1 ರೂ. ಆಸೆಗೆ ಬಿದ್ದು 5 ಸಾವಿರ ಕಳೆದುಕೊಳ್ಳುತ್ತಿರುವ ನಂದಿನಿ ಹಾಲಿನ ಚಿಲ್ಲರೆ ವ್ಯಾಪಾರಿಗಳು

ಬೆಂಗಳೂರು, ಜ. 05: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಉತ್ಪನ್ನ 'ನಂದಿನಿ ಹಾಲು ಮತ್ತು ಮೊಸರು' ಮಾರಾಟ ಬೆಲೆಗಿಂತಲೂ ಒಂದು ರೂಪಾಯಿ ಹೆಚ್ಚಿಗೆ ಮಾರಿದರೂ ಐದು ಸಾವಿರ ರೂ. ದಂಡ ಬೀಳುತ್ತೆ. ಕೆಎಂಎಫ್ ಉತ್ಪನ್ನಗಳನ್ನು ನಿಗದಿತ ಮಾರಾಟ ದರಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟ ಮಾಡಿದ ಮೂರು ನಂದಿನಿ ಮಿಲ್ಕ್ ಪಾರ್ಲರ್ ಗಳ ಮೇಲೆ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ತಲಾ ಐದು ಸಾವಿರ ದಂಡ ವಿಧಿಸಿ ಕೇಸು ದಾಖಲಿಸಿದ್ದಾರೆ.

ಶಿವಾಜಿನಗರದ ಸುತ್ತಮುತ್ತ ನಂದಿನಿ ಹಾಲಿನ ಬೂತ್ ಗಳಲ್ಲಿ ಮಾರಾಟ ದರಕ್ಕಿಂತಲೂ ಹೆಚ್ಚವರಿ ಒಂದು ರೂಪಾಯಿ ಗ್ರಾಹಕರಿಂದ ಪಡೆಯುತ್ತಿದ್ದರು. ಇದು ಶಿವಾಜಿನಗರ ಮಾತ್ರವಲ್ಲ, ಇಡೀ ರಾಜ್ಯದಲ್ಲಿಯೇ ನಂದಿನಿ ಹಾಲು ಉತ್ಪನ್ನಗಳನ್ನು ಮಾರಾಟ ದರಕ್ಕಿಂತಲೂ ಹೆಚ್ಚುವರಿ ಒಂದು ರೂ. ಪಡೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕೇಳಿದರೆ, ಹಾಲು ಮತ್ತು ಮೊಸರನ್ನು ಫ್ರಿಡ್ಜ್ ಗಳಲ್ಲಿ ಇಡಬೇಕಾಗುತ್ತದೆ. ಅದಕ್ಕೆ ವಿದ್ಯುತ್ ಬಿಲ್ ಯಾರು ಕಟ್ಟುತ್ತಾರೆ ಎಂದು ಹಾಲು ಚಿಲ್ಲರೆ ಮಾರಾಟಗಾರರು ಗ್ರಾಹಕರನ್ನೇ ಪ್ರಶ್ನಿಸುತ್ತಾರೆ. ಹೀಗಾಗಿ ಜನ ಸಾಮಾನ್ಯರು ಒಂದು ರೂಪಾಯಿ ಹೆಚ್ಚುವರಿ ಹಣ ಪಾವತಿಸಿಯೇ ನಂದಿನಿ ಹಾಲು ಮತ್ತು ಮೊಸರು ಖರೀದಿ ಮಾಡುತ್ತಾರೆ. ಆದರೆ, ಇದು ಕಾನೂನಿಗೆ ವಿರೋಧ. ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ.

