ಬುಧವಾರ ಪ್ರಚಾರದಲ್ಲಿ ಕೇಳಿಬಂದ ಹೇಳಿಕೆಗಳು!
ಬೆಂಗಳೂರು, ಏ. 3 : ರಾಜ್ಯದಲ್ಲಿ ಚುನಾವಣೆ ಪ್ರಚಾರದ ಕಾವು ಬಿಸಿಲಿಗಿಂತ ಹೆಚ್ಚಾಗಿದೆ. ಇದರ ನಡುವೆಯೇ ನಾಯಕರ ನಡುವಿನ ಮಾತಿನ ಮಲ್ಲಯುದ್ಧವೂ ಮುಂದುವರೆದಿದೆ. ಬುಧವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತಿನ ಮಲ್ಲಯುದ್ಧ ನಡೆಸಿ ಪ್ರಚಾರದ ರಂಗು ಹೆಚ್ಚಿಸಿದ್ದರು.
ಸದಾ ಮಾತಿನಲ್ಲೇ ವಿವಾದ ಸೃಷ್ಟಿಸುವ ಬಿಜೆಪಿ ನಾಯಕ ಆಯನೂರು ಮಂಜುನಾಥ್ ಶಿವರಾಜ್ ಕುಮಾರ್ ಮತ್ತು ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸಿಎಂ ಸಿದ್ದರಾಮಯ್ಯ ಆಪ್ತ, ಸಿಎಂ ಇಬ್ರಾಹಿಂ ಅವರಿಗೆ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ನಾಯಕರ ಮಾತಿನ ಝಲಕ್ ಇಲ್ಲಿದೆ ನೋಡಿ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಪತ್ನಿ ಕೈಮುಗಿತಾರೆ, ಪತಿ ಡ್ಯಾನ್ಸ್ ಮಾಡ್ತಾರೆ
ಬಿಜೆಪಿ ನಾಯಕ ಆಯನೂರು ಮಂಜುನಾಥ್ ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಮಾತಿನಲ್ಲೇ ಟಾಂಗ್ ಕೊಟ್ಟಿದ್ದಾರೆ. "ಪತ್ನಿ ಕೈ ಮುಗಿದು ನಿಂತಿದ್ದರೆ ಪತಿ ಹಾಡು ಹೇಳುತ್ತಾ ಡ್ಯಾನ್ಸ್ ಮಾಡುತ್ತಾ ಮತ ಕೇಳುತ್ತಾರೆ. ಈ ರೀತಿ ಮತಯಾಚನೆಯನ್ನು ಜಿಲ್ಲೆಯ ಜನತೆ ಹಿಂದೆಂದೂ ನೋಡಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ. "ಶಿವಮೊಗ್ಗ ಕ್ಷೇತ್ರದ ಜನ ಪ್ರಜ್ಞಾವಂತರು. ಈ ಸಿನಿಮಾದವರ ಹಾಡು, ಡ್ಯಾನ್ಸ್ ಗೆಲ್ಲ ಮರುಳಾಗಲ್ಲ" ಎಂದು ಹೇಳಿದ್ದಾರೆ. ಸೊರಬ ಶಾಸಕ ಮಧು ಬಂಗಾರಪ್ಪ ವಿರುದ್ಧ ಗುಡುಗಿರುವ ಅವರು. "ಶಿವಮೊಗ್ಗದಲ್ಲಿ ಹೆಸರಾಂತ ಇಬ್ಬರು ಮನೋವೈದ್ಯರಿದ್ದಾರೆ. ಈ ಕೂಡಲೇ ಅವರ ಬಳಿ ಮಧು ಚಿಕಿತ್ಸೆ ಪಡೆದರೆ ಒಳ್ಳೆಯದು" ಎಂದು ಸಲಹೆ ನೀಡಿದ್ದಾರೆ.

