ಭೋವಿ ನಿಗಮದ ಅಧ್ಯಕ್ಷರಿಂದ ಭಾರೀ ಕಮಿಷನ್ ದಂಧೆ: ಅಶೋಕ್ ಆರೋಪವೇನು?
ಭೋವಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಗೆ ಹಣ ನೀಡಲು ನಿಗಮದ ಅಧ್ಯಕ್ಷರು ಕಮಿಷನ್‌ಗೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಅವರು ವಿಡಿಯೋ ಕೂಡ ರಿಲೀಸ್ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಈ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ಮತ್ತೊಂದು ಭ್ರಷ್ಟಾಚಾರ ಬಯಲಿಗೆ ಬಂದಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಹಣವನ್ನ ತೆಲಂಗಾಣ ಚುನಾವಣೆಗೆ, ಲೋಕಸಭೆ ಚುನಾವಣೆಗೆ ಬಳಸಿಕೊಂಡು ನುಂಗಿ ನೀರು ಕುಡಿದಿದ್ದಾಯ್ತು. ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಬಳಕೆಯಾಗಬೇಕಾಗಿದ್ದ ಎಸ್‌ಸಿಎಸ್‌ಪಿ/ಟಿಎಸ್‌ಪಿ ನಿಧಿಯಲ್ಲಿ ಪ್ರತಿ ವರ್ಷ 15,000 ಕೋಟಿ ರೂಪಾಯಿ ಹಣವನ್ನ ಬೇರೆಡೆ ವರ್ಗಾಯಿಸಿ ದಲಿತರಿಗೆ ಅನ್ಯಾಯ ಮಾಡಿದ್ದಾಯ್ತು ಎಂದು ಹರಿಹಾಯ್ದಿದ್ದಾರೆ.

ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರಾದವರಿಗೆ 25 ಲಕ್ಷ ಹಣ ಬಿಡುಗಡೆ ಸಹಾಯಧನ ಬಿಡುಗಡೆ ಮಾಡಲು 5 ಲಕ್ಷ ರೂ. ಕಮಿಷನ್‌ಗೆ ಬೇಡಿಕೆ ಇಟ್ಟಿರುವ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ತಾಂಡವವಾಡುತ್ತಿರುವ ಕಮಿಷನ್ ದಂಧೆ, ಲಂಚಗುಳಿತನ, ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದ್ದಾರೆ ಎಂದು ಅಶೋಕ್ ಆರೋಪ ಮಾಡಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರವನ್ನ ಸ್ವತಃ ತಾವೇ ಸದನದಲ್ಲಿ ಒಪ್ಪಿಕೊಂಡಿದ್ದೀರಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂಬಂತೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣದ ದುರ್ಬಳಕೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಈಗ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆಯುತ್ತಿರುವ ಅಕ್ರಮ ಸಾಕ್ಷಿ ಸಮೇತ ಬಹಿರಂಗವಾಗಿದೆ. ಇಷ್ಟಾದರೂ ತಾವು ಕುರ್ಚಿಗೆ ಅಂಟಿಕೊಂಡು ಕೂರುತ್ತೀರಿ ಎಂದರೆ ನಿಮ್ಮ ಭಂಡತನಕ್ಕೆ ನೀವೇ ಸಾಟಿ. ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ, ನೈತಿಕತೆ ಇದ್ದರೆ ತಾವು ಇನ್ನೊಂದು ಕ್ಷಣವೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬಾರದು ಎಂದಿದ್ದಾರೆ.
ಏನಿದು ಆರೋಪ?
ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಅವರು ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಕಚೇರಿಯಲ್ಲೇ ಡೀಲ್ ನಡೆಯುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ 40% ಕಮಿಷನ್ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈಗ ಅವರ ಸರ್ಕಾರದಲ್ಲೇ 60% ಕಮಿಷನ್ ಕೇಳಲಾಗುತ್ತಿದೆ. ಭೋವಿ ಸಮಾಜದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪ ಮಾಡಿದ್ದಾರೆ. ಫಲಾನುಭವಿಗಳಿಗೆ ನಿಗಮದಲ್ಲಿ 10 ಲಕ್ಷ ಸಾಲ ಸಿಗುತ್ತೆ. ಆದರೆ ಅಧಿಕಾರಿಗಳು ಎಲ್ಲ ಕಮೀಷನ್ ತಿಂದು ಫಲಾನುಭವಿಗಳಿಗೆ ಕೇವಲ 25 ಸಾವಿರ ಕೊಡ್ತಾರೆ. ರವಿಕುಮಾರ್ ಕೂಡಲೇ ರಾಜೀನಾಮೆ ಕೊಡಬೇಕು ಎಂದಿದ್ದಾರೆ.
ವಿಡಿಯೋದಲ್ಲಿ ರವಿಕುಮಾರ್ ಹಣ ಮೇಲಿನವರಿಗೂ ಹಂಚಬೇಕು ಅಂದಿದ್ದಾರೆ. ಮಂತ್ರಿಗಳಿಗೆ ಕೊಡಬೇಕು ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವರೇ ಉತ್ತರ ಕೊಡಲಿ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನ ನೇರವಾಗಿ ಭೇಟಿಯಾಗಿ ದೂರು ಕೊಡ್ತೀವಿ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸುತ್ತೇವೆ. ರವಿಕುಮಾರ್ ಅವರನ್ನ ಕೂಡಲೇ ವಜಾಗೊಳಿಸದಿದ್ದರೆ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರಿಗೆ ಘೇರಾವ್ ಹಾಕುತ್ತೇವೆ ಎಂದಿದ್ದಾರೆ.












Click it and Unblock the Notifications