ಕೇಂದ್ರ ಗ್ರಾಹಕ ಸಹಾಯವಾಣಿಗೆ ದೂರು:

ಶಿವಾಜಿನಗರದ ಸುತ್ತಮುತ್ತಲಿನ ನಂದಿನಿ ಹಾಲಿನ ಬೂತ್‌ಗಳಲ್ಲಿ ಹಾಲು ಮತ್ತು ಮೊಸರನ್ನು ಮುದ್ರಿತ ದರಕ್ಕಿಂತಲೂ ಹೆಚ್ಚುವರಿ ದರ ಪಡೆಯುತ್ತಿರುವ ಬಗ್ಗೆ ಭವಿಷ್ಕರ್ ಧರ್ಮರಾಜು ಕೇಂದ್ರ ಗ್ರಾಹಕ ವ್ಯಾಜ್ಯ ಸಹಾಯವಾಣಿಗೆ ದೂರು ನೀಡಿದ್ದರು. ಈ ದೂರುಗಳ ವಿರುದ್ಧ ಕ್ರಮ ಜರುಗಿಸುವಂತೆ ಕೇಂದ್ರ ಗ್ರಾಹಕ ಸಹಾಯವಾಣಿಯಿಂದ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ದೂರುಗಳನ್ನು ಆಧರಿಸಿ ತನಿಖೆ ನಡೆಸಿದ ವೇಳೆ ಕರ್ನಾಟಕ ಮಿಲ್ಕ್ ಫೆಡರೇಷನ್ ನ ನಂದಿನಿ ಹಾಲು ಮತ್ತು ಮೊಸರನ್ನು ಮುದ್ರಿತ ದರಕ್ಕಿಂತಲೂ ಹೆಚ್ಚುವರಿ ಮೊತ್ತಕ್ಕೆ ಚಿಲ್ಲರೆ ವ್ಯಾಪಾರಿಗಳು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಇದೇ ರೀತಿ ರಾಜ್ಯದಲ್ಲಿ ಸುಮಾರು 30 ಕ್ಕೂ ಅಧಿಕ ದೂರುಗಳು ದಾಖಲಾಗಿವೆ.

Bengaluru: Rs 5000 Fine for 3 milk parlour for Charging More for KMF Products

ಈ ಸಂಬಂಧ ತನಿಖೆ ನಡೆಸಿದ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಶಿವಾಜಿನಗರದ ರಾಜ್ ಕೋಟ್ ಎಂಟರ್ ಪ್ರೈಸಸ್, ಹೋಟೆಲ್ ಗಜಾನನ, ಕೃಷ್ಣಮೂರ್ತಿ ನಂದಿನಿ ಮಿಲ್ಕ್ ಪಾರ್ಲರ್, ಕೋಹಿರ್ ಮಿಲ್ಕ್ ಪಾರ್ಲರ್ ವಿರುದ್ಧ ತಲಾ ಐದು ಸಾವಿರ ರೂ. ದಂಡ ವಿಧಿಸಿ ಕೇಸು ದಾಖಲಿಸಲಾಗಿದೆ. ಒಂದು ಹಾಲಿನ ಪ್ಯಾಕೆಟ್ ಮೇಲೆ ಒಂದು ರೂ. ಹೆಚ್ಚುವರಿ ದರ ಪಡೆದದ್ದಕ್ಕೆ ಐದು ಸಾವಿರ ರೂ. ದಂಡ ಪಾವತಿಸಿದ್ದಾರೆ. ಆದರೆ, ಈ ಚಿಲ್ಲರೆ ವ್ಯಾಪಾರಿಗಳನ್ನು ವಿಚಾರಣೆ ನಡೆಸಿದಾಗ ನಂದಿನಿ ಹಾಲು ಮಾರಾಟ ಜಾಲದ ಕಮೀಷನ್ ದಂಧೆ ಬಯಲಿಗೆ ಬಂದಿದೆ.

Bengaluru: Rs 5000 Fine for 3 milk parlour for Charging More for KMF Products

ನಂದಿನಿ ಏಜೆಂಟರಿಂದ ದೋಖಾ:

