ರಾಜ್ಯದಲ್ಲಿ ಹೊಸ ಗ್ಯಾರಂಟಿ ಯೋಜನೆಯಡಿ 1,00,000 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ಬೆಂಗಳೂರು, ಫೆಬ್ರವರಿ 14: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಫಲಾನುಭವಿಗಳು ಇವುಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಇದೀಗ ತಮ್ಮ ಸರ್ಕಾರ 1,000 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆ ಭೂ ಗ್ಯಾರಂಟಿ ಸಮರ್ಪಣಾ ಗ್ಯಾರಂಟಿ ಸಮಾವೇಶವನ್ನು ಇಟ್ಟುಕೊಳ್ಳಲಾಗಿದ್ದು, ಈ ವೇಳೆ 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರವನ್ನು ವಿತರಣೆ ಮಡಲಾಗಿದೆ.
ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ 1,000 ದಿನಗಳನ್ನು ಪೂರೈಸಿದೆ. ಇದರ ಪ್ರಯುಕ್ತ ಹಾವೇರಿಯಲ್ಲಿ ಕಂದಾಯ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಭೂಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಸಂಪುಟ ಸಹೋದ್ಯೋಗಿಗಳೊಂದಿಗೆ ಭಾಗವಹಿಸಿ 1 ಲಕ್ಷ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಹಕ್ಕುಪತ್ರ ವಿತರಿಸಲಾಯಿತು.

1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ಈ ಸಮಾವೇಶವು ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಭೂಮಿ ಎಂಬ ಬದುಕಿನ ಆಧಾರವನ್ನು ಜನರ ಕೈಗೆ ಕಾನೂನುಬದ್ಧವಾಗಿ ಒಪ್ಪಿಸುವ ಮಹತ್ವದ ಹೆಜ್ಜೆಯಾಗಿದೆ. ಆದ್ದರಿಂದ 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಅವರ ಕನಸುಗಳಿಗೆ ಭದ್ರ ನೆಲೆ ಕಲ್ಪಿಸಲಾಯಿತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ಒಳಗೊಂಡ ಅಭಿವೃದ್ಧಿಯ ಹೊಸ ಮಾದರಿಯನ್ನು ಪರಿಚಯಿಸಿದ ಹೆಮ್ಮೆ ನಮ್ಮದು. ಕಳೆದ ಸಾವಿರ ದಿನಗಳಲ್ಲಿ 1.13 ಲಕ್ಷ ಕೋಟಿ ರೂಪಾಯಿ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ, ಇದರ ಜೊತೆ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ಕೊಡಲಾಗಿದೆ. ರಾಜ್ಯದ 1.37 ಕೋಟಿ ಕುಟುಂಬಗಳು ನಮ್ಮ ಸರ್ಕಾರದ ಒಂದಿಲ್ಲೊಂದು ಯೋಜನೆಯ ನೇರ ಫಲಾನುಭವಿಗಳಾಗಿದ್ದಾರೆ ಎನ್ನುವುದು ವಿಶೇಷ.
ವಿದೇಶಿ ಹೂಡಿಕೆದಾರರು ಹೆಚ್ಚಾಗುತ್ತಿದ್ದಾರೆ
ನಮ್ಮ ಕಲ್ಯಾಣ ಕಾರ್ಯಕ್ರಮಗಳ ಫಲವಾಗಿ ರಾಜ್ಯದ ತಲಾದಾಯವು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಕೋಮುಗಲಭೆ, ಅಸಹಿಷ್ಣುತೆಯಿಂದ ನಲುಗಿದ್ದ ಕರ್ನಾಟಕದಲ್ಲಿ ಇಂದು ಶಾಂತಿ - ನೆಮ್ಮದಿ ನೆಲೆಸಿದೆ. ಇದರಿಂದ ನಿರೀಕ್ಷೆಗೂ ಮೀರಿದ ವಿದೇಶಿ ಬಂಡವಾಳ ಹೂಡಿಕೆ ಯೋಜನೆಗಳು ರಾಜ್ಯದತ್ತ ಹರಿದು ಬರುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಬೇಕು ಎನ್ನುವ ಸಂಕಲ್ಪದೊಂದಿಗೆ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರವು, ಆ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದಕ್ಕೆ ಕಾರಣೀಕರ್ತರಾದ ತಮಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತಿದ್ದೇನೆ. ನಮ್ಮ ಈ ಎಲ್ಲಾ ಸಾಧನೆಗಳ ಶ್ರೇಯ ರಾಜ್ಯದ ಪ್ರತಿ ನಾಗರಿಕನಿಗೆ ಸಲ್ಲಬೇಕು. ನಿಮ್ಮೆಲ್ಲರ ಆಶೀರ್ವಾದ, ಬೆಂಬಲದೊಂದಿಗೆ ಸಾವಿರ ದಿನದ ಪಯಣವನ್ನು ಯಶಸ್ವಿಯಾಗಿ ಪೂರೈಸಿರುವ ನಮ್ಮ ಸರ್ಕಾರಕ್ಕೆ ಮುಂದೆಯೂ ನಿಮ್ಮ ಪ್ರೀತಿ, ಸಹಕಾರವಿರಲಿ ಎಂದು ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಫಲಾನುಭವಿಗಳು ಇವುಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಇದೀಗ ಭೂ ಗ್ಯಾರಂಟಿ ಯೋಜನೆಯಡಿ ಹಕ್ಕುಪತ್ರ ವಿತರಣೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 1,000 ದಿನಗಳನ್ನು ಪೂರೈಸಿದ ಹನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.












Click it and Unblock the Notifications