Rain News: ಬೆಂಗಳೂರಲ್ಲಿ ಮೋಡ ಮುಸುಕಿದ ವಾತಾವರಣ, ಆದರೆ ಮಳೆ ಮಾತ್ರ..
ಬೆಂಗಳೂರು: ಕಳೆದ 4-5 ವರ್ಷದಿಂದ ಬೆಂಗಳೂರಿನ ಜನ ಭಾರಿ ಮಳೆಗೆ ಬೆಚ್ಚಿಬಿದ್ದಿದ್ದರು. ಅದರಲ್ಲೂ ತಗ್ಗು ಪ್ರದೇಶದ ಜನಗಳಿಗೆ ಮಳೆ ನೀರು ಸಾಕಷ್ಟು ಸಮಸ್ಯೆ ಕೊಟ್ಟಿತ್ತು. ಆದರೆ ಈ ವರ್ಷ ಮಳೆಯೇ ನಾಪತ್ತೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಬಿದ್ದ ಒಂದೆರಡು ಮಳೆ ಮಾತ್ರ ಬೆಂಗಳೂರಿಗೆ ತಂಪೆರದಿತ್ತು, ಅದನ್ನ ಬಿಟ್ಟರೆ ಮುಂಗಾರು ಸಮಯವಾದ ಜೂನ್ ತಿಂಗಳಲ್ಲೇ ಬೆಂಗಳೂರಲ್ಲಿ ಮಳೆ ಕೊರತೆ ಆತಂಕ ಶುರುವಾಗಿದೆ.
ರಾಜ್ಯದಲ್ಲಿ ಮಳೆ ಕೊರತೆ ಬರಗಾಲದ ಛಾಯೆ ಮೂಡುವಂತೆ ಮಾಡಿದೆ. ಅದರಲ್ಲೂ ರಾಜ್ಯದ ಭಾಗಶಃ ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ ಎದುರಾಗಿದ್ದು, ಮುಂಗಾರು ಮಾರುತ ತಡವಾಗಿ ಪ್ರವೇಶಿಸಿದ ಹಿನ್ನೆಲೆ ಚಿಂತೆ ಶುರುವಾಗಿದೆ. ಹವಾಮಾನ ಇಲಾಖೆಯ ತಜ್ಞರ ಮಾಹಿತಿ ಪ್ರಕಾರ ನಿನ್ನೆಯಿಂದ ಮುಂಗಾರು ಚುರುಕಾಗಬೇಕಿತ್ತು. ಆದ್ರೆ ಬೆಂಗಳೂರಲ್ಲಿ ಇಂದು ಕೆಲ ಭಾಗದಲ್ಲಿ ತುಂತುರು ಮಳೆ ಬಿದ್ದಿದ್ದನ್ನ ಬಿಟ್ಟು ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ಆದರೆ ಗಟ್ಟಿಯಾಗಿ ಮಳೆ ಮಾತ್ರ ಬೀಳುತ್ತಿಲ್ಲ. ಇನ್ನು ಕಳೆದ ವರ್ಷ ಇದೇ ವೇಳೆಗೆ ಮಳೆ ಅವಾಂತರಕ್ಕೆ ಬೆಂಗಳೂರು ಬೆಚ್ಚಿಬಿದ್ದಿತ್ತು (Bengaluru Rain).

