Ayodhya Ram Mandir: ಬಿಜೆಪಿಯಿಂದ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ: ಸ್ಪಷ್ಟನೆ ನೀಡಿದ ಜಗದೀಶ್ ಹಿರೇಮನಿ
ಬೆಂಗಳೂರು, ಜನವರಿ 01: ರಾಜ್ಯದಿಂದ ಅಯೋಧ್ಯೆಗೆ 25 ರೈಲುಗಳು ಹೋಗಲಿವೆ; ಆಸಕ್ತರು ಹೆಸರು ಕೊಡಬೇಕು ಎಂಬ ಮಾಹಿತಿ ಇರುವ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕಳೆದ ವರ್ಷದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮರು ಪೋಸ್ಟ್ ಮಾಡುತ್ತಿದ್ದಾರೆ ಎಂದು ಅಯೋಧ್ಯೆ ಶ್ರೀ ರಾಮ ಮಂದಿರ ದರ್ಶನ ಅಭಿಯಾನ ರಾಜ್ಯ ಸಹ ಸಂಚಾಲಕ ಜಗದೀಶ್ ಹಿರೇಮನಿ ಅವರು ತಿಳಿಸಿದ್ದಾರೆ.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ವರ್ಷ ಬಿಜೆಪಿ ವತಿಯಿಂದ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಕರೆದುಕೊಂಡು ಹೋಗುವ ಕಾರ್ಯಕ್ರಮ ಸದ್ಯಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದ ಹಿತೈಷಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಇದರ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ವರ್ಷ ಜನವರಿ- ಫೆಬ್ರವರಿಯಲ್ಲಿ ಬಿಜೆಪಿಯಿಂದ ಅಯೋಧ್ಯೆಗೆ ಕರೆದುಕೊಂಡು ಹೋಗುವ ಯೋಜನೆ ಇಲ್ಲ ಎಂದು ವಿವರ ನೀಡಿದರು.

2024 ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಷ್ಠಾಪನೆ ಮಾಡಿದ್ದ ಅಯೋಧ್ಯೆಗೆ ಇಡೀ ದೇಶಾದ್ಯಂತ ಶ್ರೀ ರಾಮ ಮಂದಿರ ದರ್ಶನ ಅಭಿಯಾನವನ್ನು ನಾವು ಕಳೆದ ವರ್ಷ ಜನವರಿ- ಫೆಬ್ರವರಿಯಲ್ಲಿ ನಡೆಸಿದ್ದೆವು ಎಂದು ವಿವರಿಸಿದರು. 25 ರೈಲುಗಳಲ್ಲಿ 26 ಸಾವಿರ ರಾಮಭಕ್ತರನ್ನು ಅಯೋಧ್ಯೆಗೆ ದರ್ಶನಕ್ಕೆ ಕಳುಹಿಸಿದ್ದೆವು ಎಂದು ತಿಳಿಸಿದರು.
ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆಗೆ ಆಗ್ರಹ
ಬಾಣಂತಿಯರ ಸಾವನ್ನು ತಡೆಯಲು ವಿಫಲರಾದ ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕು.ಮಂಜುಳಾ ಅವರು ಆಗ್ರಹಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಬಾಣಂತಿಯರ ಸಾವನ್ನು ತಡೆಯುವುದರಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಅವರು ರಾಜೀನಾಮೆ ಕೊಟ್ಟು ಮನೆಗೆ ವಾಪಸ್ ಹೋಗಬೇಕು ಎಂದು ಆಗ್ರಹಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಲ್ಲಿವರೆಗೆ ಬಾಣಂತಿ ಸಾವಿನ ಸಂಬಂಧ ಒಬ್ಬರನ್ನೂ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ, ಅವರು ಕೂಡ ರಾಜೀನಾಮೆ ಕೊಟ್ಟು ಮನೆಗೆ ವಾಪಸ್ ಹೋಗಬೇಕು ಎಂದು ಒತ್ತಾಯಿಸಿದರು.
ಬಾಣಂತಿಯರ ಸಾವನ್ನು ಸರಕಾರ ನಿಲ್ಲಿಸದೆ ಇರುವುದನ್ನು ಖಂಡಿಸಿ ಇಡೀ ರಾಜ್ಯದಲ್ಲಿ, ಪ್ರತಿದಿನ 5 ಜಿಲ್ಲೆಗಳಲ್ಲಿ ರಾಜ್ಯ ಮಹಿಳಾ ಮೋರ್ಚಾ ಜಿಲ್ಲಾ ಘಟಕಗಳು ನಾಳೆಯಿಂದ ಪ್ರತಿಭಟನೆ ನಡೆಸಲಿವೆ ಎಂದ ಅವರು, ಇದೊಂದು ಲಜ್ಜೆಗೆಟ್ಟ ಸರಕಾರ. ಇಲ್ಲಿನವರೆಗೆ ಯಾವುದೇ ಸಚಿವರು ತೆರಳಿ ಭೇಟಿ ಮಾಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮೃತ ಪ್ರತಿ ಬಾಣಂತಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು. ಮಕ್ಕಳನ್ನು ಈ ಸರಕಾರ ದತ್ತು ಸ್ವೀಕಾರ ಮಾಡಿ, ಅವರಿಗೆ ಆರ್ಥಿಕ- ಸಾಮಾಜಿಕ- ಶೈಕ್ಷಣಿಕ ಭದ್ರತೆಯನ್ನು ಕೊಡಬೇಕೆಂದು ಅವರು ಆಗ್ರಹಿಸಿದರು. ಕರ್ನಾಟಕದ ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರಕಾರವು ಹೊಸ ವರ್ಷದಲ್ಲಿ ರಾಜ್ಯದ ಮಹಿಳೆಯರಿಗೆ ಬಾಣಂತಿಯರ ಸಾವಿನ ಗ್ಯಾರಂಟಿಯನ್ನು ಕೊಟ್ಟಿದೆ ಎಂದು ಟೀಕಿಸಿದರು. ನಿನ್ನೆ ಕೊಪ್ಪಳದಲ್ಲಿ ಗರ್ಭಿಣಿ ಶ್ರೀಮತಿ ರೇಣುಕಾ ಹಿರೇಮನಿ ಎಂಬವರು ಸಾವನ್ನಪ್ಪಿದ್ದು, ಅವರು ಹೆರಿಗೆಗಾಗಿ ಬಂದಿದ್ದರು ಎಂದು ವಿವರಿಸಿದರು.
ಮೊದಲನೇ ಹೆರಿಗೆ ಸಂಬಂಧ ಕುಷ್ಟಗಿಗೆ ತವರು ಮನೆಗೆ ತೆರಳಿದ್ದ 23 ವರ್ಷದ ಅವರು, ಕುಷ್ಟಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕಳಿಸಿದ್ದರು ಎಂದರಲ್ಲದೆ, ಇದೇನಾ ಸಿದ್ದರಾಮಯ್ಯರ ಸರಕಾರದ ಸಾವಿನ ಗ್ಯಾರಂಟಿ ಎಂದು ಪ್ರಶ್ನಿಸಿದರು. ಇದೊಂದು ಹೃದಯವಿದ್ರಾವಕ ಘಟನೆ. ನಾವೆಲ್ಲ ನೋವು ಅನುಭವಿಸುವಂತಾಗಿದೆ ಎಂದು ಹೇಳಿದರು.












Click it and Unblock the Notifications