ರಾಜ್ಯ ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್
Good News: ರೈತರು ದೇಶದ ಬೆನ್ನೆಲುಬಾಗಿದ್ದು, ಸರ್ಕಾರ ಆಗಾಗ ಗುಡ್ ನ್ಯೂಸ್ ನೀಡುತ್ತಲೇ ಬಂದಿದೆ. ಹಾಗೆಯೇ ಇದೀಗ ಅರ್ಹತೆ ಇರುವ ರೈತ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡುವ ವಿಚಾರವಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್.ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, 2023-24ನೇ ಸಾಲಿನ ಆಯವ್ಯಯ ಮಂಡನೆ ಸಮಯದಲ್ಲಿ ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಬೆಳೆ ಸಾಲದ ಮಿತಿಯನ್ನು ಏರಿಕೆ ಮಾಡಲಾಗಿದೆ.

3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿ ಏರಿಸಲಾಗಿದ್ದು, ಈ ಮಿತಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು 2023-24ನೇ ಸಾಲಿನಲ್ಲಿ 6,744 ರೈತರಿಗೆ ರೂಪಾಯಿ 290.51 ಕೋಟಿ ರೂಪಾಯಿ ಮತ್ತು 2024-25ನೇ ಸಾಲಿನಲ್ಲಿ 2025ನೇ ಫೆಬ್ರವರಿ 28ರ ವರೆಗೆ 13,689 ರೈತರಿಗೆ ರೂಪಾಯಿ 589.12 ಕೋಟಿ ರೂಪಾಯಿ ಮೊತ್ತದ ಸಾಲ ವಿತರಣೆ ಮಾಡಲಾಗಿರುತ್ತದೆ.
ರಾಜ್ಯದ 19 ಕೃಷಿ ವಲಯಗಳಿಗೆ ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯಲ್ಲಿ ಪ್ರತಿ ಬೆಳೆಗೆ ನಿಗದಿಪಡಿಸಿದ ಸ್ಕೇಲ್ ಆಫ್ ಫೈನಾನ್ಸ್ ಮಿತಿ, ರೈತರು ಹೊಂದಿರುವ ಭೂ ಹಿಡುವಳಿ ಹಾಗೂ ಬೆಳೆಯುವ ಬೆಳೆ ಆಧರಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರತಿ ರೈತರಿಗೆ ಗರಿಷ್ಠ ಸಾಲದ ಮಿತಿಯನ್ನು ನಿಗದಿಪಡಿಸಿದೆ. ಇದರ ಅನ್ವಯ 1,73,449 ರೈತರು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗಳವರೆಗಿನ ಬೆಳೆಸಾಲ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ತಿಳಿಸಿದರು.
ನಬಾರ್ಡ್ ನಿಯಮದಂತೆ ಜಿಲ್ಲಾ ಕೆಂದ್ರ ಸಹಕಾರ ಕೇಂದ್ರ ಬ್ಯಾಂಕುಗಳು ಕಳೆದ ಮೂರು ವರ್ಷಗಳಲ್ಲಿ ವಿತರಣೆ ಮಾಡಿದ ಸರಾಸರಿ ಸಾಲದ ಆಧಾರವಾಗಿ ತಯಾರಿಸಬೇಕಾದ ಆರ್.ಎಲ್.ಪಿ ಗೆ ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ ಶೇಕಡ 40ರಷ್ಟು ಮತ್ತು ಹೆಚ್ಚಿನ ಬಡ್ಡಿ ದರದಲ್ಲಿ ಶೇಕಡ 69ರಷ್ಟು ಮಾತ್ರ ಪುನರ್ಧನವನ್ನು ನೀಡಲು ನೀತಿ ಇದೆ. ಉಳಿದ ಬಂಡವಾಳವನ್ನು ಡಿ.ಸಿ.ಸಿ ಬ್ಯಾಂಕುಗಳು ತನ್ನ ಸಂಪನ್ಮೂಲದಿಂದಲೇ ಭರಿಸಬೇಕಿದ್ದು, ಬಂಡವಾಳದ ಕೊರತೆ ಆಗಿರುತ್ತದೆ.
ನಬಾರ್ಡ್ ಸಂಸ್ಥೆ ಶೇಕಡ 40ರಷ್ಟು ಪ್ರಮಾಣದಲ್ಲಿ ನೀಡಬೇಕಾದ ರಿಯಾಯಿತಿ ಬಡ್ಡಿ ದರದ ಮಿತಿಯನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬಂದಿರುತ್ತದೆ. ನಬಾರ್ಡ್ ಸಂಸ್ಥೆ 2024-25ನೇ ಸಾಲಿನಲ್ಲಿ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಪುನರ್ಧನದ ಮಿತಿಯನ್ನು ಕಳೆದ ವರ್ಷದಲ್ಲಿ ಇದ್ದ 5600 ಕೋಟಿಗಳಿಂದ ಪ್ರಾರಂಭದಲ್ಲಿ 2340 ಕೋಟಿ ರೂಪಾಯಿಗಳಿಗೆ ನಿಗದಿಮಾಡಿ ನಂತರ 896.11 ಕೋಟಿ ರೂಪಾಯಿಗಳ ಹೆಚ್ಚುವರಿ ಮಿತಿಯನ್ನು ನೀಡಿದ್ದು, 2363.89 ಕೋಟಿ ರೂಪಾಯಿ ಕಡಿಮೆ ಆಗಿರುತ್ತದೆ.
