ಬೆಂಗಳೂರಿನಲ್ಲಿ ಮಳೆಯ ಆರ್ಭಟ: ಸೂಕ್ತ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ: ಡಿ.ಎಸ್. ರಮೇಶ್
ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆಯಿದ್ದು, ಮಳೆ ಅನಾಹುತ ತಡೆಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಅಗತ್ಯ ಸಿದ್ಧತೆಗಳನ್ನು ನಡೆಸಿದೆ. ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗಲಿರುವ ಪ್ರದೇಶಗಳನ್ನು ಗುರುತಿಸುವುದು, ಸೂಕ್ತ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ರಸ್ತೆ ಮತ್ತು ಚರಂಡಿಗಳಲ್ಲಿನ ಹೂಳು ತೆರವು, ರಸ್ತೆ ಗುಂಡಿಗಳ ಮುಚ್ಚುವಿಕೆ ಹಾಗೂ ಇತರೆ ಮೂಲಭೂತ ಸೌಕರ್ಯ ಕಾಮಗಾರಿಗಳು ಕುರಿತು ಆಯುಕ್ತರಾದ ಡಿ.ಎಸ್. ರಮೇಶ್ ರವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಎಲ್ಲೆಲ್ಲಿ ಮಳೆಯಿಂದ ಅನಾಹುತ ಸಂಭವಿಸಬಹುದು ಎಂಬ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇದೆ. ಮತ್ತೊಮ್ಮೆ ಆ ಸ್ಥಳಗಳಿಗೆ ಭೇಟಿ ನೀಡಿ ಪ್ರಸ್ತುತ ಸ್ಥಿತಿಗತಿಗಳನ್ನು ಅವಲೋಕಿಸಬೇಕು. ಮಳೆ ಬರುವ ಮುಂಚೆಯೇ ಆ ಸ್ಥಳಗಳಲ್ಲಿ ಪಾಲಿಕೆ ಅಧಿಕಾರಿಗಳು ಹಾಜರಿರಬೇಕು ಎಂದು ಆಯುಕ್ತರು ಸೂಚಿಸಿದರು.

Bengaluru: 10 ರಿಂದ 15 ಜನರ ತಂಡ ರಚನೆ
ಮಳೆಯಿಂದಾಗುವ ಅನಾಹುತ ತಡೆಗಟ್ಟಲು ನಾವು ಒಂದು ತಂಡ ರಚಿಸಬೇಕು. ಪಾಲಿಕೆ ಅಧಿಕಾರಿಗಳನ್ನು ಒಳಗೊಂಡ 10ರಿಂದ 15 ಕಾರ್ಮಿಕರ ತಂಡ ಈ ಕೆಲಸಕ್ಕೆ ಸಜ್ಜಾಗಬೇಕು. ಎಲ್ಲಾ ವಲಯ ಹಾಗೂ ವಾರ್ಡ್ ಮಟ್ಟದಲ್ಲಿ ಈ ಕೆಲಸ ಆಗಬೇಕು. ಗೆದ್ದಲಹಳ್ಳಿ, ಸಾಯಿ ಲೇಔಟ್, ಕೆ.ಆರ್ ಪುರ ಅಂಡರ್ ಪಾಸ್, ದೊಡ್ಡನೆಕ್ಕುಂದಿ ಅಂಡರ್‌ಪಾಸ್ ಸೇರಿದಂತೆ ಅಗತ್ಯವಿರುವ ಕಡೆ ನಮ್ಮ ತಂಡ ಇರಬೇಕು. ಅಗತ್ಯವಿರುವ ಎಲ್ಲಾ ಸಲಕರಣೆ ಮತ್ತು ವಾಹನ ಸಿದ್ಧ ಇರಬೇಕು.
