ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಹೆಮ್ಮೆಯ ವಿಜಾಪುರ ಸೈನಿಕ ಶಾಲೆ

By Prasad
|
Google Oneindia Kannada News

"ಅಂಥಾವ್ರು ಇಂಥಾವ್ರು ವಿಜಾಪುರ ಸೈನಿಕ ಶಾಲೆ ಸೇರಲಿಕ್ಕೆ ಆಗಂಗಿಲ್ಲ. ಭಾರೀ ಶಾಣ್ಯಾ ಇರಬೇಕು, ಧಾಡಸಿ ಮನೋಭಾವದವ್ರಿರಬೇಕು, ಪರೀಕ್ಷಾ ಪಾಸ್ ಮಾಡಬೇಕು. ಪಾಸ್ ಆದಾವ್ರಿಗೆ ಸೈನಿಕರ ಥರಾ ಟ್ರೇನಿಂಗ್ ಕೊಡ್ತಾರಂತ, ಕುದರಿ ಓಡಿಸೋದು ಹೇಳಿಕೊಡತಾರಂತ, ಈಜಲಿಕ್ಕೆ ಕಲಿಸ್ತಾರಂತ, ಇನ್ನೂ ಏನೇನೋ ಇರ್ತದಂತ..."

ಎರಡು ಮೂರು ದಶಕಗಳ ಹಿಂದೆ ವಿಜಾಪುರದಲ್ಲಿನ ಸೈನಿಕ ಶಾಲೆ ಕುರಿತು ಇದ್ದ ಗೌರವ, ಒಂಥರಾ ಹೆದರಿಕೆ ಹಿರಿಯರು ಆಡುತ್ತಿದ್ದ ಮಾತುಗಳಲ್ಲಿ ಹೊರಹೊಮ್ಮುತ್ತಿತ್ತು. ಈ ಸೈನಿಕ ಶಾಲೆಯನ್ನು ಸೇರಿಕೊಳ್ಳುವುದು ಎಲ್ಲರಿಗೂ ಸಾಧ್ಯದ ಮಾತಾಗಿರಲಿಲ್ಲ. ಆದರೆ, ಸೇರಿಕೊಳ್ಳುವುದು ಕರ್ನಾಟಕದಲ್ಲಿ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಈಗಲೂ ಕೂಡ ಅದೇ ಗತ್ತನ್ನು ಉಳಿಸಿಕೊಂಡು ಬಂದಿರುವ ಕರ್ನಾಟಕದ ಹೆಮ್ಮೆಯ ಸೈನಿಕ ಶಾಲೆ ರಾಜ್ಯದ ಮಾತ್ರವಲ್ಲ ದೇಶದ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ.

ಧೈರ್ಯ, ಆದರ್ಶ, ಶಿಸ್ತು, ಮೌಲ್ಯ, ಸೇವಾಮನೋಭಾವ, ಕರ್ತವ್ಯಪಾಲನೆ, ಸಹಿಷ್ಣುತೆ, ತ್ಯಾಗಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ತುಂಬುತ್ತ ದೇಶಕ್ಕೆ ನೂರಾರು ಸೈನಿಕರನ್ನು ನೀಡಿರುವ ವಿಜಾಪುರ ಸೈನಿಕ ಶಾಲೆಯಲ್ಲಿ ಈಗ ಸುವರ್ಣ ಸಂಭ್ರಮ. 1963ರ ಸೆಪ್ಟೆಂಬರ್ 16ರಂದು ಕೇಂದ್ರ ರಕ್ಷಣಾ ಖಾತೆ ಮತ್ತು ರಾಜ್ಯಗಳ ಸಹಭಾಗಿತ್ವದಲ್ಲಿ, ಭಾರತದ 13ನೇ ಸೈನಿಕ ಶಾಲೆಯಾಗಿ ಆರಂಭವಾಗಿದ್ದು ಈ ವಿಜಾಪುರದ ಸೈನಿಕ ಶಾಲೆ.