ಇನ್ನು ನಂದಿನಿ ಹಾಲಿಗೆ ಮುದ್ರಿತ ದರಕ್ಕಿಂತಲೂ ಹೆಚ್ಚುವರಿ ಒಂದು ರೂಪಾಯಿ ವಸೂಲಿ ಮಾಡಿ ಚಿಲ್ಲರೆ ವ್ಯಾಪಾರಿಗಳು ಸಿಕ್ಕಿಬಿದ್ದಿದ್ದಾರೆ. ಆದರೆ, ಇದರ ಹಿಂದೆ ಇರುವುದು ನಂದಿನಿ ಹಾಲು ಮಾರಾಟ ಅಧಿಕೃತ ಏಜೆಂಟರ ದಂಧೆ ಎಂಬುದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಂದಿನಿ ಹಾಲು ಒಂದು ಲೀಟರ್ ಮಾರಾಟ ಮಾರಿದರೆ, ಕೆಎಂಎಫ್ ಕೊಡುವ ಕಮೀಷನ್ ಕೇವಲ 1.75 ರೂ. ಖಾಸಗಿ ಡೈರಿಗಳು ಕೊಡುವ ಕಮೀಷನ್ ಗೆ ಹೋಲಿಸಿದರೆ ತೀರಾ ಕಡಿಮೆ. ಹೀಗಾಗಿ ಕೆಎಂಎಫ್ ಅಧಿಕೃತ ಏಜೆಂಟರೇ ಈ ಕಮೀಷನ್ ಹಣ ಇಟ್ಟುಕೊಳ್ಳುತ್ತಿದ್ದಾರೆ.

Bengaluru: Rs 5000 Fine for 3 milk parlour for Charging More for KMF Products

ಚಿಲ್ಲರೆ ವ್ಯಾಪಾರಿಗಳಿಗೆ ಕಮೀಷನ್ ಇಲ್ಲ:

ನಂದಿನಿ ಹಾಲಿನ ಉತ್ಪನ್ನಗಳನ್ನು ವಿತರಣೆ ಮಾಡುವ ಏಜೆಂಟರು ಬರುವ ಕಮೀಷನ್ ಚಿಲ್ಲರೆ ವ್ಯಾಪಾರಿಗಳಿಗೆ ಕೊಡುತ್ತಿಲ್ಲ. ಆದರೆ ಬಹು ಬೇಡಿಕೆ ಇರುವುದು ನಂದಿನಿ ಹಾಲಿಗೆ ಮಾತ್ರ. ಹೀಗಾಗಿ ಏಜೆಂಟರಿಂದ ಎಂಆರ್ ಪಿ ದರಕ್ಕೆ ಖರೀದಿ ಮಾಡುವ ಚಿಲ್ಲರೆ ವ್ಯಾಪಾರಿಗಳು ನಂದಿನಿ ಹಾಲಿನ ಪಾಕೆಟ್ ಮೇಲೆ ತಲಾ ಒಂದು ರೂ. ಹೆಚ್ಚುವರಿ ಪಡೆಯುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ನಂದಿನಿ ಹಾಲು ಚಿಲ್ಲರೆ ವ್ಯಾಪಾರ ಮಾಡುವರಿಗೆ ಐದು ಪೈಸೆ ಕೂಡ ಕಮೀಷನ್ ಸಿಗುತ್ತಿಲ್ಲ. ಮಾರಾಟ ದರಕ್ಕೆ ಖರೀದಿ ಮಾಡಿ ಕನಿಷ್ಠ ಒಂದು ರೂಪಾಯಿ ಆದರೂ ಗಳಿಸುವ ಉದ್ದೇಶದಿಂದ ಹೆಚ್ಚುವರಿ ಒಂದು ರೂಪಾಯಿ ಪಡೆಯುತ್ತಿದ್ದಾರೆ. ಮಾರಾಟ ದರಕ್ಕಿಂತಲೂ ಹೆಚ್ಚುವರಿ ಹಣ ಪಡೆಯವುದು ಕಾನೂನು ಬಾಹಿರ. ಒಂದು ರೂಪಾಯಿ ಹೆಚ್ಚುವರಿ ದರಕ್ಕೆ ಮಾರಾಟ ಮಾಡಿದವರ ಮೇಲೆಯೇ ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ಕೇಸು ಹಾಕಿದ್ದಾರೆ.

