KPSC: ತಕ್ಷಣ ಸಂಪೂರ್ಣ ಕೆಪಿಎಸ್‌ಸಿ ಪುನರ್ ರಚಿಸಿ, ಸಿದ್ದರಾಮಯ್ಯಗೆ ಪತ್ರ

ಬೆಂಗಳೂರು, ಫೆಬ್ರವರಿ 17: ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಅದರಲ್ಲಿಯೂ ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ಪೂರ್ವಭಾವಿ ಪರೀಕ್ಷೆಯಲ್ಲಿನ ಕನ್ನಡ ದೋಷಗಳ ಬಳಿಕ ಕೆಪಿಎಸ್‌ಸಿ ಕಾರ್ಯ ವೈಖರಿ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ನಾಟಕ ಸರ್ಕಾರ ಕೆಪಿಎಸ್‌ಸಿಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಡಿ. ವಿ. ಸದಾನಂದ ಗೌಡ ಕೆಪಿಎಸ್‌ಸಿ ಪುನರ್ ರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾರೆ. ಕೆಪಿಎಸ್‌ಸಿಯ ನಿರಂತರ ಅವ್ಯವಸ್ಥೆ - ಕರ್ನಾಟಕ ಸರ್ಕಾರದ ನಿರ್ಲಕ್ಷ್ಯದಿಂದ ಸಾವಿರಾರು ಯುವಕರ ಭವಿಷ್ಯ ಅಂಧಕಾರದಲ್ಲಿದೆ ಎಂದು ಆರೋಪಿಸಿದ್ದಾರೆ.

BJP Demand For Immediate Revamp Of KPSC

ಪತ್ರದ ವಿವರ: ಡಿ. ವಿ. ಸದಾನಂದ ಗೌಡರು ತಮ್ಮ ಪತ್ರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ ನೇಮಕಾತಿ ಪರೀಕ್ಷೆಗಳಲ್ಲಿನ ನಿರಂತರ ಅಶುದ್ಧತೆಗಳು ಸಾವಿರಾರು ಪ್ರತಿಭಾನ್ವಿತ ಯುವಕರ ಭವಿಷ್ಯವನ್ನು ಅಂಧಕಾರಕ್ಕಿಳಿಸುತ್ತಿವೆ. ಇತ್ತೀಚಿನ ಕನ್ನಡ ಅನುವಾದ ದೋಷಗಳು ಮಾತ್ರವಲ್ಲ, ಈ ಹಿಂದಿನ ಅನೇಕ ಪರೀಕ್ಷೆಗಳಲ್ಲೂ ನಡೆದ ಅಕ್ರಮಗಳು, ಅಶಿಸ್ತಿನ ಕೆಲಸ ಹಾಗೂ ಆಯೋಗದ ನಿರ್ಲಕ್ಷ್ಯ ದೃಢವಾಗಿ ಆಕ್ಷೇಪಾರ್ಹ ಎಂದು ಹೇಳಿದ್ದಾರೆ.

ನಾನು ಇತ್ತೀಚೆಗೆ ಕೆಲ ವಿದ್ಯಾರ್ಥಿಗಳ ಮಾತುಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯೋಗ್ಯತೆ ಹಾಗೂ ಶ್ರಮದ ಮೇಲೆ ನಮ್ಮ ಭವಿಷ್ಯ ನಿರ್ಮಿಸಿಕೊಳ್ಳಲು ಹೊರಟಿದ್ದೇವೆ, ಆದರೆ ಸರ್ಕಾರ ಮತ್ತು ಆಯೋಗದ ನಿರ್ಲಕ್ಷ್ಯದಿಂದ ನಮ್ಮ ಕನಸುಗಳು ಕಿತ್ತುಕೊಳ್ಳಲಾಗುತ್ತಿದೆ ಎಂಬ ಅವರ ನೋವಿನ ಮಾತು ಬಹಳ ಖೇದಖರವಾಗಿದೆ. ಅವರ ಆಕ್ರೋಶ ಮತ್ತು ನಿರಾಸೆ ಪರಿಗಣನೆಗೆ ಒಳಗಾಗಲೇಬೇಕು. ಇದು ಕೆಲವೊಬ್ಬರ ವೈಯಕ್ತಿಕ ಸಮಸ್ಯೆಯಾಗಿರುವುದಿಲ್ಲ, ಇದು ಕರ್ನಾಟಕದ ಇಡೀ ಯುವಜನತೆಗೆ ಹೊಡೆತವಾಗಿದೆ ಎಂದು ತಿಳಿಸಿದ್ದಾರೆ.

ಈ ಎಲ್ಲಾ ಗೊಂದಲಕ್ಕೆ ಸರ್ಕಾರವೇ ಹೊಣೆ. ಕೆಪಿಎಸ್‌ಸಿಯನ್ನು ಸರಿಪಡಿಸುತ್ತೇವೆ, ದೋಷಗಳನ್ನು ತಿದ್ದುತ್ತೇವೆ ಎಂದು ನೀಡಿದ ಭರವಸೆಗಳು ಕೇವಲ ಮಾತಾಗಿವೆ. ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸಿದ ಕಾರಣಕ್ಕೆ ಆಯೋಗವನ್ನು ಹೊಗಳಲು ಸಾಧ್ಯವಿಲ್ಲ. ಕೆಪಿಎಸ್‌ಸಿಯ ನಿರಂತರ ಅವ್ಯವಸ್ಥೆ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ನೋಡಿದರೆ, ಈ ಆಯೋಗವನ್ನು ಇನ್ನಷ್ಟು ಮುಂದುವರಿಸಲು ಯಾವುದೇ ಅರ್ಥವಿಲ್ಲ.