ಮಳೆ ಬಂದಾಗ ಸಾರ್ವಜನಿಕರಿಂದ ʼಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿ ಇಲ್ಲʼ ಎಂಬ ಒಂದೇ ಒಂದು ದೂರು ಕೂಡ ಬರಬಾರದು ಎಂಬ ಉದ್ದೇಶದಿಂದ, ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲೇ ಹಾಜರಿದ್ದು, ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Bengaluru: ಸುಗಮ ಸಂಚಾರಕ್ಕೆ ಆದ್ಯತೆ ನೀಡಿ
ಮಳೆ, ಬಿರುಗಾಳಿಯಿಂದ ನೆಲಕ್ಕುರುಳುವ ಮರಗಳು, ರೆಂಬೆ-ಕೊಂಬೆಗಳ ತೆರವಿಗಾಗಿ ತಂಡಗಳನ್ನು ನಿಯೋಜಿಸಬೇಕು. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಟ್ರ್ಯಾಕ್ಟರ್, ಜೆಸಿಬಿ, ಕ್ರೇನ್ ಹಾಗೂ ಅವಶ್ಯಕ ಸಲಕರಣೆಗಳನ್ನು ಒದಗಿಸಬೇಕು. ಜನರ ದೂರುಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ನೀರು ಹೊರ ಹಾಕಲು ಪಂಪ್‌ಸೆಟ್, ಸಲಕರಣೆಗಳನ್ನು ಸನ್ನದ್ಧವಾಗಿಟ್ಟುಕೊಳ್ಳಬೇಕು. ಜೊತೆಗೆ, ಸಾರ್ವಜನಿಕರ ಅನುಕೂಲ ಹಾಗೂ ನಗರದ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಮತ್ತು ಚರಂಡಿಗಳಲ್ಲಿನ ಹೂಳು ತೆರವು
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ಹಿನ್ನೆಲೆ ರಸ್ತೆಗಳು ಹಾಗೂ ಚರಂಡಿಗಳಲ್ಲಿ ಸಂಗ್ರಹವಾಗಿರುವ ಹೂಳು, ಮಣ್ಣು ಮತ್ತು ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಹಾಗೂ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪಾಲಿಕೆ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಹೂಳು ತೆರವು ಕಾರ್ಯ ನಡೆಸಬೇಕು. ಸಾಂಪ್ರದಾಯಿಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆ ಬಂದಾಗ ಯಾವುದೇ ಕಾರಣ ಅಥವಾ ನೆಪ ಹೇಳಬಾರದು ಎಂದು ಅಧಿಕಾರಿಗಳಿಗೆ ಆಯುಕ್ತರು ತಾಕೀತು ಮಾಡಿದರು.
ಪಾದಚಾರಿ ಮಾರ್ಗ, ರಸ್ತೆ ಬದಿ ಡೆಬ್ರಿಸ್ ಮುಕ್ತವಾಗಿರಲಿ
ನಗರ ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗ ಹಾಗೂ ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ಮತ್ತು ಕಟ್ಟಡ ನಿರ್ಮಾಣ ತ್ಯಾಜ್ಯವನ್ನು (ಡೆಬ್ರಿಸ್) ತ್ವರಿತವಾಗಿ ತೆರವುಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು. ಅಗತ್ಯವಿರುವ ಕಡೆ ಟ್ಯಾಕ್ಟರ್ ಹಾಗೂ ಇತರೆ ವಾಹನಗಳನ್ನು ಬಳಸಿ ತೆರವು ಕಾರ್ಯ ಕೈಗೊಳ್ಳಬೇಕು. ಮಳೆಗಾಲದಲ್ಲಿ ಈ ಕಾರ್ಯಕ್ಕೆ ಅಡಚಣೆಯಾಗುವ ಹಿನ್ನೆಲೆಯಲ್ಲಿ ಮಳೆಯ ಮುನ್ನವೇ ಡೆಬ್ರಿಸ್ ತೆರವು ಕಾರ್ಯ ಪೂರ್ಣಗೊಳಿಸಬೇಕು. ಪೌರಕಾರ್ಮಿಕರನ್ನು ಬಳಸಿಕೊಂಡು ರಸ್ತೆ ಬದಿಯ ಶೋಲ್ಡರ್ ಹಾಗೂ ಚರಂಡಿ ಪ್ರದೇಶಗಳನ್ನು ಸ್ವಚ್ಛಗೊಳಿಸಿ, ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಹಾಗೂ ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೆರೆಗಳನ್ನು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಿ
ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆರು ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಬರಗಾಲ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ಎಸ್‌ಟಿಪಿ (ಕೊಳಚೆ ನೀರು ಸಂಸ್ಕರಣಾ ಘಟಕ) ನೀರನ್ನು ಸಮರ್ಪಕವಾಗಿ ಸಂಸ್ಕರಿಸಿ ಕೆರೆಗಳ ಬಳಕೆಗೆ ತರುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಬೇಕು. ಈ ಕುರಿತು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಪತ್ರ ಬರೆದು, ಸಂಸ್ಕರಿಸಿದ ನೀರಿನ ಲಭ್ಯತೆ ಹಾಗೂ ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ಪಡೆಯಬೇಕು. ಕೆರೆಗಳಿಗೆ ಹರಿಯುವ ಸಂಸ್ಕರಿತ ಹಾಗೂ ಸಂಸ್ಕರಿಸದ ನೀರಿನ ಬಗ್ಗೆ ಪರಿಶೀಲನೆ ನಡೆಸಬೇಕು. ಯಾವ ಕೆರೆಗಳಿಗೆ ನೀರು ಹರಿಸಬೇಕು ಎಂಬುದರ ಕುರಿತು ತ್ವರಿತವಾಗಿ ಸಮಗ್ರ ಮಾಹಿತಿ ಸಿದ್ಧಪಡಿಸಬೇಕು. ಕೆರೆಗಳನ್ನು ತುಂಬಿಸಲು ಅಗತ್ಯವಿರುವ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಈಗಾಗಲೇ ಪ್ರಗತಿಯಲ್ಲಿರುವ ಪೈಪ್‌ಲೈನ್ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಆಯುಕ್ತರು ತಿಳಿಸಿದರು.
