BJP Manifesto 2023: ಉಚಿತ ಹಾಲು, ಸಿಲಿಂಡರ್: ಬಡವರಿಗೆ ಬಿಜೆಪಿ ಕೊಟ್ಟ ಭರವಸೆಗಳೇನು?
ರಾಜ್ಯ ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದು ಎಲ್ಲಾ ಪಕ್ಷಗಳು ಮತದಾರರಿಗೆ ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡುತ್ತಿವೆ. ಮೇ 1 ರಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಿದೆ. ಇದನ್ನು 'ಬಿಜೆಪಿ ಪ್ರಜಾ ಪ್ರಣಾಳಿಕೆ' ಎಂದು ಹೇಳಿಕೊಂಡಿದೆ. ಕಾಂಗ್ರೆಸ್, ಜೆಡಿಎಸ್‌ನ ಉಚಿತ ಗ್ಯಾರೆಂಟಿ, ಭಾಗ್ಯಗಳನ್ನು ಲೇವಡಿ ಮಾಡಿದ್ದ ಬಿಜೆಪಿ ಕೂಡ ಮತದಾರರನ್ನು ಸೆಳೆಯಲು ಉಚಿತ ಕೊಡುಗೆಗಳ ಮೊರೆ ಹೋಗಿದೆ.
ಸೋಮವಾರ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಿಪಿಎಲ್ ಪಡಿತರ ಹೊಂದಿರುವ ಕುಟುಂಬಗಳಿಗೆ ಪ್ರತಿ ವರ್ಷಕ್ಕೆ ಮೂರು ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಘೋಷಣೆ ಮಾಡಿದೆ. ಯುಗಾದಿ ಹಬ್ಬ, ಗಣೇಶ ಹಬ್ಬ ಮತ್ತು ದೀಪಾವಳಿ ಹಬ್ಬಕ್ಕೆ ತಲಾ ಒಂದೊಂದು ಉಚಿತ ಸಿಲಿಂಡರ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

ನಂದಿನಿಯನ್ನು ಅಮುಲ್ ಜೊತೆಗೆ ವಿಲೀನ ಮಾಡಲು ಯತ್ನಿಸುತ್ತಿದೆ ಎನ್ನುವ ವಿಚಾರ ರಾಜ್ಯದಲ್ಲಿ ಭಾರಿ ವಿವಾದ ಎಬ್ಬಿಸಿತ್ತು, ಬಿಜೆಪಿ ಸರ್ಕಾರಕ್ಕೆ ನಂದಿನಿ - ಅಮುಲ್ ವಿವಾದ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇತ್ತು, ತನ್ನ ಪ್ರಣಾಳಿಕೆಯಲ್ಲಿ ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಉಚಿತವಾಗಿ ಅರ್ಧ ಲೀಟರ್ ನಂದಿನಿ ಹಾಲು ನೀಡುವುದಾಗಿ ಘೋಷಣೆ ಮಾಡುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ಯಾ ಎನಿಸುತ್ತದೆ.
ಪ್ರತಿದಿನ ಬಿಪಿಎಲ್ ಕುಟುಂಬಗಳಿಗೆ ಅರ್ಧ ಲೀಟರ್ ಉಚಿತ ಹಾಲು ನೀಡುವುದು ನಂದಿನಿಗೆ ದೊಡ್ಡ ಮಟ್ಟದ ಲಾಭ ತಂದುಕೊಡುತ್ತದೆ. ಈ ಅಂಶವನ್ನು ಮುಂದಿಟ್ಟುಕೊಂಡು, ರೈತರು ಮತ್ತು ಬಿಪಿಎಲ್ ಕುಟುಂಬಗಳ ಮತಗಳನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಇದರ ಜೊತೆಗೆ ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 5 ರುಪಾಯಿಯಿಂದ 7 ರುಪಾಯಿಗೆ ಹೆಚ್ಚಿಸುವುದಾಗಿ ಹೇಳಿದೆ.
ಪೋಷಣೆ ಯೋಜನೆಯಡಿಯಲ್ಲಿ ಎಲ್ಲಾ ಬಿಪಿಎಲ್ ಕುಟಂಬಗಳಿಕೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲಿನ ಜೊತೆಗೆ 5 ಕೇಜಿ ಶ್ರೀ ಅನ್ನ-ಸಿರಿಧಾನ್ಯವನ್ನು ಒಳಗೊಂಡ ಪಡಿತರ ಕಿಟ್ ನೀಡುವ ಭರವಸೆ ನೀಡಿದೆ.
10 ಲಕ್ಷ ಮನೆಗಳನ್ನು ಕಟ್ಟಿಕೊಡುವ ಭರವಸೆ
ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ವಸತಿ ರಹಿತ, ನಿವೇಶನ ರಹಿತ ಬಡವರಿಗೆ 10 ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ ಮಾಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಯೋಜನೆಯಂತೆ ಪ್ರತಿ ವರ್ಷ 2 ಲಕ್ಷ ಮನೆಗಳನ್ನು ಹಂಚಿಕೆ ಮಾಡುವುದಾಗಿ ತಿಳಿಸಿದೆ. ಪ್ರತಿ ಮನೆಗೆ ರಾಜ್ಯ ಸರ್ಕಾರದಿಂದ 5 ಲಕ್ಷದವರೆಗೆ ಆರ್ಥಿಕ ನೆರವು ನೀಡುವುದಾಗಿ ಹೇಳಿದೆ.