ಬೆಂಗಳೂರಿನ ಅಂತರ್ಜಲ ಮಟ್ಟಕ್ಕೂ ಸಮಸ್ಯೆ?
ಕಳೆದ 4-5 ವರ್ಷಗಳಿಂದ ಉತ್ತಮವಾಗಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ನೀರಿನ ಕೊರತೆ ಎದುರಾಗಿರಲಿಲ್ಲ. ಆದ್ರೆ ಈ ಬಾರಿ ಮತ್ತೆ ಬರದ ಛಾಯೆ ಆವರಿಸಿದೆ. ಹೀಗಾಗಿಯೇ ಬೆಂಗಳೂರಿನ ಜನರು ಚಿಂತೆ ಮಾಡುವಂತಾಗಿದೆ. ಅದರಲ್ಲೂ ಕಾಂಕ್ರಿಟ್ ಕಾಡಾಗಿ ಬೆಳೆದು, ಮಳೆ ನೀರು ಭೂಮಿಗೆ ಇಂಗಲು ವ್ಯವಸ್ಥೆಯೇ ಇಲ್ಲ ನಮ್ಮ ಬೆಂಗಳೂರಿನಲ್ಲಿ. ಈ ನಡುವೆ ಮಳೆ ಕೂಡ ಕೈಕೊಟ್ಟಿರುವುದು, ಮುಂದಿನ ದಿನದಲ್ಲಿ ಅಂತರ್ಜಲ ಕೊರತೆ ಕಾಡುವ ಬಗ್ಗೆ ಮುನ್ಸೂಚನೆ ನೀಡುತ್ತಿದೆ. ಈಗಾಗಲೇ ಬಿರು ಬೇಸಿಗೆಗೆ ಬೆಂಗಳೂರಿನ ದೊಡ್ಡ ದೊಡ್ಡ ಕೆರೆ, ಕಟ್ಟೆಗಳು ಬತ್ತಿ ಹೋಗಿವೆ. ಬೆಂಗಳೂರು ಹೊರವಲಯದಲ್ಲಿ ಜನರಿಗೆ ಅಂತರ್ಜಲದ ನೀರು ಆಧಾರ, ಏಕೆಂದರೆ ಅಲ್ಲಿ ಕಾವೇರಿ ನೀರಿನ ಸಂಪರ್ಕ ಇಲ್ಲ.
ಬೆಂಗಳೂರಿನ ಕುಡಿಯುವ ನೀರಿಗೂ ಸಮಸ್ಯೆ?
ಇನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 77.9 ಅಡಿ ನೀರು ಬಾಕಿ ಇದೆ. KRS ಜಲಾಶಯದಲ್ಲಿ ಗರಿಷ್ಠ ಮಟ್ಟ 124.80 ಅಡಿ, ಆದರೆ ಇದೀಗ ಉಳಿದಿರುವ ನೀರು ಕೇವಲ 77.9 ಅಡಿ. ಇನ್ನೇನು 7 ಅಡಿ ಕಮ್ಮಿ ಆದರೂ ಡೆಡ್ ಸ್ಟೋರೇಜ್ ಅಂದ್ರೆ 66 ಅಡಿಗೆ ತಲುಪುತ್ತದೆ. ಆಗ ನೀರು ಪಡೆಯಲು ಪರದಾಡಬೇಕಿದ್ದು, ಬೆಂಗಳೂರಿಗೂ ಸೇರಿದಂತೆ ಮೈಸೂರು ಹಾಗೂ ಮಂಡ್ಯದಲ್ಲಿ ನೀರಿಗೆ ಹಾಹಾಕಾರ ಶುರುವಾಗಲಿದೆ. ರಾಜ್ಯ ಸರ್ಕಾರ ಕೂಡ ಪರಿಸ್ಥಿತಿ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದು, ಮುಂದಿನ ಕೆಲ ದಿನಗಳ ಕಾಲ ಇದೇ ಸ್ಥಿತಿ ಇದ್ದರೆ ಸಂಕಷ್ಟ ಎದುರಾಗುವುದು ಪಕ್ಕಾ.
ಹಳೇ ಮೈಸೂರು ಭಾಗದಲ್ಲಿ ನೀರಿಗೆ ಪರದಾಟ?
ಕೆಆರ್‌ಎಸ್ ಜಲಾಶಯದ ನೀರಿಲ್ಲದೆ ರಾಜ್ಯದ ಪ್ರಮುಖ ನಗರಗಳು ಪರದಾಡುವ ಪರಿಸ್ಥಿತಿ ಬರಲಿದೆ. ಡ್ಯಾಂನಲ್ಲಿ 70 ಅಡಿಗೆ ನೀರು ಕುಸಿದರೆ ಹೊಂಗಳ್ಳಿ ಘಟಕದಿಂದ ಬರುವ 115 MLD ನೀರು ಪೂರೈಕೆ ಕೂಡ ಸಂಪೂರ್ಣ ಸ್ಥಗಿತ ಆಗಲಿದೆ. ಆದ್ರೆ ಮೈಸೂರಿಗೆ ನಿತ್ಯ 300 ಎಂಎಲ್‌ಡಿ ನೀರು ಅಗತ್ಯ. ಸದ್ಯ ಕಬಿನಿಯಲ್ಲಿ 2250 ಅಡಿ ನೀರಿದೆ. ಮೈಸೂರು ನಗರಕ್ಕೆ ಕಾವೇರಿ ಮತ್ತು ಕಬಿನಿಯಿಂದ ನೀರು ಪೂರೈಕೆ ಆಗುತ್ತಿದೆ. ಈಗ ಸಂಗ್ರಹವಾಗಿರುವ ನೀರಿನ ಪ್ರಮಾಣದಿಂದ 20 ದಿನಗಳ ಕಾಲ ನೀರು ಪೂರೈಕೆ ಸಾಧ್ಯ. ಇದೇ ಕಾರಣಕ್ಕೆ ಸಹಜವಾಗಿ ಆತಂಕ ಶುರುವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಬೀಳುವ ನಿರೀಕ್ಷೆ ಇದೆ.

ಒಟ್ನಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದರೂ ಒಳನಾಡಿನಲ್ಲಿ ಮಳೆಯ ಕೊರತೆ ತೀವ್ರವಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಕಾವೇರಿ ಕೊಳ್ಳದ ಪರಿಸ್ಥಿತಿಯೇ ಭೀಕರವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಹವಾಮಾನ ತಜ್ಞರು ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಇನ್ನಷ್ಟು ದಿನ ಕಾದು ನೋಡುವ ಲೆಕ್ಕಾಚಾರವು ಇದೆ. ಇಷ್ಟೆಲ್ಲದರ ನಡುವೆ ಬೆಂಗಳೂರಿಗೆ ಭಾರಿ ಪ್ರಮಾಣದಲ್ಲಿ ಕುಡಿವ ನೀರು ಸರಬರಾಜು ಮಾಡಬೇಕಿದ್ದು, ಈ ವರ್ಷ ಸರ್ಕಾರಕ್ಕೆ ದೊಡ್ಡ ತಲೆನೋವು ಎದುರಾಗುವುದು ಪಕ್ಕಾ.












Click it and Unblock the Notifications