ತಪ್ಪು ಕನ್ನಡ ಬರಹ: ಗಿಲ್ಲಿ ನಟನೇ ಕಾರಣ, ನಂಗೆ ಕನ್ನಡ ಬರೆಯುವುದಕ್ಕೆ ಬರಲ್ಲ: ಅಶ್ವಿನಿ ಗೌಡ
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ, ನಟಿ ಹಾಗೂ ಕನ್ನಡಪರ ಹೋರಾಟಗಾರರಾದ ಅಶ್ವಿನಿ ಗೌಡ ಅವರಿಗೆ ಕನ್ನಡ ಬರೆಯುವುದಕ್ಕೆ ಬರುವುದಿಲ್ಲ ಎನ್ನುವ ಆರೋಪ, ಟೀಕೆ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಈ ಬಗ್ಗೆ ಇದೀಗ ಅಶ್ವಿನಿ ಗೌಡ ಅವರು ಮಾತನಾಡಿದ್ದಾರೆ. ನಾನು ಓದಿದ್ದು ಆಂಗ್ಲ ಮಾಧ್ಯಮದಲ್ಲಿ ಹೀಗಾಗಿ ನನಗೆ ಕನ್ನಡ ಬರೆಯುವುದಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಅಶ್ವಿನಿ ಗೌಡ ಅವರ ಈ ಹೇಳಿಕೆಗೂ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡ ಬರೆಯುವುದಕ್ಕೆ ಬರುವುದಿಲ್ಲ ಎಂದು ಹೇಳಿಕೊಳ್ಳುವುದು ಇಷ್ಟೊಂದು ಸಹಜವೇ ಅಥವಾ ಕನ್ನಡ ಓದುವುದಕ್ಕೆ ಬರುವುದಿಲ್ಲ ಎನ್ನುವುದನ್ನು ಒಪ್ಪಲು ಸಾಧ್ಯವೇ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ. ಇಷ್ಟಕ್ಕೂ ಅಶ್ವಿನಿ ಗೌಡ ಅವರ ಯಾವ ಕನ್ನಡ ಬರಹಕ್ಕೆ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಅಶ್ವಿನಿ ಅವರು ಹೇಳಿದ್ದು ಏನು ಎನ್ನುವ ವಿವರ ಇಲ್ಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಫೀನಾಲೆ ವೀಕ್‌ನಲ್ಲಿ ಸ್ಪರ್ಧಿಗಳು ತಮ್ಮ ಗೇಮ್ ಪ್ರದರ್ಶನಕ್ಕೆ ಹಾಗೂ ಸ್ಪರ್ಧಿಗಳ ಸಾಮರ್ಥ್ಯ ಪ್ರದರ್ಶನಕ್ಕೆ ಹ್ಯಾಶ್‌ಟ್ಯಾಗ್‌ಗಳನ್ನ ಬೋರ್ಡ್ ಮೇಲೆ ಬರೆಯುವ ಟಾಸ್ಕ್ ನೀಡಲಾಗಿತ್ತು. ಆದರೆ ಈ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅವರು ತಪ್ಪು ತಪ್ಪಾಗಿ ಕನ್ನಡ ಬರೆದಿದ್ದರು. ಇದನ್ನು ನೋಡಿದ್ದ ಕೆಲವರು ಕನ್ನಡಪರ ಹೋರಾಟಗಾರ್ತಿ ಎಂದು ಹೇಳಿಕೊಳ್ಳುವವರಿಗೇ ಕನ್ನಡ ಬರೆಯಲು ಬರಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟೀಕೆಯೂ ವ್ಯಕ್ತವಾಗಿತ್ತು. ಇದೀಗ ಈ ವಿವಿಧ ವಿಚಾರಗಳ ಬಗ್ಗೆ ಅಶ್ವಿನಿ ಗೌಡ ಅವರು FilmiBeat Kannadaದೊಂದಿಗೆ ಮಾತನಾಡಿದ್ದು, ಅದರಲ್ಲಿ ಕನ್ನಡ ಬರೆಯುವ ವಿಚಾರದ ಬಗ್ಗೆಯೂ ಸ್ಪಷ್ಟನೆ ಕೊಟ್ಟಿದ್ದಾರೆ.