ಆಯುಷ್ಮಾನ್ ಭಾರತ್-ಕರ್ನಾಟಕ ಯೋಜನೆ ಅಡಿಯಲ್ಲಿ ಪ್ರತಿ ಬಿಪಿಎಲ್ ಕುಟುಂಬದ ಆರೋಗ್ಯ ವಿಮೆ ಮೊತ್ತವನ್ನು ವರ್ಷಕ್ಕೆ 10 ಲಕ್ಷ ರೂಪಾಯಿಗೆ ಮತ್ತು ಎಪಿಎಲ್ ಕುಟುಂಬದ ವಿಮಾ ಮೊತ್ತವನ್ನು 5 ಲಕ್ಷ ರುಪಾಯಿಗೆ ಹೆಚ್ಚಿಸುವ ಭರವಸೆ ನೀಡಿದೆ. ಎಲ್ಲಾ ಹಿರಿಯ ನಾಯಕರಿಗೆ ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯ ಕಲ್ಪಿಸುವುದಾಗಿ ಹೇಳಿದೆ.
ಗರ್ಭಿಣಿಯರು, ವಿಧವೆಯರಿಗೆ ಆಸರೆ
ಗರ್ಭಿಣಿಯರಿಗೆ ಸುರಕ್ಷಾ ಜನನಿ ಭರವಸೆ ಕಿಟ್ ವಿತರಿಸುವುದಾಗಿ ಬಿಜೆಪಿ ಹೇಳಿದೆ. 21 ಸಾವಿರ ರುಪಾಯಿ ಮೌಲ್ಯದ 6 ಪೌಷ್ಠಿಕಾಂಶಗಳ ಕಿಟ್ ಅನ್ನು ನೀಡಲಾಗುವುದು, ಆರ್ಥಿಕ ನೆರವನ್ನೂ ನೀಡುವುದಾಗಿ ತಿಳಿಸಿದೆ.
ವಿಧವೆಯರ ಮಾಸಿಕ ಪಿಂಚಣಿಯನ್ನು 800 ರುಪಾಯಿಗಳಿಂದ 2000 ರುಪಾಯಿಗಳಿಗೆ ಹೆಚ್ಚಿಸುವುದಾಗಿ ಬಿಜೆಪಿ ಭರವಸೆ ನೀಡಿದೆ. ಒನಕೆ ಓಬವ್ವ ಸಾಮಾಜಿಕ ನಿಧಿ ಯೋಜನೆಯ ಅಡಿಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಮಹಿಳೆಯರು 5 ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ 10 ಸಾವಿರದವರೆಗೆ ತಾಳೆಯಾಗುವಂತೆ ಠೇವಣಿ ನೀಡುವುದಾಗಿ ಬಿಜೆಪಿ ಹೇಳಿದೆ.
ಮಾತ್ರವಲ್ಲದೆ ಹಿಂದೂ ಧಾರ್ಮಿಕ ಪುಣ್ಯ ಕ್ಷೇತ್ರಗಳಾದ ತಿರುಪತಿ, ಕಾಶಿ, ರಾಮೇಶ್ವರಂ, ಕೊಲ್ಹಾಪುರ, ಶಬರಿಮಲೆ, ಕೇದಾರನಾಥದಂತಹ ಪುಣ್ಯ ಕ್ಷೇತ್ರಗಳಿಗೆ ಯಾಥ್ರೆ ಕೈಗೊಳ್ಳುವ ಕುಟುಂಬಗಳಿಗೆ ಒಂದು ಬಾರಿ 25 ಸಾವಿರ ರೂಪಾಯಿ ನೀಡುವ ಭರವಸೆ ನೀಡಿದೆ.
ಒಟ್ಟಾರೆ ಬಿಜೆಪಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಟಕ್ಕರ್ ಕೊಡಲು ಬಡ ಮತ್ತು ಮಧ್ಯಮ ವರ್ಗಕ್ಕೆ ಹಲವು ಯೋಜನೆಗಳನ್ನು ಘೋಷಿಸಿದೆ. ಉಚಿತ ಭರವಸೆಗಳ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದ್ದರೂ, ಈ ಬಾರಿ ರಾಜ್ಯದಲ್ಲಿ ಸಿಲಿಂಡರ್ ಮತ್ತು ಉಚಿತ ಹಾಲು ನೀಡುವ ಘೋಷಣೆ ಮಾಡಿದೆ, ರಾಜ್ಯ ರಾಷ್ಟ್ರ ನಾಯಕರು ಇದನ್ನು ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್, ಜೆಡಿಎಸ್ ಬಿಜೆಪಿಯ ಉಚಿತ ಕೊಡುಗೆಗಳ ಬಗ್ಗೆ ಏನು ಹೇಳುತ್ತವೆ ಎಂದು ಕಾದು ನೋಡಬೇಕಾಗಿದೆ.












Click it and Unblock the Notifications