ಇಬ್ರಾಹಿಂ ಅವರದ್ದು ಎಲುಬಿಲ್ಲದ ನಾಲಿಗೆ
"ಸಿಎಂ ಇಬ್ರಾಹಿಂ ಅವರದ್ದು ಎಲಿಬಿಲ್ಲದ ನಾಲಿಗೆ. ಅವರ ಭಾಷಣ ಕೇಳೋರು ಒಳಗೆ ಚಪ್ಪಾಳೆ ಹೊಡೆದು, ಹೊರಬಂದು ಬೈತಾರೆ" ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ವಿರುದ್ಧ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಹುಕ್ಕೇರಿಗೆ ತಿವಿದ ಕತ್ತಿ
ಕರ್ನಾಟಕ ವಿಭಜಿಸುವ ಹೇಳಿಕೆ ನೀಡಿ ವಿವಾದ ಮಾಡಿದ್ದ ಮಾಜಿ ಸಚಿವ ಉಮೇಶ್ ಕತ್ತಿ ಪ್ರಕಾಶ್ ಹುಕ್ಕೇರಿ ಅವರನ್ನು ಸೋಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. "ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಆದ್ದರಿಂದ ಅವರನ್ನು ಇಲ್ಲಿಯೇ ಉಳಿಸಿಕೊಳ್ಳಲು ಕಾರ್ಯಕರ್ತರು ಶ್ರಮಿಸಬೇಕು" ಎಂದು ಕತ್ತಿ ಕರೆ ನೀಡಿದ್ದಾರೆ.

ಖರ್ಗೆ ಸೋನಿಯಾ ಕೈಗೊಂಬೆ
ಗುಲ್ಬರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇವು ನಾಯಕ ಬೆಳಮಗಿ ತಮ್ಮ ಎದುರಾಳಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ಕೈಗೊಂಬೆ ಎಂದು ವ್ಯಂಗ್ಯವಾಡಿದ್ದಾರೆ. "ಖರ್ಗೆ ಅವರು ಸೋನಿಯಾ, ರಾಹುಲ್ ಕೈಗೊಂಬೆ. ತನ್ನ ಅಸ್ತಿತ್ವವೇ ಇಲ್ಲದೆ ಆಡಿಸುವವರ ಕೈಗೆ ತಕ್ಕಂತೆ ಗೊಂಬೆ ಕುಣಿಯುತ್ತದೆ" ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿಯಲ್ಲಿ ಅಸಲಿ-ನಕಲಿ ಎಂಬ ಭಾಗಗಳಿವೆ
"ಬಿಜೆಪಿಯಲ್ಲಿ ಅಸಲಿ-ನಕಲಿ ಎಂಬ ಎರಡು ಭಾಗಗಳಿವೆ. ಅಡ್ವಾಣಿ ಸೋಲಿಸಲು ಮೋದಿ, ಯಡಿಯೂರಪ್ಪ ಸೋಲಿಸಲು ಈಶ್ವರಪ್ಪ ಕುತಂತ್ರ ನಡೆಸುತ್ತಿದ್ದಾರೆ" ಎಂದು ಸಚಿವ ಬಾಬೂರಾವ್ ಚಿಂಚನಸೂರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಯಚೂರಿನಲ್ಲಿ ಅಭ್ಯರ್ಥಿಗಳ ರೇಪ್ ಹೇಳಿಕೆ
ರಾಯಚೂರು ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ವಿರುದ್ಧ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ವೈಯಕ್ತಿಕ ನಿಂದನೆ ಮಾಡಿದ್ದಾರೆ. "ಬಿವಿ ನಾಯಕ ಅತ್ಯಾಚಾರಿ, ಅವರಿಗೆ ಮತ ಕೇಳಲು ಯಾವ ನೈತಿಕತೆ ಇಲ್ಲ" ಎಂದು ಶಿವನಗೌಡ ನಾಯಕ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿವಿ ನಾಯಕ "ಶಿವನಗೌಡ ಸೋಲಿನ ಭೀತಿಯಿಂದ ಇಂತಹ ಕೀಲು ಮಟ್ಟದ ಆರೋಪ ಮಾಡುತ್ತಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ. ಶಿವನಗೌಡ ನಾಯಕ ಹೇಳಿಕೆ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಾಂಗ್ರೆಸ್ ದೂರು ನೀಡಿದೆ.












Click it and Unblock the Notifications