ಕರ್ನಾಟಕ ಚುನಾವಣೋತ್ತರ ಫಲಿತಾಂಶ ತಿರಸ್ಕರಿಸಿದ ಕಾಂಗ್ರೆಸ್-ಬಿಜೆಪಿ
ಬೆಂಗಳೂರು, ಮೇ 12: ಕರ್ನಾಟಕದಲ್ಲಿ ಮೇ 10ರಂದು ಮತದಾನ ನಡೆದಿದ್ದು, ನಾಳೆ ಶನಿವಾರ ಮೇ 13ರಂದು ಮತ ಎಣಿಕೆ ನಡೆಯಲಿದೆ. ಈ ಮಧ್ಯೆ ಬುಧವಾರವೇ ಸಂಜೆ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶವನ್ನು ರಾಜಕೀಯ ಪಕ್ಷಗಳು ತಳ್ಳಿ ಹಾಕಿವೆ.
ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿಯು ಮತದಾನೋತ್ತರ ಸಮೀಕ್ಷೆಯನ್ನು ಒಪ್ಪಿಕೊಂಡಿಲ್ಲ, ನಿರಾಕರಿಸಿವೆ. ನಾಳೆ ಮೇ 13 ರವರೆಗೆ ಕಾಯೋಣ ಎಂದಿವೆ. ಅಲ್ಲದೇ ಯಾರೊಂದಿಗೂ ಮೈತ್ರಿ ಇಲ್ಲದೇ ಪೂರ್ಣ ಬಹುಮತದಿಂದ ನಾವೇ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಉಭಯ ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೋತ್ತರ ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿಗೆ ಪ್ರಚಂಡ ಬಹುಮತದ ಮೂಲಕ ಬೃಹತ್ ಪಕ್ಷವಾಗಿ ಹೊರ ಹೊಮ್ಮಲಿದೆ. ಚುನಾವಣೆ ನಂತರದ ಸಮೀಕ್ಷೆಗಳು ಕೆಲವೊಮ್ಮೆ ನಿಖರವಾಗಿರುವುದಿಲ್ಲ. ಕಳೆದ ಬಾರಿ 2018ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 107 ಮತ್ತು ಬಿಜೆಪಿಗೆ 78 ಸ್ಥಾನ ಲಭಿಸಲಿವೆ ಎಂದು ಹೇಳಲಾಗಿತ್ತು. ಆದರೆ ಆಯೋಗದ ಫಲಿತಾಂಶದಲ್ಲಿ ಬಿಜೆಪಿ 104 ಮತ್ತು ಕಾಂಗ್ರೆಸ್ 78 ಗಳಿಸಿತು. ಈ ಮೂಲಕ ಮತದಾನೋತ್ತರ ಸಮೀಕ್ಷೆ ನಿಖರವಲ್ಲ ಎಂಬುದು ಗೊತ್ತಾಯಿತು.
ಬಿಜೆಪಿ-ಕಾಂಗ್ರೆಸ್ ನಾಯಕರಲ್ಲಿ ಬಹುಮತದ ವಿಶ್ವಾಸ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಕುರಿತು ಪ್ರತಿಕ್ರಿಸಿದ್ದು, ಈ ಬಾರಿ ಬಿಜೆಪಿಗೆ ಸ್ಪಷ್ಟ 120ರಿಂದ 125ರವರೆಗೆ ಸೀಟುಗಳು ಬರಲಿವೆ. ಹೀಗಾಗಿ ಆಪರೇಷನ್ ಕಮಲದ ಅಗತ್ಯವಿಲ್ಲ. ಬಿಜೆಪಿ ಮೈತ್ರಿ ಇಲ್ಲದೆಯೇ ಬೃಹತ್ ಪಕ್ಷವಾಗಿ ಅಧಿಕಾರ ಹಿಡಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು, ಕಳೆದ ಬಾರಿ 2018ರಲ್ಲಿ ಕೇವಲ 14 ಕ್ಷೇತ್ರಗಳಲ್ಲಿ ಶೂನ್ಯ ಮುನ್ನಡೆ ಇದ್ದ ಬಿಜೆಪಿ 24000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿತು. ಈ ಬಾರಿ 31ಸಾವಿರ ಬೂತ್‌ಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳಲಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಕಾಂಗ್ರೆಸ್ ಪಕ್ಷ ಈ ಬಾರಿ ಒಟ್ಟು 141 ಕ್ಷೇತ್ರಗಳನ್ನು ಪಡೆಯುವ ಮೂಲಕ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಸ ವ್ಯಕ್ತಪಡಿಸಿದ್ದಾರೆ. ಅದೇ ಕಾಂಗ್ರೆಸ್ ಪಕ್ಷದ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಪಕ್ಷಕ್ಕೆ 120 ಸೀಟು ಸಿಗುವುದಾಗಿ ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು ಈ ಮತದಾನೋತ್ತರ ಸಮೀಕ್ಷೆ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿದ್ದಾರೆ. ಜೆಡಿಎಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.












Click it and Unblock the Notifications