135 ಶಾಸಕರಲ್ಲಿ ನಿಮ್ಮನ್ನು ಬೆಂಬಲಿಸುವವರ ಸಂಖ್ಯೆ ಎಷ್ಟು ಸಿದ್ದರಾಮಯ್ಯ ಅವರೇ!?

ಬೆಂಗಳೂರು, ಅಕ್ಟೋಬರ್‌ 31: ಅಡಿಗಡಿಗೆ ಕಾಂಗ್ರೆಸ್‌ ಸರ್ಕಾರವನ್ನು ಬಿಜೆಪಿ ಬೀಳಿಸುತ್ತಿದೆ ಎಂಬ ಸುಳ್ಳುಗಳ ಸರಪಣಿ ಪೋಣಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ 135 ಶಾಸಕರಲ್ಲಿ ನಿಮ್ಮನ್ನು ಬೆಂಬಲಿಸುವವರ ಸಂಖ್ಯೆ ಎಷ್ಟು ಎಂದು ಎದೆ ಮುಟ್ಟಿಕೊಂಡು ಹೇಳುವ ಧೈರ್ಯ ತೋರುವಿರಾ..? ಎಂದು ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ನಿಮ್ಮ 5 ತಿಂಗಳ ಭ್ರಷ್ಟ, ಅರಾಜಕತೆಯ ಆಡಳಿತಕ್ಕೆ ನಿಮ್ಮದೇ ಪಕ್ಷದ 50 ಕ್ಕೂ ಹೆಚ್ಚು ಶಾಸಕರು ನಿಮ್ಮ ನಾಯಕತ್ವವನ್ನು ವಾಚಾಮಗೋಚರವಾಗಿ ಹೋದಲ್ಲಿ ಬಂದಲ್ಲಿ ಟೀಕಿಸಿದ್ದನ್ನು ಇಷ್ಟು ಬೇಗ ಮರೆತಿರುವಿರಾ..? ಎಂದು ಪ್ರಶ್ನಿಸಿದೆ.

BJP Asked Siddaramaiah How Many Of The 135 MLAs Support You

"ಅಹಿಂದ"ದ ಹಿಂದಿನ ನಿಮ್ಮ "ಆ" ಅಸಲಿ ಮುಖವಾಡವನ್ನು ಜಗತ್ತಿಗೆ ಬಿಚ್ಚಿಟ್ಟಿದ್ದು ನಿಮ್ಮದೇ ಪಕ್ಷದ ಬಿ. ಕೆ. ಹರಿಪ್ರಸಾದ್‌ರವರು. ಸಮಾಜವಾದದೊಳಗಿನ ನಿಮ್ಮ ಮಜಾವಾದಿ ಮನಸ್ಥಿತಿಯನ್ನು ಬೆತ್ತಲುಗೊಳಿಸಿದ್ದು ಸಹ ಅವರೇ. ನಿಮ್ಮ ನಾಯಕತ್ವವೇ ಇಷ್ಟೊಂದು ದುರ್ಬಲವಾಗಿರುವಾಗ ಬೇರೆಯವರ ಮೇಲೆ ಗೂಬೆ ಕೂರಿಸುವುದು ನಿಮ್ಮ ನಿಜಗುಣವೇ..?? ಹೇಗಾದರೂ ಸರಿ ಅಧಿಕಾರಕ್ಕೆ ಬರಬೇಕೆಂದು ನೀವು ಜಾರಿಗೆ ತಂದಿರುವ ಅವಾಸ್ತವಿಕ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ ತುಂಬಿ ತುಳುಕುತ್ತಿದೆ ಎಂದು ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹಿರಾತು ಹಾಕಿಸುತ್ತೀರಿ, ಆದರೆ 5 ಗ್ಯಾರಂಟಿಗಳಿಂದ ಸರ್ಕಾರ ಸಂಪೂರ್ಣ ದಿವಾಳಿಯಾಗಿಬಿಟ್ಟಿದೆ ಎಂಬುದನ್ನು ನಿಮ್ಮದೇ ಪಕ್ಷದ ತಿಪಟೂರಿನ ಶಾಸಕ ಕೆ. ಷಡಕ್ಷರಿಯವರು ತುಂಬಿದ ಸಭೆಯಲ್ಲಿ ಹೇಳುತ್ತಾರೆ.

