ಬಿಜೆಪಿಗೆ ಮೊದಲ ಗೆಲುವು: ಗುಜರಾತ್ ಅಖಾಡದಲ್ಲಿ ‘ಕಮಲ’ ಅಬ್ಬರ!
ಲೋಕಸಭೆ ಚುನಾವಣೆ 2024ರ ಅಖಾಡದಲ್ಲಿ ಬಿಜೆಪಿ ಮೊಟ್ಟ ಮೊದಲ ಗೆಲುವು ದಾಖಲಿಸಿ ಸಂಭ್ರಮಿಸಿದೆ. ಈ ಬಾರಿ ಕೇಂದ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿ, ಮೊಟ್ಟ ಮೊದಲ ಬಾರಿ ಹೊಸ ಇತಿಹಾಸ ನಿರ್ಮಿಸಲು ಬಿಜೆಪಿ ನಾಯಕರು ಸಜ್ಜಾಗಿದ್ದರು. ಇದಕ್ಕೆ ಪೂರಕವಾಗಿ ಈಗ ಬಿಜೆಪಿ ನಾಯಕರಿಗೆ ಮೊಟ್ಟ ಮೊದಲ ದಿಗ್ವಿಜಯ ಸಿಕ್ಕಿದೆ, ಅದೂ ಗುಜರಾತ್ ರಾಜ್ಯದಲ್ಲಿ.
ಬಿಜೆಪಿ ಪಕ್ಷ 2024 ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಲು ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಒಕ್ಕೂಟ ಸಜ್ಜಾಗಿದೆ. ಹೀಗಿದ್ದಾಗ ಬಿಜೆಪಿ ಪಕ್ಷವು ಗುಜರಾತ್ ರಾಜ್ಯದ ಚುನಾವಣಾ ಅಖಾಡದಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಹಾಗಾದ್ರೆ ಏನದು ಇತಿಹಾಸ? ಆ ಕುರಿತು ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಅವಿರೋಧವಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆ!
ಅಂದಹಾಗೆ ಇದೀಗ ಲೋಕಸಭೆ ಚುನಾವಣೆ 2024ರ ರಿಸಲ್ಟ್ ಇನ್ನೇನು ಕೆಲವೇ ಕ್ಷಣಗಳಲ್ಲಿ, ಇಡೀ ಜಗತ್ತಿನ ಎದುರು ಹೊರಬೀಳಲಿದೆ. ಹೀಗಿದ್ದಾಗ ಮತ ಎಣಿಕೆ ಆರಂಭಕ್ಕೂ ಮೊದಲೇ ಬಿಜೆಪಿ ಒಂದು ಸ್ಥಾನ ಗೆದ್ದು ಬೀಗಿದೆ. ಅಷ್ಟಕ್ಕೂ ಬಿಜೆಪಿಯ ಭದ್ರಕೋಟೆ ಗುಜರಾತ್ ರಾಜ್ಯದ ಸೂರತ್ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ಆಗಿದ್ದ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆ ಆಗುವ ಮೂಲಕ 2024ರ ಏಪ್ರಿಲ್ ತಿಂಗಳಲ್ಲಿ ಸಂಚಲನವನ್ನ ಸೃಷ್ಟಿ ಮಾಡಿದ್ದರು. ಈ ಮೂಲಕ ಬಿಜೆಪಿ ಪಕ್ಷ ಲೋಕಸಭೆ ಚುನಾವಣೆ ಆರಂಭದಲ್ಲೇ ಇಡೀ ದೇಶದ ಗಮನವನ್ನ ಸೆಳೆದು, ಶುಭಾರಂಭ ಪಡೆದಿತ್ತು.
ಬಿಜೆಪಿ ಗೆದ್ದಿದ್ದು ಹೇಗೆ?
ಅಷ್ಟಕ್ಕೂ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ನೀಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತವಾದ ನಂತರ, ಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದೆ ಪಡೆದುಕೊಂಡ ಬಳಿಕ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಬಿಜೆಪಿ ಅಭ್ಯರ್ಥಿ ಆಗಿದ್ದ ಮುಖೇಶ್ ದಲಾಲ್ ಅವರ ಎದುರಲ್ಲಿ, ಯಾವುದೇ ಅಭ್ಯರ್ಥಿ ಇಲ್ಲದ ಕಾರಣಕ್ಕೆ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯೂ ಆಗಿದ್ದರು. ಬಿಜೆಪಿ ಅಭ್ಯರ್ಥಿ ದಲಾಲ್ ಮತ್ತು ಕಾಂಗ್ರೆಸ್ ಪಕ್ಷದಿಂದ ಕುಂಭಾನಿ ಹೊರತುಪಡಿಸಿ, ಸೂರತ್ ಲೋಕಸಭಾ ಸ್ಥಾನಕ್ಕೆ ಇನ್ನೂ 8 ಮಂದಿ ಸ್ಪರ್ಧಿಗಳು ನಾಮಪತ್ರ ಸಲ್ಲಿಸಿದ್ದರು.
ಹೀಗೆ ಸೂರತ್ ಲೋಕಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಾಕಿ 8 ಮಂದಿ ಸ್ಪರ್ಧಿಗಳ ಪೈಕಿ, ಬಹುಜನ ಸಮಾಜ ಪಾರ್ಟಿಯ ಪ್ಯಾರೇಲಾಲ್ ಭಾರತಿ ಕಣದಿಂದ ಹಿಂದಕ್ಕೆ ಸರಿದಿದ್ದರು. ಹಾಗು ಮತ್ತೊಂದು ಕಡೆ ಬಾಕಿ ಇದ್ದ 7 ಇತರರು ಮತ್ತು ಪಕ್ಷೇತರರು ನಾಮಪತ್ರ ಹಿಂಪಡೆದಿದ್ದರು. ಈ ನಾಟಕೀಯ ಬೆಳವಣಿಗೆ ಕಾರಣಕ್ಕೆ ಇಡೀ ದೇಶದ ಗಮನ ಗುಜರಾತ್ ಕಡೆಗೆ ನೆಟ್ಟಿತ್ತು. ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ದಲಾಲ್ ಅವಿರೋಧವಾಗಿ ಆಯ್ಕೆಯಾಗಿ ಬಿಜೆಪಿಗೆ ಮೊದಲ ಜಯ ತಂದುಕೊಟ್ಟರು.












Click it and Unblock the Notifications