೂರಿದರು.

ತಮಗೆ ಬೇಕಾದವರ ಮೂಲಕ ವ್ಯವಹಾರದಲ್ಲಿ ಅಪಾರ ಪ್ರಮಾಣದ ಹಣ ತೊಡಗಿಸುತ್ತಿರುವ ಹಲವು ಸಚಿವರು ಇದೇ ಕಾರಣಕ್ಕಾಗಿ ಸರ್ಕಾರವನ್ನು ದಲ್ಲಾಳಿಗಳ ಮಾರುಕಟ್ಟೆಯನ್ನಾಗಿ ಮಾರ್ಪಡಿಸಿದ್ದಾರೆ.

ಕೇಳಿದರೆ ಸರ್ಕಾರ ಬರಲು ತಾವು ಬಂಡವಾಳ ಹೂಡಿರುವುದಾಗಿ ಉಡಾಫೆಯ ಮಾತನಾಡುತ್ತಾರೆ. ಆ ಮೂಲಕ ತಾವೇನು ಮಾಡಿದರೂ ನಡೆಯುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ ಎಂಬ ಮಾಹಿತಿ ಇದೆ.

ಈ ಹಿನ್ನೆಲೆಯಲ್ಲಿ ಶಾಸಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಹಲ ಬಾರಿ ಪ್ರಸ್ತಾಪಿಸಲಾಯಿತು. ಹಿರಿಯ ನಾಯಕರಿಗೆ ಹೇಳಿದ್ದೂ ಆಯಿತು. ಆದರೆ, ಇದುವರೆಗೆ ಯಾವ ಬದಲಾವಣೆಯೂ ಆಗಿಲ್ಲ. ಅಂದ ಹಾಗೆ ಸರ್ಕಾರ ಅಸ್ತಿತ್ವಕ್ಕೆ ಬರುವುದರ ಹಿಂದೆ ನಮ್ಮ ಶ್ರಮವೂ ಇದೆ. ಆದರೆ, ಅದನ್ನು ನಿರ್ಲಕ್ಷಿಸುವ ಕೆಲಸವಾಗುತ್ತಿದೆ. ಇದು ಮುಂದುವರಿದರೆ ಪಕ್ಷ ಕಷ್ಟಕ್ಕೆ ಸಿಲುಕುತ್ತದೆ ಎಂದು ಅರುಣ್ ಸಿಂಗ್‌ಗೆ ವಿವರಣೆ ನೀಡಿದ್ದಾರೆ.

ವಲಸಿಗ ಸಚಿವರ ಪೈಕಿ ಕೆಲವರು ಈಗಾಗಲೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದು ಚುನಾವಣೆ ಹತ್ತಿರ ಬಂದಾಗ ಪುನಃ ಪಕ್ಷಾಂತರ ಮಾಡುತ್ತಾರೆ. ಇಂತಹವರ ಕ್ಷೇತ್ರದಲ್ಲಿ ಈಗಾಗಲೇ ಮೂಲ ಬಿಜೆಪಿಯವರ ಶಕ್ತಿಯೂ ಕುಗ್ಗಿದೆ. ಹೀಗಾಗಿ ಈ ವಿಷಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ರೇಣುಕಾಚಾರ್ಯ ವಿವರಿಸಿದಾಗ, ಇಂತಹ ಎಲ್ಲ ಮಾಹಿತಿಗಳೊಂದಿಗೆ ದೆಹಲಿಗೆ ಬನ್ನಿ ಎಂದು ಅರುಣ್ ಸಿಂಗ್ ಕರೆ ಕೊಟ್ಟಿದ್ದಾರೆ.

ಅರುಣ್ ಸಿಂಗ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಫೆಬ್ರವರಿ 7ರಂದು ದೆಹಲಿಗೆ ದೌಡಾಯಿಸಲು ರೇಣುಕಾಚಾರ್ಯ ನಿರ್ಧರಿಸಿದ್ದಾರೆ. ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅರುಣ್ ಸಿಂಗ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿ ಸರ್ಕಾರದಲ್ಲಾಗುತ್ತಿರುವ ಬೆಳವಣಿಗೆಗಳ ಕುರಿತು ವಿವರ ನೀಡಲಿದ್ದಾರೆ ರೇಣುಕಾಚಾರ್ಯ.

ಸಚಿವರನ್ನು ಕೈ ಬಿಡಲು ಆಗ್ರಹ; ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಕೆಲವು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. "ಶಾಸಕರಿಗೆ ಸುಳ್ಳು ಹೇಳಿಕೊಂಡು, ಜನರ ಕೈಗೆ ಸಿಗದ 15ಕ್ಕೂ ಹೆಚ್ಚು ದುರಹಂಕಾರಿ ಸಚಿವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ" ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು.

"ದುರಹಂಕಾರಿ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದೇನೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಐದು ನಿಮಿಷದಲ್ಲಿ ಸಿಗುತ್ತಿದ್ದರು. ಸಿಎಂ ಆದ ಮೇಲೆ ಬಸವರಾಜ ಬೊಮ್ಮಾಯಿ ಸ್ಪಂದಿಸುತ್ತಾರೆ. ಕೆಲವು ಸಚಿವರು ಸ್ಪಂದನೆ ಮಾಡುತ್ತಾರೆ. ಸ್ಪಂದಿಸುವ ಹಾಗೂ ಸ್ಪಂದಿಸದ ಸಚಿವರ ಪಟ್ಟಿಯನ್ನೂ ನೀಡಿದ್ದೇನೆ. ಆದರೆ ನಾನು ಲಿಖಿತ ದೂರು ಕೊಟ್ಟಿಲ್ಲ, ಕೊಡುವುದೂ ಇಲ್ಲ" ಎಂಂದು ರೇಣುಕಾಚಾರ್ಯ ಹೇಳಿದ್ದರು.

"15ಕ್ಕೂ ಹೆಚ್ಚು ದುರಹಂಕಾರಿ ಸಚಿವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಅನೇಕ ಬಾರಿ ಹೇಳಿದ್ದೇನೆ. ಕೆಲ ಸಚಿವರು ಕೈಗೆ ಸಿಗುತ್ತಿಲ್ಲ, ಫೋನ್ ರಿಸೀವ್ ಮಾಡಲ್ಲ. ಏನಾದರೂ ಕೆಲಸಕ್ಕೆ ಪತ್ರ ಬರೆದರೆ ಕಾನೂನಾತ್ಮಕ ಪರಿಶೀಲನೆ ಮಾಡುತ್ತೇವೆ ಎಂಬ ಸಬೂಬು ಬರುತ್ತದೆ" ಎಂದು ದೂರಿದ್ದರು.

Recommended Video

      Tema Indiaಗೆ ಬೆಂಗಳೂರಿನಲ್ಲಿ ವಿಶೇಷ ಪಂದ್ಯ ನಡೆಸಲು BCCI ತೀರ್ಮಾನ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+