ನೀವು ಕೊಟ್ಟ ಜಾಹಿರಾತು ನೂರಕ್ಕೆ ನೂರರಷ್ಟು ಸುಳ್ಳು ಎಂಬುದನ್ನು ನಾವು ಸಾಬೀತುಪಡಿಸುತ್ತೇವೆ. ಷಡಕ್ಷರಿಯವರು ಹೇಳಿದ್ದು ಸಂಪೂರ್ಣ ಸುಳ್ಳು ಎಂದು ಸಾಬೀತು ಮಾಡುವ ಧೈರ್ಯ ನಿಮ್ಮಲ್ಲಿದೆಯೇ ಸಿದ್ದರಾಮಯ್ಯ ಅವರೇ..?? ನಿಮ್ಮ ಸರ್ಕಾರ ಬಂದು ತಿಂಗಳೊಳಗೆ ಶಾಸಕರು ವರ್ಸಸ್‌ ಸಚಿವರ ನಡುವೆ ಜಗಳ ನಡೆದಿದ್ದು ಸುಳ್ಳೇ..? ಶಾಸಕರು ನಿಮ್ಮ ಹಾಗೂ ನಿಮ್ಮ ಸಚಿವರುಗಳ ಲಂಚಗುಳಿತನ ವಿರೋಧಿಸಿ ಪತ್ರ ಬರೆದಿದ್ದು ಸುಳ್ಳೇ..? ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಾಸಕರು ಬರೆದಿರುವ ಪತ್ರ ನಕಲಿ ಎಂದು ಸಾಬೀತುಪಡಿಸಬಹುದು.

BJP Asked Siddaramaiah How Many Of The 135 MLAs Support You

ಸಿದ್ದರಾಮಯ್ಯ ಅವರೇ, ಆದರೆ ಸಚಿವರು, ಶಾಸಕರು ಹಾಗೂ ನಿಮ್ಮ ಮಧ್ಯ ಇರುವ ಮನಸ್ತಾಪವನ್ನು ನಕಲಿ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ. ಒಂದು ಕಾಲದ ನಿಮ್ಮ ಆಪ್ತ ಶಾಸಕ ಆಳಂದದ ಬಿ. ಆರ್‌. ಪಾಟೀಲ್‌ರವರು ನಿಮ್ಮ ಸರ್ಕಾರದ ಬಗ್ಗೆ ಹಾಗೂ ನಿಮ್ಮ ಸಚಿವರುಗಳ ಬಗ್ಗೆ ನೀಡಿದ ಹೇಳಿಕೆಗಳನ್ನು ನಕಲಿ ಎಂದು ಸಾಬೀತುಪಡಿಸಲು ನಿಮ್ಮಿಂದ ಸಾಧ್ಯವೇ..??

ನಿಮ್ಮ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಹಾಗೂ ಲೋಡ್‌ ಶೆಡ್ಡಿಂಗ್‌ ಕಣ್ಣಾಮುಚ್ಚಾಲೆಯನ್ನು ನಿಮ್ಮದೇ ಪಕ್ಷದ ಶಾಸಕ ಕಾಗವಾಡದ ರಾಜು ಕಾಗೆಯವರು ಎಳೆ ಎಳೆಯಾಗಿ ಬಿಚ್ಟಿಟ್ಟಿದ್ದಾರೆ. ಶಾಸಕರಿಗೆ ಕನಿಷ್ಟ ಅನುದಾನ ಸಹ ಸರ್ಕಾರದಿಂದ ಲಭಿಸುತ್ತಿಲ್ಲ, ಕಾಂಗ್ರೆಸ್‌ ಸರ್ಕಾರ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ನೀಡಿದ್ದಕ್ಕಿಂತ ತೆಗೆದದ್ದೇ ಹೆಚ್ಚು ಎಂಬುದನ್ನು ಸಹ ಒಪ್ಪಿಕೊಂಡಿದ್ದಾರೆ.

ರಾಜು ಕಾಗೆಯವರು ಹೇಳಿದ್ದು ಸುಳ್ಳು ಎಂಬುದನ್ನು ಸಾಬೀತುಪಡಿಸುವ ತಾಕತ್ತು, ದಮ್ಮು ನಿಮ್ಮ ಬಳಿ ಇದೆಯೇ ಸಿದ್ದರಾಮಯ್ಯ ಅವರೇ..? ಎಂದು ಪ್ರಶ್ನಿಸಿದೆ.