Bengaluru: Rs 5000 Fine for 3 milk parlour for Charging More for KMF Products

ಕಮೀಷನ್ ವ್ಯವಸ್ಥೆ ಸರಿ ಪಡಿಸುವಂತೆ ಮನವಿ:

ನಂದಿನಿ ಉತ್ಪನ್ನ ಚಿಲ್ಲರೆ ವ್ಯಾಪಾರಸ್ಥರಿಗೆ ಕಮೀಷನ್ ಸಿಗುತ್ತಿಲ್ಲ. ಕೆಎಂಎಫ್ ಕೊಡುವ ಕಮೀಷನ್ ಮೊತ್ತವನ್ನು ಏಜೆಂಟರೇ ಪಡೆಯುತ್ತಿದ್ದಾರೆ. ಹೀಗಾಗಿ ಚಿಲ್ಲರೆ ವ್ಯಾಪಾರಿಗಳು ಒಂದು ಹಾಲಿನ ಪಾಕೆಟ್ ಮೇಲೆ ಹೆಚ್ಚುವರಿ ಒಂದು ರೂಪಾಯಿ ಪಡೆಯುತ್ತಿದ್ದಾರೆ. ನಿಗದಿತ ಮಾರಾಟ ದರಕ್ಕಿಂತಲೂ ಹೆಚ್ಚುವರಿ ಹಣ ಗ್ರಾಹಕರಿಂದ ಪಡೆಯುವುದು ಕಾನೂನು ಬಾಹಿರ. ಈ ಕುರಿತ ವ್ಯವಸ್ಥೆಯನ್ನು ಸರಿಪಡಿಸುವಂತೆ ಕೋರಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮುಖ್ಯಸ್ಥರಾದ ಶ್ರೀರೂಪಾ ಅವರು, ಕರ್ನಾಟಕ ಮಿಲ್ಕ ಫೆಡರೇಷನ್ ಗೆ ಪತ್ರ ಬರೆದಿದ್ದಾರೆ. ಈ ಕುರಿತು ಕ್ರಮ ಜರುಗಿಸಿ ವರದಿ ಕಳಿಸುವಂತೆಯೂ ಕೋರಿದ್ದಾರೆ. ಆದರೆ, ಶ್ರೀ ರೂಪಾ ಅವರು ಬರೆದಿರುವ ಪತ್ರವನ್ನು ಕೆಎಂಎಫ್ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಎಜೆಂಟರು ಹೇಳುವುದೇನು?:

ಕೆಎಂಎಫ್ ಸಂಸ್ಥೆ ಒಂದು ಲೀಟರ್ ಹಾಲಿಗೆ 1.75 ಪೈಸೆ ಕಮೀಷನ್ ನೀಡುತ್ತಿದೆ. 200 ಲೀಟರ್ ಹಾಲು ಹಾಕಿಸಿಕೊಂಡರೆ ಕನಿಷ್ಠ ಮೂರು ಲೀಟರ್ ಲೀಕೇಜ್ ಆಗುತ್ತದೆ. ಲೀಕೇಜ್ ಪಾಕೆಟ್ ಗಳನ್ನು ಕೆಎಂಫ್ ವಾಪಸು ಪಡೆಯುವುದಿಲ್ಲ. ಇನ್ನು ಲೀಟರ್ ಗೆ ಕೊಡುವ 1.75 ರೂ. ಕಮೀಷನ್ ಹಣದಲ್ಲಿ ಅಂಗಡಿ ಬಾಡಿಗೆ ಕಟ್ಟಬೇಕು. ಚಿಲ್ಲರೆ ವ್ಯಾಪಾರಿಗಳ ಅಂಗಡಿಗಳಿಗೆ ಸಾಗಣೆ ಮಾಡಲು ಕೆಲಸಗಾರರಿಗೆ ಸಂಬಳ ಕೊಡಬೇಕು. ಜತೆಗೆ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಬೇಕು. ಹೀಗಾಗಿ ಕೆಎಂಎಫ್ ಕೊಡುತ್ತಿರುವ ಕಮೀಷನ್ ಹಣದಿಂದ ನಮ್ಮ ವಹಿವಾಟು ನಿರ್ವಹಣೆ ಮಾಡುವುದೇ ತುಂಬಾ ಕಷ್ಟ. ಹುಡುಗರ ಕೂಲಿ ಮತ್ತು ಬಾಡಿಗೆ ನಿರ್ವಹಣೆ ಮಾಡಲು ಅಸಾಧ್ಯ ಎನ್ನುವ ಪರಿಸ್ಥಿತಿ ಆಗಿದೆ. ಖಾಸಗಿ ಡೈರಿಗಳಂತೆ ನಂದಿನಿ ಉತ್ಪನ್ನ ಮಾರಾಟಕ್ಕೆ ಕಮೀಷನ್ ಹೆಚ್ಚಳ ಮಾಡಿದರೆ ಮಾತ್ರ ಚಿಲ್ಲರೆ ವ್ಯಾಪಾರಿಗಳಿಗೆ ಒಂದಷ್ಟು ಕಮೀಷನ್ ಕೊಡಬಹುದು. ಹೀಗಾಗಿ ಯಾರೂ ಏಜೆಂಟರು ಕೆಎಂಎಫ್ ಕೊಡುವ ಅತಿ ಕಡಿಮೆ ಕಮೀಷನ್ ನಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಕೊಡಲು ಅಸಾಧ್ಯ. ಸಮಸ್ಯೆಯನ್ನು ಕೆಎಂಎಫ್ ಪರಿಹರಿಸಬೇಕು. ಇಲ್ಲದಿದ್ದರೆ ಕೆಎಂಎಫ್ ಹಾಲಿನ ಉತ್ಪನ್ನ ಜಾಗದಲ್ಲಿ ಖಾಸಗಿ ಡೈರಿ ಹಾಲು ಉತ್ಪನ್ನ ಆವರಿಸಿಕೊಳ್ಳುವುತ್ತವೆ ಎಂದು ಏಜೆಂಟ್ ರಮೇಶ್ ಅಸಲಿ ಸತ್ಯವನ್ನು ಒನ್ ಇಂಡಿಯಾ ಕನ್ನಡಕ್ಕೆ ವಿವರಿಸಿದ್ದಾರೆ.

