ಡಿಕೆ ಸಹೋದರರ ಗೂಂಡಾಗಿರಿ, ನೀವು ಅಷ್ಟೊಂದು ವೀಕ್ ಯಾಕಾಗಿದ್ದೀರಿ?; ಸಿಎಂಗೆ ಬಿಜೆಪಿ ಪ್ರಶ್ನೆ
ಬೆಂಗಳೂರು, ಏಪ್ರಿಲ್ 11: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಪರ ಪ್ರಚಾರಕ್ಕೆ ತೆರಳಿದ್ದ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆಯನ್ನು ರಾಜ್ಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಖಂಡಿಸಿದ್ದಾರೆ.
ಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್‌ನ ಗೂಂಡಾಗಳು ಸಕ್ರಿಯಗೊಂಡಿದ್ದು ಅಲ್ಲದೆ, ಅವರನ್ನು ಮಜಾವಾದಿ ಸಿದ್ದರಾಮಯ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ. ರೇಷ್ಮೆ ಬೆಳೆಗಾರ ಹಾಗೂ ಬಿಜೆಪಿ ಕಾರ್ಯಕರ್ತ ನವೀನ್ ಮೇಲೆ ಕಾಂಗ್ರೆಸ್ಸಿನ ಗೂಂಡಾ ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೆ ಸಣ್ಣ ಕೇಸ್ ಹಾಕಿ ರಾಜಾರೋಷವಾಗಿ ಬೀದಿಗೆ ಬಿಟ್ಟಿದೆ ಎಂದು ಬಿಜೆಪಿ ಕಿಡಿಕಾರಿದೆ.

ಆ ದಿನಗಳಂತೆ ಚುನಾವಣೆ ಗೆಲ್ಲಲು ಗೂಂಡಾಗಿರಿ ಮಾಡುತ್ತಿರುವ ಅಣ್ಣ-ತಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವೇ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಮತದಾರರನ್ನು ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಮಕೈಗೊಂಡು ನಿಷ್ಪಕ್ಷಪಾತವಾಗಿ ರಾಜ್ಯದಲ್ಲಿ ಚುನಾವಣೆ ನಡೆಯಲು ಅವಕಾಶ ಕಲ್ಪಿಸಿ, ಮತದಾರರಲ್ಲಿ ಧೈರ್ಯ ತುಂಬಬೇಕಿದೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೂಡ ಈ ಘಟನೆಯನ್ನು ಖಂಡಿಸಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಗ್ಯಾರೆಂಟಿ ಆಗುತ್ತಿದ್ದಂತೆ, ಶಾಶ್ವತವಾಗಿ CM-in-waiting ಆಗಿ ಉಳಿಯಬೇಕಾಗುತ್ತಲ್ಲಾ ಎನ್ನುವ ಹತಾಶೆಯಿಂದ ಕಂಗಾಲಾಗಿರುವ ಡಿ.ಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ ಸುರೇಶ್ ಮತದಾರರ ಮೇಲಿನ ಕೋಪಕ್ಕೆ ಗೂಂಡಾಗಿರಿಗೆ ಇಳಿದಿದ್ದಾರೆ.
ಬಿಜೆಪಿ ಕಾರ್ಯಕರ್ತ ಸಹೋದರ ನವೀನ್ ಮೇಲೆ ಕಾಂಗ್ರೆಸ್ಸಿನ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೆ ಕಾಟಾಚಾರಕ್ಕೆ ಕೇಸ್ ಹಾಕುವ ಮೂಲಕ ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ ಸಿಎಂ ಸಿದ್ದರಾಮಯ್ಯ ನವರೇ? ಸ್ಟ್ರಾಂಗ್ ಸಿಎಂ ಎಂದು ಹೇಳಿಕೊಳ್ಳುವ ನೀವು ಡಿಕೆ ಸಹೋದರದ ಮುಂದೆ ಅಷ್ಟೊಂದು ವೀಕ್ ಯಾಕಾಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರು ನಿರ್ಭೀತಿಯಿಂದ ಮತದಾನ ಮಾಡುವ ವಾತಾವರಣ ಕೆಡಸಿ ಮತದಾರರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಈ ದುಷ್ಕೃತ್ಯಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು. ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಮಕೈಗೊಂಡು ನಿಷ್ಪಕ್ಷಪಾತವಾಗಿ ಅವಕಾಶ ಕಲ್ಪಿಸಿ, ಮತದಾರರಲ್ಲಿ ಧೈರ್ಯ, ವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.












Click it and Unblock the Notifications