ನಾನು ಕರ್ನಾಟಕ ಸರ್ಕಾರವನ್ನು ಹಾಗೂ ಕೆಪಿಎಸ್‌ಸಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಆಯೋಗದ ಕಛೇರಿಯಲ್ಲಿ ನಡೆಯುತ್ತಿರುವ ಹಗರಣಗಳು ಮತ್ತು ಕೇವಲ ರಾಜಕೀಯ ನೆಲೆಯಿಂದ ನೇಮಕವಾಗುತ್ತಿರುವ ಅಧಿಕಾರಿಗಳು ಈ ವಿಫಲತೆಗೆ ಜವಾಬ್ದಾರಿಗಳಾಗಿದ್ದಾರೆ.

ಇದನ್ನು ಸುಧಾರಿಸಲು ಕೆಲವರನ್ನು ಅಮಾನತು ಮಾಡುವ ಮಟ್ಟಿಗೆ ಮಾತ್ರ ಸೀಮಿತವಾದ ಕ್ರಮ ಬೇಡ, ಕೆಪಿಎಸ್‌ಸಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಹೊಸ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಯೋಗವನ್ನು ರಚಿಸಬೇಕು ಎಂದು ಡಿ. ವಿ. ಸದಾನಂದ ಗೌಡ ಒತ್ತಾಯಿಸಿದ್ದಾರೆ.

ಈ ಪರೀಕ್ಷೆಗಳ ಪೂರಕವಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಹಕ್ಕುಗಳನ್ನು ಒದಗಿಸಬೇಕು. ಒಮ್ಮೆ ಮಾತ್ರವಲ್ಲ, ಎರಡು ಬಾರಿ ಅಲ್ಲ, ಏನೋ ಬಾರಿ ಈ ಆಯೋಗ ತಪ್ಪು ಮಾಡಿದೆ. ಪ್ರತ್ಯೇಕ ನ್ಯಾಯಾಂಗ ತನಿಖೆ ನಡೆಸಿ, ವೈಫಲ್ಯಕ್ಕೆ ಹೊಣೆಗಾರರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪ್ರತಿಭಾನ್ವಿತ ಯುವಕರು ಸರ್ಕಾರದ ಅವ್ಯವಸ್ಥೆಗೆ ಬಲಿಯಾಗಬಾರದು ಎಂದು ಹೇಳಿದ್ದಾರೆ.

ಬಿ. ವೈ. ವಿಜಯೇಂದ್ರ ಪೋಸ್ಟ್: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸಹ ಈ ಕುರಿತು ಟ್ವೀಟ್ ಮಾಡಿದ್ದಾರೆ. 'ದೇಶಾದ್ಯಂತ ತನ್ನ ಯಡವಟ್ಟುಗಳಿಂದಲೇ ಚರ್ಚೆಯಲ್ಲಿರುವ ಕೆಪಿಎಸ್‌ಸಿಯ ಅಕ್ರಮಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಂಡು ಬಯಲಾಗುತ್ತಿವೆ. ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳಿಗೆ ಪ್ರತಿಯೊಂದು ಪರೀಕ್ಷೆಗಳಲ್ಲೂ ಗೊಂದಲಗಳನ್ನು ಸೃಷ್ಟಿಸಿ ಅಕ್ರಮಗಳ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಮುನ್ನವೂ ಗೊಂದಲ ಸೃಷ್ಟಿಸಿ, ಪರೀಕ್ಷೆಯ ನಂತರವೂ ಸಂಕಟ ತಂದೊಡ್ಡಿತ್ತು. ಇದೀಗ ಕೆಪಿಎಸ್‌ಸಿಯ ಭಾರಿ ಅಕ್ರಮ ಬಯಲಾಗುವ ಮೂಲಕ ಉದ್ಯೋಗದಾತ ಸಂಸ್ಥೆಯ ಹುಳುಕು ಸರಿಪಡಿಸುವಲ್ಲಿ ರಾಜ್ಯದ ಕಾಂಗ್ರೆಸ್
ಸರ್ಕಾರವೂ ಸಂಪೂರ್ಣ ವಿಫಲವಾಗಿದೆ' ಎಂದು ದೂರಿದ್ದಾರೆ.

'ಕರ್ನಾಟಕದ ಆಡಳಿತದಲ್ಲಿ ದಕ್ಷತೆ ತುಂಬಬೇಕಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಆಯ್ಕೆ ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗದ ವ್ಯವಸ್ಥೆಗೆ ಅಕ್ರಮಗಳ ಸುರುಳಿ ಸುತ್ತಿಕೊಂಡಿರುವಾಗ ಉದ್ಯೋಗಾಕಾಂಕ್ಷಿತ ರಾಜ್ಯದ ಅಭ್ಯರ್ಥಿಗಳಿಗೆ ನ್ಯಾಯ ಸಿಗುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ' ಎಂದು ಪ್ರಶ್ನಿಸಿದ್ದಾರೆ.

'ರಾಜ್ಯದಲ್ಲಿರುವ ದಪ್ಪಚರ್ಮದ ಹಾಗೂ ಭ್ರಷ್ಟಾಚಾರದ ಕಪ್ಪುಮಸಿ ಅಂಟಿಸಿಕೊಂಡಿರುವ ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಅಕ್ರಮವೆಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಲಕ್ಷಾಂತರ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನ್ಯಾಯಯುತ ಮಾರ್ಗದೆಡೆಗೆ ಹೆಜ್ಜೆ ಹಾಕಲಿ ಎಂದು ಎಚ್ಚರಿಸುತ್ತೇನೆ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+