ಪ್ರತಿ ವರ್ಷ ಹೊಸ ಸದಸ್ಯರು ಸಹ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದು, ಡಿ.ಸಿ.ಸಿ. ಬ್ಯಾಂಕುಗಳು ಈ ಹೊಸ ರೈತರಿಗೆ ಪ್ರಥಮ ಅದ್ಯತೆ ನೀಡಿ 3 ಲಕ್ಷ ರೂಪಾಯಿವರೆಗೆ ಸಾಲ ವಿತರಿಸುತ್ತಿದ್ದು, 3 ಲಕ್ಷ ರೂಪಾಯಿಗಿಂತ ಹೆಚ್ಚಿನ ಮಿತಿಗೆ ನಂತರದ ಆದ್ಯತೆ ನೀಡಲಾಗುತ್ತಿದೆ. ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಹೆಚ್ಚಿಸುವಂತೆ ನಬಾರ್ಡ್‌ಗೆ ಸೂಚಿಸಲು ವಿತ್ತಿಯ ಸಚಿವರು ಕೇಂದ್ರ ಸರ್ಕಾರದ ಮತ್ತು ಮಾನ್ಯ ಪ್ರಧಾನಮಂತ್ರಿಗಳಿಗೆ ಮಾನ್ಯ ಮುಖ್ಯ ಮಂತ್ರಿಗಳು ಪತ್ರ ಬರೆದಿರುತ್ತಾರೆ.
ಕೇಂದ್ರ ವಿತ್ತ ಸಚಿವರು, ಕೇಂದ್ರ ಸರ್ಕಾರದವರು ನಬಾರ್ಡ್‌ನಲ್ಲಿ ಮಾರುಕಟ್ಟೆ ದರ ಆಧಾರಿತ ಹೆಚ್ಚಿನ ಬಡ್ಡಿ ದರದ ಪುನರ್ಧನವು ಲಭ್ಯ ಇರುವುದಾಗಿ ತಿಳಿಸಿರುತ್ತಾರೆ. ಈ ಹಿನ್ನೆಲೆ ನಬಾರ್ಡ್ 896.11ಕೋಟಿ ರೂಪಾಯಿಗಳ ಹೆಚ್ಚುವರಿ ಮಿತಿಯನ್ನು ರಿಯಾಯಿತಿ ಬಡ್ಡಿ ದರದಲ್ಲಿ ನೀಡಿರುತ್ತದೆ. ಡಿ.ಸಿ.ಸಿ. ಬ್ಯಾಂಕುಗಳ ಬಂಡವಾಳವನ್ನು ಹೆಚ್ಚಿಸಲು ಜಿಲ್ಲೆಯ ಸಹಕಾರ ಸಂಘಗಳು ಹೊಂದಿರುವ ಮೀಸಲು ನಿಧಿಯನ್ನು ಕಡ್ಡಾಯವಾಗಿ ಡಿ.ಸಿ.ಸಿ. ಬ್ಯಾಂಕುಗಳಲ್ಲಿಯೇ ವಿನಿಯೋಗಿಸಲು ಸುತ್ತೋಲೆ ನೀಡಲಾಗಿದೆ.
ಅಲ್ಲದೇ ಮುಜರಾಯಿ ಇಲಾಖೆ ಮತ್ತು ತಾಲ್ಲೂಕು ಕೃಷಿ ಮಾರುಕಟ್ಟೆ ಸಮಿತಿಗಳು ಹೊಂದಿರುವ ಹೆಚ್ಚುವರಿ ನಿಧಿಯನ್ನು ಡಿ.ಸಿ.ಸಿ ಬ್ಯಾಂಕುಗಳಲ್ಲಿ ವಿನಿಯೋಗಿಸುವಂತೆ ಮನವೊಲಿಸಲಾಗುತ್ತಿದೆ. ಸರ್ಕಾರದಿಂದ ರೈತರ ಪರವಾಗಿ ಸಹಕಾರ ಸಂಘಗಳಿಗೆ ಮಾಡಬೇಕಾದ ಬಡ್ಡಿ ಸಹಾಯಧನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದ್ದು, ಮಾರ್ಚ್ 2024ರ ಅಂತ್ಯದ ಎಲ್ಲಾ ಬಿಲ್‌ಗಳನ್ನು ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.












Click it and Unblock the Notifications