ಈ ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾದವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು. ಸೆ.24, ಮಂಗಳವಾರ ಇಲ್ಲಿ ನಡೆದ ಗೋಲ್ಡನ್ ಜ್ಯುಬಿಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, ಭಾರತ ಇಂದು ಮುಂದುವರಿದ ದೇಶಗಳ ಸಾಲಿನಲ್ಲಿ ನಿಲ್ಲಬೇಕಾದರೆ ಶೈಕ್ಷಣಿಕ ತಳಹದಿ ಅತ್ಯಂತ ಸದೃಢವಾಗಿರಬೇಕು. ಇಂದು ಸಮಾಜದಲ್ಲಿ ಕಾಣೆಯಾಗುತ್ತಿರುವ ನಾಗರಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು ಎಂದರು.

ಪಂಚ ನದಿಗಳ ನಾಡು, ಆದಿಲ್ ಶಾಹಿ ಆಡಳಿತ ಕಂಡ ಬೀಡು, ಗೋಲ್ ಗುಂಬಜ್, ಬಾರಾ ಕಮಾನ್, ಉಪಲಿ ಬುರುಜುನಂತ ಐತಿಹಾಸಿಕ ಸ್ಮಾರಕಗಳಿಂದ ಪ್ರಸಿದ್ಧಿ ಹೊಂದಿರುವ ವಿಜಯಪುರ ಅಥವಾ ವಿಜಾಪುರ ಸೈನಿಕ ಶಾಲೆಯಿಂದಾಗಿಯೂ ಭಾರತದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಐವತ್ತು ವರ್ಷಗಳ ಕಾಲ ದೇಶವೇ ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುವ ರೀತಿಯಲ್ಲಿ ಅತ್ಯುತ್ತಮ ಶೈಕ್ಷಣಿಕ ಸೇವೆಯನ್ನು ಒದಗಿಸುತ್ತಿರುವ ವಿಜಾಪುರ ಸೈನಿಕ ಶಾಲೆ ನಡೆದುಬಂದ ನೋಟ ಇಲ್ಲಿದೆ. (ಚಿತ್ರಕೃಪೆ : ಸೈನಿಕ ಶಾಲೆ ಬ್ಲಾಗ್)

ಎಸ್ಆರ್ ಕಂಠಿ ಕನಸಿನ ಕೂಸು

ಎಸ್ಆರ್ ಕಂಠಿ ಕನಸಿನ ಕೂಸು

ಭಾರತದಲ್ಲಿ ಇರುವ 25 ಸೈನಿಕ ಶಾಲೆಗಳಲ್ಲಿ 13ನೇ ಶಾಲೆಯಾಗಿ ಆರಂಭವಾದ ವಿಜಾಪುರ ಸೈನಿಕ ಶಾಲೆ ಕರ್ನಾಟಕದ ಮಾಜಿ ಸಚಿವ ಎಸ್ಆರ್ ಕಂಠಿ ಅವರ ಕನಸಿನ ಕೂಸು. ಅವರ ಸತತ ಪ್ರಯತ್ನ ಮತ್ತು ಕೇಂದ್ರ ರಕ್ಷಣಾ ಖಾತೆಯ ಸಹಯೋಗದೊಂದಿಗೆ ಸೆಪ್ಟೆಂಬರ್ 16ರಂದು ಬಿಜಾಪುರದವಿಜಯಾ ಕಾಲೇಜು ಆವರಣದ ಮೂಲೆಯಲ್ಲಿ ತಾತ್ಕಾಲಿಕವಾಗಿ ಶುರುವಾಯಿತು.

1966ರಲ್ಲಿ ಹೊಸ ಸ್ಥಳಕ್ಕೆ ಸ್ಥಳಾಂತರ

1966ರಲ್ಲಿ ಹೊಸ ಸ್ಥಳಕ್ಕೆ ಸ್ಥಳಾಂತರ

ಮೂರು ವರ್ಷಗಳ ನಂತರ ಡಿಸೆಂಬರ್ 17, 1966ರಲ್ಲಿ 406 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಟ್ಟಡಕ್ಕೆ ಸೈನಿಕ ಶಾಲೆ ಸ್ಥಳಾಂತರವಾಯಿತು. ಇದನ್ನು ಭಾರತದ ಅಂದಿನ ಉಪರಾಷ್ಟ್ರಪತಿ ಡಾ. ಝಾಕಿರ್ ಹುಸೇನ್ ಅವರು ಉದ್ಘಾಟಿಸಿದರು. ಅಂದಿನಿಂದ ನಾಲ್ಕೂವರೆ ದಶಕಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಸೈನಿಕರನ್ನು ದೇಶಕ್ಕೆ ಸೈನಿಕ ಶಾಲೆ ಅರ್ಪಣೆ ಮಾಡಿದೆ.