100 ಮೀಟರ್ ಅಂತರದಲ್ಲಿ ಬಸ್ ಶೆಲ್ಟರ್‌ಗಳನ್ನು ಸ್ಥಳಾಂತರಿಸಿ
ನಗರದ ಪ್ರಮುಖ ಜಂಕ್ಷನ್‌ಗಳ ಬಳಿ ಅತಿ ಸಮೀಪದಲ್ಲಿರುವ ಬಸ್ ಶೆಲ್ಟರ್‌ಗಳನ್ನು 75ರಿಂದ 100 ಮೀಟರ್ ಅಂತರದಲ್ಲಿ ಸ್ಥಳಾಂತರಿಸಬೇಕು. ಬಿಎಂಟಿಸಿ, ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಬಸ್ ಶೆಲ್ಟರ್‌ಗಳನ್ನು ಎಲ್ಲಿ ನಿರ್ಮಿಸಬೇಕು ಹಾಗೂ ಯಾವೆಲ್ಲಾ ಬಸ್ ಶೆಲ್ಟರ್‌ಗಳನ್ನು ಸ್ಥಳಾಂತರಿಸಬೇಕು ಎಂಬುದರ ಕುರಿತು ಸಮಗ್ರ ವರದಿ ಸಲ್ಲಿಸಬೇಕು. ಮೊದಲು ಜಂಕ್ಷನ್‌ಗಳ ಸಮೀಪದಲ್ಲಿರುವ ಅತೀ ಹತ್ತಿರದ ಬಸ್ ಶೆಲ್ಟರ್‌ಗಳನ್ನು ಗುರುತಿ, ಸೂಕ್ತ ಸ್ಥಳಗಳನ್ನು ಜಂಟಿ ಪರಿಶೀಲನೆಯ ಮೂಲಕ ಅಂತಿಮಗೊಳಿಸಿ, ಸ್ಥಳಾಂತರಿಸಬೇಕಾದ ಬಸ್ ಶೆಲ್ಟರ್‌ಗಳ ಸಂಖ್ಯೆಯ ಕುರಿತು ವರದಿ ಸಲ್ಲಿಸಿ ಹಾಗೂ ಗುರುತಿಸಲಾದ ಸ್ಥಳಗಳಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ ಹೊಸ ಬಸ್ ಶೆಲ್ಟರ್ ನಿರ್ಮಿಸಿ ಎಂದು ಸೂಚಿಸಿದರು.
ರಸ್ತೆ ಗುಂಡಿ ಮುಕ್ತ ವಾರ್ಡ್ ನಿರ್ಮಾಣಕ್ಕೆ ಕ್ರಮ
ನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‌ಗಳನ್ನು ರಸ್ತೆ ಗುಂಡಿ ಮುಕ್ತ ವಾರ್ಡ್‌ಗಳನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಗರದ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳಲ್ಲಿ ಇರುವ ರಸ್ತೆ ಗುಂಡಿಗಳನ್ನು ಗುರುತಿಸಿ, ತ್ವರಿತವಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ವರ್ತೂರು-ಗುಂಜೂರು ಪಾಳ್ಯ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಗುಂಡಿಗಳು ಕಂಡುಬರುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಳೆ ಬರುವ ಮುನ್ನವೇ ಗುಂಡಿಗಳನ್ನು ಮುಚ್ಚಿ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರಾದ ವಿಶ್ವನಾಥ್ ಜೆ., ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ವಿವಿಧ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.


Click it and Unblock the Notifications