ರಾಜ್ಯವನ್ನು ಹೈಕಮಾಂಡ್‌ನ #ATM ಮಾಡಿದ್ದು ಸುಳ್ಳಾ ಸಿದ್ದರಾಮಯ್ಯ ಅವರೇ, ನಿಮ್ಮ ಹಾಗೂ ನಿಮ್ಮ ಸರ್ಕಾರದ ಸಚಿವರುಗಳ ಭ್ರಷ್ಟಾಚಾರಕ್ಕೆ ಬೇಸತ್ತು, ಚನ್ನಗಿರಿಯ ಶಿವಗಂಗಾ ಬಸವರಾಜ್‌ ಶಾಸಕ ಸ್ಥಾನಕ್ಕೆ ಒಂದೇ ತಿಂಗಳಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದು ಸುಳ್ಳಾ ಅಥವಾ ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವೇ ಇಲ್ಲ ಎಂಬುದು ಸುಳ್ಳಾ..!! ಶಿವಗಂಗಾ ಬಸವರಾಜ್‌ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂಬುದಕ್ಕೆ ನಿಮ್ಮ ಬಳಿ ಸಾಕ್ಷಿ ಇದೆಯಾ ಸಿದ್ದರಾಮಯ್ಯರವರೇ..?? ಎಂದು ಬಿಜೆಪಿ ಕೇಳಿದೆ.

ಶಾಸಕರು ಮತ್ತು ಸಚಿವರು ಹಾಗೂ ಮುಖ್ಯಮಂತ್ರಿ ನಡುವೆ ಸಮನ್ವಯವೇ ಇಲ್ಲ ಎಂದು ಹೇಳಿದ್ದು ಸಹ ಒಂದು ಕಾಲದ ನಿಮ್ಮ ಆಪ್ತ ಶಾಸಕ ಯಲಬುರ್ಗಾದ ಬಸವರಾಜ ರಾಯರೆಡ್ಡಿಯವರು. ಸರ್ಕಾರ ಶುರುವಾದ ದಿನದಿಂದಲೂ ನಿಮ್ಮ ಸರ್ಕಾರದ ಹಳವಂಡಗಳನ್ನು ಸರಣಿ ರೀತಿಯಲ್ಲಿ ಬಿಚ್ಟಿಟ್ಟಿದ್ದೇ ನಿಮ್ಮ ಆಪ್ತರೆನಿಸಿಕೊಂಡವರು.ನಿಮ್ಮ ಆಪ್ತ ಶಾಸಕರೇ ನಿಮ್ಮ ಆಡಳಿತದ ವಿರುದ್ದ ತಿರುಗಿ ಬೀಳುವಷ್ಟು ನಿಮ್ಮ ಆಡಳಿತ ದುರ್ಬಲವಾಗಿದೆಯೇ ಸಿದ್ದರಾಮಯ್ಯ ಅವರೇ, ನಿಮ್ಮ ಮೇಲೆ ನಿಮ್ಮ ಆಪ್ತ ಎನಿಸಿಕೊಂಡ ಶಾಸಕರೂ ಸಹ ವಿಶ್ವಾಸ ಕಳೆದುಕೊಂಡಿದ್ದಾರೆಯೇ.. ಎಂದು ಬಿಜೆಪಿ ಹೇಳಿದೆ.

ಒಂದು ಕಾಲದ ನಿಮ್ಮ ಆಪ್ತರೆಲ್ಲರೂ ಈಗ ನಿಮ್ಮ ಭ್ರಷ್ಟ ಹಾಗೂ ಸ್ವಜನಪಕ್ಷಪಾತದ ಆಡಳಿತದ ವಿರುದ್ದ ಸಿಡಿಮಿಡಿಗೊಂಡಿದ್ದಾರೆ. ಇದಕ್ಕೆ ಪ್ರಮುಖ ಸಾಕ್ಷಿ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಡಿ. ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಲಿ ಎಂದು ಶಾಂತಿನಗರದ ಶಾಸಕ ಎನ್. ಎ. ಹ್ಯಾರಿಸ್‌ ಹೇಳಿದ್ದೇ ಸಾಕ್ಷಿ ಸಿದ್ದರಾಮಯ್ಯ ಅವರೇ? ನಿಮ್ಮ ಆಡಳಿತಕ್ಕೆ ರಾಜ್ಯದ ಆರೂವರೆ ಕೋಟಿ ಕನ್ನಡಿಗರು ಮಾತ್ರವಲ್ಲ, ನಿಮ್ಮ ಪಕ್ಷದ ಶಾಸಕರೇ ರೋಸಿ ಹೋಗಿದ್ದಾರೆ ಎನ್ನುವುದಕ್ಕೆ ಮತ್ತಿನ್ನೆಂತಹ ಸಾಕ್ಷಿ ಬೇಕು..? ಎಂದು ಬಿಜೆಪಿ ಪ್ರಶ್ನಿಸಿದೆ.

ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಸಿಎಂ ಕುರ್ಚಿ ಅವಧಿ ಕೇವಲ ಎರಡೂವರೆ ವರ್ಷ ಮಾತ್ರವಂತೆ, ಹೀಗೆ ಹೇಳಿದ್ದು ಸಹ ನಿಮ್ಮದೇ ಪಕ್ಷದ ಮಂಡ್ಯದ ಶಾಸಕ ರವಿ ಗಣಿಗ. ಸಾಧ್ಯವಾದರೇ ರವಿ ಗಣಿಗ ಹೇಳಿದ್ದು ಸುಳ್ಳು ಎಂಬುದನ್ನು ಸಾಬೀತುಪಡಿಸಿ, ಇದು ಸಹ ಬಿಜೆಪಿಯವರು ಹೇಳಿಸಿದ್ದು ಎಂದು ಸುಳ್ಳಾಡಬೇಡಿ!! ಸರ್ಕಾರದ ಆರಂಭದಲ್ಲಿ ನಿಮ್ಮ ಬಣದಲ್ಲಿದ್ದ ಹುನಗುಂದದ ಶಾಸಕ ವಿಜಯಾನಂದ ಕಾಶಪ್ಪನವರ್‌ ಈಗ ಬಹಿರಂಗವಾಗಿ ಡಿ. ಕೆ. ಶಿವಕುಮಾರ್‌ ಅವರು ಮುಂದಿನ ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ. ಅಲ್ಲಿಗೆ ನಿಮ್ಮ ನಾಯಕತ್ವ ದುರ್ಬಲ ಹಾಗೂ ಪೇಲವ ಎಂಬುದು ಸಾಬೀತಾದಂತೆ.

ಶಾಸಕರ ವಿಶ್ವಾಸವನ್ನು ಗಳಿಸಲು ವಿಫಲರಾದ ನೀವು ಇನ್ನೂ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ವಿಶ್ವಾಸ ಗಳಿಸಿದ್ದೀರಿ ಎಂಬ ಜಾಹಿರಾತು ಬರೀ ಬೊಗಳೆ ಅಲ್ಲದೇ ಮತ್ತೇನು ಸಿದ್ದರಾಮಯ್ಯ ಅವರೇ..? ಸದಾ ಹೊಟ್ಟೆ ತುಂಬಿದೋರಿಗೆ ನಿಮ್ಮ ಕಾಂಗ್ರೆಸ್‌ ಸರ್ಕಾರ ಹೊಟ್ಟೆ ತುಂಬಿಸುತ್ತದೆ ಹೊರತು ಹಸಿದವರಿಗೆ, ಜನ ಸಾಮಾನ್ಯರಿಗೆ ನಿಮ್ಮ ಸರ್ಕಾರ ಎಂದಿಗೂ ಹೊಟ್ಟೆ ತುಂಬಿಸುವುದಿಲ್ಲ ಎಂಬುದನ್ನು ನಿಮ್ಮದೇ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ. ಒಬ್ಬ ಶಾಸಕರಿಂದ ಈ ಪರಿ ಹೇಳಿಸಿಕೊಂಡ ನಂತರವೂ ನೀವು ಕುರ್ಚಿಯಲ್ಲಿ ಮುಂದುವರೆಯಬೇಕೆ ಎಂಬುದನ್ನು ನೀವು ಒಮ್ಮೆ ಯೋಚಿಸುವುದು ಒಳಿತು ಸಿದ್ದರಾಮಯ್ಯ ಅವರೇ ಎಂದು ಸರಣಿ ಟ್ವೀಟ್‌ ಮೂಲಕ ಕಿಡಿಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+