ಗಂಢಬೇರುಂಡ ಶಾಲಾ ಲಾಂಛನ

ಗಂಢಬೇರುಂಡ ಶಾಲಾ ಲಾಂಛನ

ವಿದ್ಯಾರ್ಥಿಗಳಲ್ಲಿ ಸಂಕಲ್ಪ ಮತ್ತು ಸಮರ್ಪಣಾ ಮನೋಭಾವವನ್ನು ಬಿತ್ತುವ ಉದ್ದೇಶದಿಂದ ಕಾಲ್ಪನಿಕ ಪಕ್ಷಿಯಾದ ಗಂಢಬೇರುಂಢವನ್ನೇ ಶಾಲೆ ಲಾಂಛನವನ್ನಾಗಿ ಮಾಡಿಕೊಂಡಿದೆ. ಗಂಢಬೇರುಡ ಅಸಾಧಾರಣ ಶಕ್ತಿ, ಧರ್ಮ, ಧೈರ್ಯ, ಸತ್ಯ ಮತ್ತು ಹೃದಯ ವೈಶಾಲ್ಯದ ಸಂಕೇತವೂ ಆಗಿದೆ. 1964ರಲ್ಲಿ ಶಾಲೆಯ ಲಾಂಛನವಾದ ಇದರ ಎರಡೂ ಬದಿಯಲ್ಲಿ ವಿದ್ಯೆ ಮತ್ತು ಜ್ಞಾನೋದಯದ ಸಂಕೇತವಾಗಿರುವ ಎರಡು ದೀಪಗಳಿವೆ.

ಶಾಲೆಯಲ್ಲಿ ಏನೇನು ಸೌಲಭ್ಯಗಳಿವೆ?

ಶಾಲೆಯಲ್ಲಿ ಏನೇನು ಸೌಲಭ್ಯಗಳಿವೆ?

ಬೃಹತ್ತಾದ ಕಟ್ಟಡದಲ್ಲಿ ಹಾಸ್ಟೆಲ್, ಆಡಿಟೋರಿಯಂ, ಕೆಡೆಟ್ ಮೆಸ್ (ಸಸ್ಯಾಹಾರ, ಮಾಂಸಾಹಾರ), ಸ್ವಿಮ್ಮಿಂಗ್ ಪೂಲ್, ಜಿಮ್ನಾಶಿಯಂ, ಆರೋಗ್ಯ ಕೇಂದ್ರ, ಸಿಬ್ಬಂದಿ ನಿವಾಸ, ಅತಿಥಿ ಗೃಹ, ಆಟದ ಮೈದಾನ, ಹೆಲಿಪ್ಯಾಡ್ ಮುಂತಾದ ವ್ಯವಸ್ಥೆಯಿದೆ. ಶೈಕ್ಷಣಿಕ ಅಧ್ಯಯನದ ಜೊತೆಗೆ, ಸಾಹಸಮಯ ಚಟುವಟಿಕೆ, ದೈಹಿಕ ತರಬೇತಿ, ಸಾಂಸ್ಕೃತಿಕ ಚಟುವಟಿಕೆ, ಸ್ಪರ್ಧೆ, ಪ್ರವಾಸಗಳನ್ನು ಆಯೋಜಿಸಲಾಗುತ್ತದೆ.

ಸೈನಿಕ ಶಾಲೆಗೆ ಭರ್ತಿ ಹೇಗೆ?

ಸೈನಿಕ ಶಾಲೆಗೆ ಭರ್ತಿ ಹೇಗೆ?

6ನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಪ್ರವೇಶ. ಜುಲೈ 1ರೊಳಗೆ 10ರಿಂದ 11 ವರ್ಷ ಪೂರೈಸಿರುವ ಹುಡುಗರು ಭರ್ತಿಗೆ ಅರ್ಹರು. 13ರಿಂದ 14 ವರ್ಷ ಪೂರೈಸಿರುವ ವಿದ್ಯಾರ್ಥಿಗಳಿಗೆ 9ನೇ ಈಯತ್ತೆಗೂ ಪ್ರವೇಶವಿರುತ್ತದೆ. ವಿದ್ಯಾರ್ಥಿಯ ವಯಸ್ಸಿನ ಮಿತಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.