ನಾನು ಈ ವಿಚಾರವಾಗಿ ತುಂಬಾ ಸಲ ಮಾತನಾಡಿದ್ದೇನೆ. ನಾನು ಓದಿದ್ದೆಲ್ಲವೂ ಆಂಗ್ಲ ಮಾಧ್ಯಮದಲ್ಲಿ, ನಾನು ಕನ್ನಡ ಮಾಧ್ಯಮದಲ್ಲಿ ಓದಲಿಲ್ಲ. ಇಂದು ಯಾರಾದರೂ ಬಂದು ತುಂಬಾ ಓದಿರುವವರು ನನ್ನ ಪಕ್ಕ ಬಂದು ನಿಂತುಕೊಂಡು ಓದಿದರೆ, ಅವರು ಎಷ್ಟು ಚೆನ್ನಾಗಿ ಓದುತ್ತಾರೋ ನಾನೂ ಅಷ್ಟೇ ಚೆನ್ನಾಗಿ ಓದುತ್ತೇನೆ. ನನಗೆ ಬರೆಯರಿ ಅಂತ ಹೇಳಿದಾಗ ಕಷ್ಟವಾಗುತ್ತದೆ. ಯಾಕೆಂದರೆ ನಾನು ಓದಿದ್ದು ಇಂಗ್ಲಿಷ್ ಮೀಡಿಯಂನಲ್ಲಿ ನನಗೆ ಕನ್ನಡ ಇರಲಿಲ್ಲ. ಆವತ್ತು ನಾನು ಬರೆದಿಲ್ಲ. ಛಲಗಾರ್ತಿ ಎಂದು ಬರೆದುಕೊಟ್ಟವರು ಗಿಲ್ಲಿ. ನಾನು ಈ ಹಿಂದೆಯೂ ಬಿಗ್‌ಬಾಸ್‌ನಲ್ಲಿ ರಘು ಅವರೊಂದಿಗೆ ಹೇಳಿಕೊಂಡಿದ್ದೇನೆ. ನನಗೆ ಕನ್ನಡ ಬರೆಯುವುದಕ್ಕೆ ಬರಲ್ಲ, ಅದರಲ್ಲಿ ತಪ್ಪೇನು ಇಲ್ಲ ಅಂತ ಅಶ್ವಿನಿ ಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಧ್ರುವಾಂತ್ ಅವರನ್ನು ನಾನು ಕರೆದು ಅವರ ಸಹಾಯ ಪಡೆದುಕೊಂಡಿದ್ದೆ. ಆದರೆ ಅದನ್ನು ಬಂದು ಗಿಲ್ಲಿ ಬದಲಾಯಿಸಿದರು. ಈಗ ಯಾರ ತಪ್ಪು ಅಂತ ನೀವೇ ಹೇಳಿ. ತಪ್ಪಾಗಿ ಬರೆದವರದ್ದು ತಪ್ಪೋ, ಬರೆಸಿಕೊಂಡವರದ್ದು ತಪ್ಪೋ ಏನಂತ ಹೇಳ್ತೀರಿ. ಯಾರ ಪರವಾದರೂ ನಿಂತುಕೊಳ್ಳಬೇಕಾದರೆ, ಹೋರಾಟ ಮಾಡಬೇಕಾದರೆ ವಿದ್ಯೆ ಬೇಕಾಗಿಲ್ಲ ಅದಕ್ಕೆ ಮನಸ್ಸಿದ್ದರೆ ಸಾಕು. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಅಶ್ವಿನಿ ಅವರು ಹೇಳಿದ್ದಾರೆ.
