ಬಿಜೆಪಿ ಅಭ್ಯರ್ಥಿಗಳಿಗೆ ಭಾರವಾಯಿತೇ ಮೋದಿ ಸಮಾವೇಶದ ವೆಚ್ಚ!
ಬೆಂಗಳೂರು, ಜೂನ್ 18; ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಕಾಂಗ್ರೆಸ್ 135 ಸ್ಥಾನದಲ್ಲಿ ಗೆದ್ದು ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಜೆಪಿ ಹೀನಾಯ ಸೋಲು ಕಂಡಿದೆ. ಆದರೆ ಅಭ್ಯರ್ಥಿಗಳ ಜೇಬಿಗೆ ಚುನಾವಣಾ ವೆಚ್ಚ ಭಾರವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸಿದ್ದರು. ಪಕ್ಷ ಗೆದ್ದಿರುವುದು ಕೇವಲ 66 ಸೀಟು. ಆದರೆ ಮೋದಿ ಸಮಾವೇಶದ ವೇದಿಕೆ ವೆಚ್ಚವನ್ನು ಪಕ್ಷದ ಅಭ್ಯರ್ಥಿಗಳು ತುಂಬಬೇಕಿದೆ. ಇದು ಕೆಲವು ಅಭ್ಯರ್ಥಿಗಳಿಗೆ ಈಗ ಸಂಕಷ್ಟ ತಂದಿದೆ. ಚುನಾವಣೆ ಸೋತರು ವೆಚ್ಚ ಅವರ ಖಾತೆಗೆ ಬಂದು ಸೇರಿದೆ.

ನರೇಂದ್ರ ಮೋದಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮೇ 3ರಂದು ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ವೇದಿಕೆಯಲ್ಲಿ ಇದ್ದರು. ಈಗ ಸಮಾವೇಶದ ವೇದಿಕೆ ವೆಚ್ಚವನ್ನು ಎಲ್ಲಾ ಅಭ್ಯರ್ಥಿಗಳಿಗೆ ಹಂಚಲಾಗಿದೆ. ಆದರೆ ಇವರಲ್ಲಿ ಚುನಾವಣೆ ಗೆದ್ದವರು ಇಬ್ಬರು ಮಾತ್ರ.
1.10 ಕೋಟಿ ರೂ. ವೆಚ್ಚವಾಗಿದೆ; ಚುನಾವಣಾ ಆಯೋಗದಿಂದ ನೇಮಕಗೊಂಡ ವೆಚ್ಚ ವೀಕ್ಷಕರು ಮೋದಿ ಅಂಕೋಲಾದ ಸಮಾವೇಶದ ವೇದಿಕೆ ವೆಚ್ಚ 1.10 ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ವೆಚ್ಚವನ್ನು ಎಲ್ಲಾ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಿದರೆ ತಲಾ 18 ಲಕ್ಷ ರೂ. ವೆಚ್ಚವಾಗಲಿದೆ. ಈ ವೆಚ್ಚ ಈಗ ಅಭ್ಯರ್ಥಿಯಾದವರಿಗೆ, ಶಾಸಕರಿಗೆ ಹೊರೆಯಾಗಲಿದೆ.
ವೇದಿಕೆಯಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ ಗೆದ್ದಿರುವುದು ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಮತ್ತು ಕುಮಟಾದಲ್ಲಿ ದಿನಕರ್ ಶೆಟ್ಟಿ. ಈಗ ಸಮಾವೇಶದ ವೆಚ್ಚ ಹಂಚಿಕೆ ಆಗಿರುವುದು ಆಯ್ಕೆಯಾಗಿರುವ ಶಾಸಕರಿಗೂ ಸಹ ಸಂಕಷ್ಟ ತಂದಿದೆ.
