BJP Manifesto: ಪ್ರವಾಸೋದ್ಯಮದ ಸುಧಾರಣೆಗಾಗಿ 100 ಕೋಟಿ, ಹಳೆ ಮೈಸೂರು ಭಾಗಕ್ಕೆ ನೀಡಿದ ಭರವಸೆಗಳೇನು?
ರಾಜ್ಯ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಮತದಾರರನ್ನು ಸೆಳೆಯಲು ಇಂದು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಸಮೃದ್ಧ ಕರ್ನಾಟಕಕ್ಕಾಗಿ ರಾಜ್ಯದ ಜನತೆಯಿಂದಲೇ, ರಾಜ್ಯದ ಜನತೆಗಾಗಿ, ರಾಜ್ಯದ ಜನತೆಗೋಸ್ಕರ ಅವರ ಸಲಹೆಗಳ ಆಧಾರದಲ್ಲಿ ರೂಪಿಸಲಾದ ಬಿಜೆಪಿ ಪ್ರಜಾ ಪ್ರಣಾಳಿಕೆ 2023 ಇಂದು ಬೆಳಿಗ್ಗೆ 10 ಗಂಟೆಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಡುಗಡೆಗೊಳಿಸಿದರು. ಹಳೆ ಮೈಸೂರು ಭಾಗಕ್ಕೆ ಬಿಜೆಪಿ ಪ್ರಣಾಳಿಕೆಯಲ್ಲಿ ಯಾವ ಭರವಸೆಗಳನ್ನು ನೀಡಲಾಗಿದೆ ಎಂದು ನೋಡೋಣ.

ಬಿಜೆಪಿ ಪ್ರಜಾ ಪ್ರಣಾಳಿಕೆಯಲ್ಲಿ ಹಳೆ ಮೈಸೂರು ಭಾಗಕ್ಕೆ ನೀಡಿದ ಭರವಸೆಗಳು ಹೀಗಿವೆ:-
1. ಮೈಸೂರಿನಲ್ಲಿ ಆಹಾರ ಸಂಸ್ಕರಣಾ ಪಾರ್ಕ್ ಸ್ಥಾಪಿಸಲು ಕೆ-ಅಗ್ರಿ ಫಂಡ್ ಬಳಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.
2. ಇಂಟರ್ನ್ಯಾಷನಲ್ ಸೆಮಿಕಂಡಕ್ಟರ್ ಕಸ್ಪೋರ್ಟಿಯಂನೊಂದಿಗೆ ಜಿಲ್ಲಾ ಮಟ್ಟದಲ್ಲಿ 'ಎಲೆಕ್ಟ್ರಾನಿಕ್ ಉತ್ಪಾದನಾ ಕ್ಲಸ್ಟರ್' ಮತ್ತು "ಇಂಟಿಗ್ರೇಟೆಡ್ ಪಾರ್ಕ್" ಸ್ಥಾಪಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.
3. 'ಮಿಷನ್ ಕನೆಕ್ಟ್ ಕರ್ನಾಟಕ'ದ ಅಡಿಯಲ್ಲಿ ಪ್ರಾದೇಶಿಕ ವಾಯುಯಾನ ಸಂಪರ್ಕ ಕಲ್ಪಿಸಲು ಉಡಾನ್ ಯೋಜನೆಯಡಿ ತುಮಕೂರಿನಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಸ್ಥಾಪಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.

4.ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಲು, ಪಿಪಿಪಿ ಮಾದರಿಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರದಲ್ಲಿ ಶೀತಲೀಕರಣ ಘಟಕಗಳನ್ನು ಸ್ಥಾಪಿಸುತ್ತೇವೆ. ಈ ಪ್ರದೇಶದ ಜಿಲ್ಲಾ ಕೇಂದ್ರಗಳಲ್ಲಿ ನೂಲು ಬ್ಯಾಂಕ್‌ಗಳನ್ನು ಸ್ಥಾಪಿನೆ ಮತ್ತು ಸ್ಟಾರ್ಟ್ ಅಪ್‌ಗಳ ಸಹಭಾಗಿತ್ವದೊಂದಿಗೆ ಡಿಜಿಟಲ್ ಪರಿಸರ ವ್ಯವಸ್ಥೆ ರೂಪಿಸಲು ಫಾರ್ಮ್ ಟು ರಿಟೇಲ್ ಯೋಜನೆ ಜಾರಿಗೊಳಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.
5. ಈ ಪ್ರದೇಶದಲ್ಲಿ ತೆಂಗು ಆಧಾರಿತ ಕೈಗಾರಿಕೆಗಳನ್ನು ಪುನರುಜ್ಜಿವನಗೊಳಿಸಲು ಮತ್ತು ತೆಂಗು ಉತ್ಪನ್ನಗಳ ರಫ್ತು ಉತ್ತೇಜಿಸಲು 50 ಕೋಟಿ ರೂ. ಅನುದಾನವನ್ನು ನೀಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.
6. ಹಳೇ ಮೈಸೂರು ಪ್ರದೇಶದಲ್ಲಿ ಪ್ರವಾಸೋದ್ಯಮದ ಸುಧಾರಣೆಗಾಗಿ 100 ಕೋಟಿ ರೂ. ಮಂಜೂರು ಮಾಡುವ ಜತೆಗೆ ಈ ಕೆಳಗಿನವುಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.
* ಶ್ರವಣಬೆಳಗೊಳದಲ್ಲಿ ಆಧುನಿಕ ವಸತಿ ಸೌಕರ್ಯ ಸ್ಥಾಪನೆ ಮತ್ತು ಬಸ್ ಸಂಪರ್ಕ ಸುಧಾರಣೆ.
*ಟಿ ನರಸೀಪುರ ಮತ್ತು ಕೆ.ಆರ್ ಪೇಟೆ ನಡೆಯುವ ತ್ರಿವೇಣಿ ಸಂಗಮ ಕುಂಭ ಮೇಳಕ್ಕೆ ಅನುಕೂಲವಾಗುವಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸುವುದು.
7. ಚಾಮರಾಜನಗರದಲ್ಲಿ ಏಮ್ಸ್ ಮಾದರಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಸ್ಥಾಪಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.












Click it and Unblock the Notifications