ಒಬ್ಬ ವ್ಯಕ್ತಿಯಲ್ಲಿನ ಒಳ್ಳೆಯ ಗುಣಗಳನ್ನು ಪ್ರಶಂಸೆ ವ್ಯಕ್ತಪಡಿಸುವುದಕ್ಕೆ ಯೋಗ್ಯತೆ ಇಲ್ಲದೆ ಇರುವ ಕೆಲವರು ಇಂತಹ ಸಿಲ್ಲಿ ಸಿಲ್ಲಿ ವಿಚಾರಗಳನ್ನು ಹುಡುಕುತ್ತಾರಲ್ಲ ಎಂದು ತುಂಬಾ ಬೇಸರವಾಗುತ್ತದೆ. ಯಾಕೆಂದರೆ ನಾವು ಇವೊತ್ತು ಹೋರಾಟ ಮಾಡಿದಾಗ ಯಾರೂ ಬಂದು ನಮ್ಮನ್ನು ಕೇಳಲ್ಲ. ನೀವು ಬೆಳಿಗ್ಗೆಯಿಂದ ತಿಂಡಿ ಮಾಡಿದ್ದೀರಾ, ನೀವು ನಿದ್ದೆ ಮಾಡಿದ್ರಾ, ನೀವು ಎಷ್ಟು ಕೇಸ್ ಹಾಕಿಸಿಕೊಂಡಿರಿ. ನೀವು ಕೋರ್ಟ್‌ಗಳಿಗೆಲ್ಲ ದುಡ್ಡು ಖರ್ಚು ಮಾಡಬೇಕು, ಎಷ್ಟು ಖರ್ಚು ಮಾಡುತ್ತೀರಿ. ಬೇಲ್ ಆಯ್ತಾ. ಇಡೀ ವರ್ಷವಲ್ಲ ಎಷ್ಟೆಷ್ಟೋ ವರ್ಷಗಳು ನಾವು ಕೋರ್ಟ್‌ಗೆ ಅಲೆಯಬೇಕಾಗುತ್ತೆ. ಇದೆಲ್ಲವೂ ಯಾರೂ ಕೇಳಲ್ಲ. ಅದೂ ನಾವು ಹೋರಾಟ ಮಾಡುತ್ತಿರುವುದು ಯಾರಿಗೆ ನಮಗೆ ಗೊತ್ತಿಲ್ಲದವರಿಗಾಗಿ, ನಾವು ಯಾವೊತ್ತೋ ಹೋಗಿ ನೀವು ಯಾವ ಜಾತಿ, ಯಾವ ಧರ್ಮ ಎಂದು ನಾವು ಯಾರನ್ನೂ ಕೇಳಿಲ್ಲ. ನೀವು ಕರ್ನಾಟಕದಲ್ಲಿ ಇದ್ದರೆ ಕನ್ನಡಿಗರು ಅಂತಲೇ ಕನ್ನಡಿಗರು ಭಾವಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಟೀಕೆ
ಇನ್ನು ಅಶ್ವಿನಿ ಗೌಡ ಅವರ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗಿದೆ. ಕೆಲವರು ಅಶ್ವಿನಿ ಗೌಡ ಅವರಿಗೆ ಬೆಂಬಲ ಸೂಚಿಸಿದರೆ, ಕನ್ನಡವೇ ಬರೆಯಲು ಬರೋಲ್ಲ ಕನ್ನಡ ಹೋರಾಟಗಾರ್ತಿ ಹೇಗೆ ಕೆಲವರು ಪ್ರಶ್ನೆ ಮಾಡಿದ್ದಾರೆ.
ಸಮುದ್ಯತಾ ಕಂಜರ್ಪಣೆ ಎನ್ನುವವರು, ಮೊದ್ಲು ಕನ್ನಡ ಓದೋಕೆ ಬರೆಯೋಕೆ ಕಲಿತುಕೊಳ್ರಪ್ಪ. ನಂಗೆ ಕನ್ನಡ ಬರೆಯೋಕೆ ಬರಲ್ಲ ಅನ್ನೋದನ್ನೂ ಹೆಮ್ಮೆಯಿಂದ ಹೇಳೋ ಹಾಗಾದ್ರೆ ಹೇಗೆ...? ಕರ್ನಾಟಕದಲ್ಲಿ ಕನ್ನಡ ಮಾತಾಡಲ್ಲ ಅನ್ನೋ ನಾರ್ತಿಗಳಿಗೂ, ನಾನು ಓದಿದ್ದು ಇಂಗ್ಲಿಷ್ ಮೀಡಿಯಂನಲ್ಲಿ, ನಂಗೆ ಕನ್ನಡ ಬರೆಯೋಕೆ ಬರಲ್ಲ ಅಂತ ಹೆಮ್ಮೆಯಿಂದ ಹೇಳ್ಕೊಳೋ ಕನ್ನಡಿಗರಿಗೂ ಏನ್ ವ್ಯತ್ಯಾಸ ? ಇದಕ್ಕೆ ಸಮರ್ಥನೆಗಳು ಬೇರೆ. ಸೋತರೂ ಗಳಿಸಿರೋ ಮರ್ಯಾದೆಯನ್ನು ಮಾತಾಡಿ ಕಳ್ಕೊಳೋ ಜನಕ್ಕೆ ಏನ್ ಹೇಳೋದು ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.












Click it and Unblock the Notifications