ಅಖಿಲ ಭಾರತ ಪ್ರವೇಶ ಪರೀಕ್ಷೆ

ಅಖಿಲ ಭಾರತ ಪ್ರವೇಶ ಪರೀಕ್ಷೆ

ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಇರುತ್ತದೆ. 6ನೇ ತರಗತಿಗೆ ಗಣಿತ, ಭಾಷಾ ಸಾಮರ್ಥ್ಯ, ಜಾಣ್ಮೆ ವಿಷಯದಲ್ಲಿ 100 ಅಂಕಗಳ ಪರೀಕ್ಷೆ. 9ನೇ ತರಗತಿಗೆ ಗಣಿತ, ಸಾಮಾಜಿಕ ವಿಜ್ಞಾನ, ಇಂಗ್ಲಿಷ್ ಮತ್ತು ಸಾಮಾನ್ಯ ವಿಜ್ಞಾನ ವಿಷಯದಲ್ಲಿ ಪರೀಕ್ಷೆ. ವಿದ್ಯಾರ್ಥಿ ಒಂದು ಬಾರಿ ಮಾತ್ರ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬಹುದು. ಜೊತೆಗೆ ಸಂದರ್ಶನ ಮತ್ತು ದೈಹಿಕ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಬೇಕು.

ಇಲ್ಲಿಯೂ ಮೀಸಲಾಯಿ ಐತ್ರೀ ಸಾಹೇಬ್ರ

ಇಲ್ಲಿಯೂ ಮೀಸಲಾಯಿ ಐತ್ರೀ ಸಾಹೇಬ್ರ

ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಶೇ.15ರಷ್ಟು ಪರಿಶಿಷ್ಟ ಜಾತಿಗೆ ಮತ್ತು ಶೇ.7.5ರಷ್ಟು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಇರುತ್ತದೆ. ಶೇ.67ರಷ್ಟು ರಾಜ್ಯದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಇನ್ನೂ ನೀಟುಗಳು ಖಾಲಿ ಇದ್ದರೆ ಹೊರರಾಜ್ಯದವರಿಗೆ ಅವಕಾಶ ನೀಡಲಾಗುತ್ತದೆ. ಅದರಲ್ಲೂ ಸೇನೆಯಲ್ಲಿ ಸೇವೆ ಸಲ್ಲಿಸಿರುವವರ ಮಕ್ಕಳಿಗೆ ಶೇ.25ರಷ್ಟು ಸೀಟುಗಳು ಮೀಸಲು.

ಪರೀಕ್ಷೆ ಪಾಸಾದವರಿಗೆ ಶುಲ್ಕ ಹೀಗಿರುತ್ತದೆ

ಪರೀಕ್ಷೆ ಪಾಸಾದವರಿಗೆ ಶುಲ್ಕ ಹೀಗಿರುತ್ತದೆ

ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನ ಪಾಸ್ ಆದವರು ವಾರ್ಷಿಕವಾಗಿ 52,345 ರು. ಟ್ಯೂಷನ್ ಶುಲ್ಕ ಮತ್ತು 20,650 ರು. ಪಥ್ಯ (ಡಯಟ್) ಶುಲ್ಕವನ್ನು ಒಂದೇ ಬಾರಿಗೆ ಭರ್ತಿ ಮಾಡಬೇಕು. ಇದು ಪ್ರತಿವರ್ಷ ಪರಿಷ್ಕರಣೆಗೊಳಗಾಗುತ್ತಿರುತ್ತದೆ. ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೂಡ ಇರುತ್ತದೆ. (2010ರಲ್ಲಿ ತೇರ್ಗಡೆಯಾದ ಹನ್ನೆಡನೇ ತರಗತಿ ವಿದ್ಯಾರ್ಥಿಗಳು)

English summary
Bijapur Sainik school : One of the prestigious sainik training institutions of India is celebrating golden jubilee. It was established on 16th September 1963. It was brain child of S.R. Kanthi. President Pranab Mukherjee participated in the celebrations on 24th Sept.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X