ಕಮಿಷನ್ ಕಡಿಮೆ ಇದೆ ಎಂಬುದು ನಿಜ:
ಕೆಎಂಎಫ್ ಹಾಲು ಒಕ್ಕೂಟ ಒಂದು ಸಹಕಾರ ಸಂಘ. ಇಲ್ಲಿ ನಮಗೆ ಏಜೆಂಟರ ರಕ್ಷಣೆ ಜತೆಗೆ ಗ್ರಾಹಕರ ಹಿತ ರಕ್ಷಣೆ ಕೂಡ ಮುಖ್ಯ. ಖಾಸಗಿ ಹಾಲು ಉತ್ನನ್ನಗಳ ಕಮೀಷನ್ ಗೆ ಹೋಲಿಸಿದರೆ ನಂದಿನಿ ಹಾಲು ಮಾರಾಟಗಾರರಿಗೆ ಕಮೀಷನ್ ಕಡಿಮೆ ಸತ್ಯ. ನಾವು ನಂದಿನಿ ಹಾಲು ದರ ಜಾಸ್ತಿ ಮಾಡಿ ಕಮೀಷನ್ ಹೆಚ್ಚಳ ಮಾಡಲು ಆಗಲ್ಲ. ನಮಗೆ ಗ್ರಾಹಕರ ಹಿತ ರಕ್ಷಣೆ ಮುಖ್ಯ. ಹಾಲು ಉತ್ಪನ್ನ ದರ ಜಾಸ್ತಿ ಮಾಡಿ ಕಮೀಷನ್ ಹೆಚ್ಚಳ ಮಾಡುವ ಧ್ಯೇಯ ನಮ್ಮಲ್ಲಿ ಇಲ್ಲ. ಇದಕ್ಕೆ ಪರ್ಯಾಯವಾಗಿ ನಾನಾ ಪ್ಲಾನ್ ರೂಪಿಸುತ್ತಿದ್ದೇವೆ.

ಎಂ.ಟಿ.ಕುಲಕರ್ಣಿ, ನಿರ್ದೇಶಕರು- ಕೆಎಂಎಫ್ ಮಾರಾಟ ವಿಭಾಗ

Recommended Video

      ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಸಲ್ಲಾ - ಸಿದ್ದು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+