'RCB ಬ್ಯಾನ್, ಬ್ಯಾನ್, ಬ್ಯಾನ್... ಐಪಿಎಲ್ ಪಂದ್ಯ ಕೂಡ ನಿಷೇಧ'
ಮೈಸೂರು, ಜೂನ್ 09: ಆರ್‌ಸಿಬಿ ಐಪಿಎಲ್ನಲ್ಲಿ ಕಪ್ ಗೆಲ್ಲುವ ಮೂಲಕ ಕನ್ನಡಿಗರ 18 ವರ್ಷದ ಕನಸು ನನಸಾಗಿತ್ತು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತದಿಂದ 11 ಜನ ಅಮಾಯಕರು ಪ್ರಾಣ ತೆತ್ತರು. 11 ಜನ ಮೃತ ಪಟ್ಟ ಹಿನ್ನೆಲೆ ಸರ್ಕಾರ ಈ ಹೊಣೆಯನ್ನ ಹೊರಬೇಕು ಎಂದು ವಿಪಕ್ಷಗಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇತ್ತ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸ್ವಾಮೀಜಿಗಳು ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಕನ್ನಡ ನಾಡು ನುಡಿ ವಿಚಾರದಲ್ಲಿ ಯಾವಗಲೂ ಧ್ವನಿ ಎತ್ತುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸಹ ವಾಗ್ದಾಳಿಯನ್ನ ನಡೆಸಿದ್ದಾರೆ.

ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಖಂಡನೆ ವ್ಯಕ್ತಪಡಿಸಿದ ಮಾಧ್ಯಮಗಳ ಜೊತೆಗೆ ಈ ಕುರಿತು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮಾತನಾಡಿ, ಆರ್‌ಸಿಬಿ ಟೀಂ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿ ಕುಟುಂಬಕ್ಕೆ 5 ಕೋಟಿ ಪರಿಹಾರ ನೀಡುವಂತೆ ಆಸ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಆಗ್ರಹಿಸಿದ್ರು. ಆರ್‌ಸಿಬಿ ಟೀಂ ಬ್ಯಾನ್ ಮಾಡುವಂತೆ ವಾಟಾಳ್ ನಾಗರಾಜ್ ಆಗ್ರಹಿಸಿದ್ದು, ಅಲ್ಲದೇ ಐಪಿಎಲ್ ಪಂದ್ಯ ಕೂಡ ನಿಷೇಧ ಮಾಡಬೇಕು ಅಂತ ಆಗ್ರಹಿಸಿದ್ರು. ಕಾಲ್ತುಳಿತ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಕೂಡಲೇ ಕಠಿಣ ಕ್ರಮಕ್ಕೆ ಕೈಗೊಳ್ಳುವಂತೆ ವಾಟಾಳ್ ನಾಗರಾಜ್ ಅವರು ಒತ್ತಾಯಿಸಿದ್ರು. ಅಲ್ಲದೇ ಈ ಘಟನೆಯ ಸಂಪೂರ್ಣ ಹೊಣೆ ರಾಜ್ಯ ಸರ್ಕಾರವೇ ಹೊರಬೇಕು, ಈ ಘಟನೆಯ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಸರ್ಕಾರ ಕೂಡಲೇ ಐಪಿಎಲ್ ಗೇಮ್ ರದ್ದು ಮಾಡಬೇಕು, ಆರ್‌ಸಿಬಿ ಟೀಮ್ ಕೂಡ ರದ್ದು ಮಾಡಬೇಕು. ಅಲ್ಲದೇ ಮೃತ 11 ಮಂದಿ ಕುಟುಂಬಸ್ಥರಿಗೆ ಕ್ರಿಕೆಟ್ ಮಂಡಳಿಯಿಂದ 5 ಕೋಟಿ ಪರಿಹಾರ ಕೊಡಬೇಕು, ಅಲ್ಲದೇ ರಾಜ್ಯ ಸರ್ಕಾರ 1 ಕೋಟಿ ಪರಿಹಾರ ಕೊಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ. ಅಲ್ಲದೇ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗೃಹಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ ಈಗಾಗಲೇ ಬಿಜೆಪಿ ದೂರು ದಾಖಲಿಸಿದೆ.












Click it and Unblock the Notifications