ಚುನಾವಣಾ ಆಯೋಗ ಒಬ್ಬ ಅಭ್ಯರ್ಥಿ ಗರಿಷ್ಠ 40 ಲಕ್ಷ ವೆಚ್ಚ ಮಾಡಬಹುದು ಎಂದು ಹೇಳಿತ್ತು. ಈಗ ಶಾಸಕರ ಚುನಾವಣಾ ವೆಚ್ಚದಲ್ಲಿ ಮೋದಿ ಸಮಾವೇಶದ 18 ಲಕ್ಷ ಸೇರುತ್ತದೆ. ಚುನಾವಣಾ ವೆಚ್ಚ ಹೆಚ್ಚಾದರೆ ಪ್ರಕರಣದ ದಾಖಲಾಗುತ್ತದೆ, ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಹ ಕಾನೂನಿನಲ್ಲಿ ಅವಕಾಶವಿದೆ.
ಅಭ್ಯರ್ಥಿಗಳ ಹೆಸರಿಗೆ ವೇದಿಕೆ ಕಾರ್ಯಕ್ರಮದ ವೆಚ್ಚ ಮಾತ್ರ ಸೇರುತ್ತದೆ. ಈ ಸಮಾವೇಶ ಸಾರಿಗೆ ವ್ಯವಸ್ಥೆಗೆ 1.20 ಕೋಟಿ ಖರ್ಚು ಮಾಡಲಾಗಿದೆ. ಅಭ್ಯರ್ಥಿಗಳು ಈ ವೆಚ್ಚ ತಮಗೆ ಸೇರಿಲ್ಲ ಎಂದು ಲಿಖತವಾಗಿ ಹೇಳಿಕೆ ಕೊಟ್ಟಿದ್ದಾರೆ. ಆದ್ದರಿಂದ ಸಾರಿಗೆ ವ್ಯವಸ್ಥೆ ಮಾಡಿದ 192 ಜನರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವಾಗ ಹೊಸದಾದ ಬ್ಯಾಂಕ್ ಖಾತೆ ತೆರೆದು ಚುನಾವಣಾ ವೆಚ್ಚದ ಮಾಹಿತಿ ನೀಡಬೇಕು. ಆಯೋಗ ನಿಗದಿ ಮಾಡಿದ ವೆಚ್ಚಕ್ಕಿಂತ ಹೆಚ್ಚು ವೆಚ್ಚ ಮಾಡಿದರೆ ಪ್ರಕರಣ ದಾಖಲು ಮಾಡಲಾಗುತ್ತದೆ. ಆಯೋಗ ಚುನಾವಣಾ ವೆಚ್ಚದ ಮೇಲೆ ಕಣ್ಣಿಡಲು ವೆಚ್ಚ ವೀಕ್ಷಕರನ್ನು ನೇಮಕ ಮಾಡಿರುತ್ತದೆ.
ಗೆದ್ದ ಅಭ್ಯರ್ಥಿಗಳು; 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿರುವುದು 2 ಸೀಟುಗಳು ಮಾತ್ರ. ಹಳಿಯಾಳದಲ್ಲಿ ಆರ್. ವಿ. ದೇಶಪಾಂಡೆ (ಕಾಂಗ್ರೆಸ್), ಕಾರವಾರ ಸತೀಶ್ ಸೈಲ್ (ಕಾಂಗ್ರೆಸ್), ಭಟ್ಕಳ ಮಂಕಾಳು ವೈದ್ಯ (ಕಾಂಗ್ರೆಸ್), ಶಿರಸಿ ಭೀಮಣ್ಣ ನಾಯಕ್ (ಕಾಂಗ್ರೆಸ್) ಗೆಲುವು ಕಂಡಿದ್ದಾರೆ.
ಕುಮಟಾ ದಿನಕರ ಶೆಟ್ಟಿ (ಬಿಜೆಪಿ), ಯಲ್ಲಾಪುರ ಶಿವರಾಮ ಹೆಬ್ಬಾರ್ (ಬಿಜೆಪಿ) ಮಾತ್ರ ಗೆಲುವು ಸಾಧಿಸಿದ್ದಾರೆ. ಹಾಲಿ ಬಿಜೆಪಿ ಶಾಸಕರಾಗಿದ್ದ ಕಾರವಾರದ ರೂಪಾಲಿ ನಾಯಕ್, ಶಿರಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಸೋಲು ಕಂಡಿದ್ದರು.












Click it and Unblock the Notifications