ಖರ್ಗೆ ಕುಟುಂಬ ಅಳಿಸಿಹಾಕಲು ಬಿಜೆಪಿ ಅಭ್ಯರ್ಥಿ ಸಂಚು ಆರೋಪ: ಆಡಿಯೊ ಹಂಚಿಕೊಂಡ ಡಿಕೆಶಿ, ಪ್ರಿಯಾಂಕ್ ಹೇಳಿದ್ದೇನು?
ಬೆಂಗಳೂರು, ಮೇ 06: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬವನ್ನು ಅಳಿಸಿ ಹಾಕಲು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರು ಸಂಚು ರೂಪಿಸಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಅವರಿಗೆ ಸಂಬಂಧಿಸಿದ್ದು ಎನ್ನಲಾಗಿರುವ ಆಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲು ಕಾಣುತ್ತಿದೆ ಮತ್ತು ನಿಧಾನವಾಗಿ ಮುಖವಾಡ ಕಳಚಿ ಬೀಳುತ್ತಿದೆ. ಕರ್ನಾಟಕದ ಪುತ್ರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಳಿಸಿ ಹಾಕಲು ಬಿಜೆಪಿ ನಾಯಕರೊಬ್ಬರು ಸಂಚು ರೂಪಿಸಿ ಸಿಕ್ಕಿಬಿದ್ದಿರುವುದು ತೀವ್ರ ಕಳವಳಕಾರಿ ಮತ್ತು ಸಮಸ್ಯಾತ್ಮಕವಾಗಿದೆ' ಎಂದು ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

'ಖರ್ಗೆ ಮತ್ತು ಅವರ ಕುಟುಂಬವನ್ನು ಅಳಿಸಿಹಾಕುವುದಾಗಿ ಬಿಜೆಪಿ ಮುಖಂಡ ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ಭಯಾನಕ ಬೆದರಿಕೆಯ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಅಥವಾ ಚುನಾವಣಾ ಆಯೋಗ ಧೈರ್ಯ ಮಾಡುತ್ತದೆಯೇ?' ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಶೇ 40 ಕಮಿಷನ್ನಿನ ಬಿಜೆಪಿ 40 ಕ್ರಿಮಿನಲ್ ಪ್ರಕರಣ ಇರುವ ಮಣಿಕಂಠ ರಾಥೋಡನಿಗೆ ಟಿಕೆಟ್ ನೀಡಿದ್ದೇ ಖರ್ಗೆ ಕುಟುಂಬವನ್ನು ಮುಗಿಸುವುದಕ್ಕಾ? ದಲಿತ ನಾಯಕ ಪರಮೇಶ್ವರ್ ಮೇಲಿನ ದಾಳಿ, ದಲಿತ ನಾಯಕ ಖರ್ಗೆಯವರ ಕುಟುಂಬ ಕೊಲ್ಲಲು ಸಂಚು. ಈ ಷಡ್ಯಂತ್ರಗಳೆಲ್ಲಾ ಯಾರದ್ದು ಬಿಜೆಪಿ?ನಾಗಪುರದ್ದೋ, ಅಮಿತ್ ಶಾರದ್ದೋ?' ಎಂದು ಕೇಳಿದೆ.
Dear @narendramodi ji, since you are in Karnataka, can you please answer why @BJP4Karnataka Chittapur candidate wants to wipe out our entire family?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 6, 2023
Your endorsement of such extremists has led to such antisocial elements becoming MLA candidates. pic.twitter.com/DHYpGEk8KI
'ದೆಹಲಿಯಲ್ಲಿ ಖರ್ಗೆ ಮೋದಿ ಸರ್ಕಾರಕ್ಕೆ ದುಃಸ್ವಪ್ನದಂತೆ ಕಾಡುತ್ತಿದ್ದರೆ, ಕರ್ನಾಟಕದಲ್ಲಿ ಪ್ರಿಯಾಂಕ್ ಖರ್ಗೆ ಅವರು ಇಲ್ಲಿನ ಬಿಜೆಪಿ ಸರ್ಕಾರಕ್ಕೆ ಎಡೆಬಿಡದೆ ಕಾಡಿದ್ದಾರೆ. ಹಲವು ಹಗರಣಗಳನ್ನು ಪ್ರಶ್ನಿಸಿದ್ದಾರೆ. ಈ ಕಾರಣಕ್ಕೆ ಇಡೀ ಖರ್ಗೆ ಕುಟುಂಬವನ್ನು ಮುಗಿಸುವ ಸಂಚೇ ಬಿಜೆಪಿ? ಕ್ರಿಮಿನಲ್‌ಗೆ ಟಿಕೆಟ್ ನೀಡಿದ್ದು ಇದಕ್ಕೇನಾ?' ಎಂದು ಪ್ರಶ್ನಿಸಿದೆ.
'ದಲಿತ ನಾಯಕರೊಬ್ಬರು ನನ್ನನ್ನು ಈ ಪರಿ ಕಾಡುತ್ತಾರೆ ಎಂಬ ಇಗೋ ಹರ್ಟ್ ಆಗಿದೆಯೇ ನರೇಂದ್ರ ಮೋದಿ ಅವರೇ ದೇಶದ ಪ್ರಮುಖ ನಾಯಕರು, ದಲಿತ ಸಮುದಾಯಗಳ ಸಾಕ್ಷಿಪ್ರಜ್ಞೆ, ವಿರೋಧ ಪಕ್ಷದ ನಾಯಕರಾದ ಖರ್ಗೆ ಅವರ ಹತ್ಯೆಗೆ ಸುಪಾರಿ ಕೊಟ್ಟವರಾರು? ತಮ್ಮದೇ ಪಕ್ಷದ ಅಭ್ಯರ್ಥಿಯ ಸಂಚು ಬಯಲಾದರೂ ಪ್ರಧಾನಿ ಏಕೆ ಮಾತಾಡುತ್ತಿಲ್ಲ?' ಎಂದು ಕೇಳಿದೆ.
'ಪ್ರೀತಿಯ ನರೇಂದ್ರ ಮೋದಿಜೀ, ನೀವು ಕರ್ನಾಟಕದಲ್ಲಿರುವುದರಿಂದ ದಯವಿಟ್ಟು ಏಕೆ ಎಂದು ಉತ್ತರಿಸಬಹುದೇ? ಬಿಜೆಪಿ ಚಿತ್ತಾಪುರ ಅಭ್ಯರ್ಥಿ ನಮ್ಮ ಇಡೀ ಕುಟುಂಬವನ್ನೇ ಅಳಿಸಿ ಹಾಕಬೇಕಾ? ಇಂತಹ ಉಗ್ರಗಾಮಿಗಳಿಗೆ ನಿಮ್ಮ ಬೆಂಬಲವಿದೆ. ಇಂತಹ ಸಮಾಜವಿರೋಧಿಗಳು ಎಂಎಲ್ಎ ಅಭ್ಯರ್ಥಿಗಳಾಗಲು ಕಾರಣವಾಗಿದೆ' ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.












Click it and Unblock the Notifications