ಸ್ಮಾರ್ಟ್ ಸಿಟಿಯಾಗಲಿವೆ ಬೆಂಗಳೂರು, ಮೈಸೂರು, ಕಲಬುರಗಿ
ಬೆಂಗಳೂರು, ಆಗಸ್ಟ್ 7 : 'ಬೆಂಗಳೂರು, ಮೈಸೂರು, ಕಲಬುರಗಿ ನಗರಗಳನ್ನು ರಾಜ್ಯ ಸರ್ಕಾರವೇ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸಲಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಈ ಮೂರು ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಅರ್ಹತೆ ಪಡೆದಿಲ್ಲ' ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ರಾಜ್ಯದ 6 ನಗರಗಳನ್ನು ಸ್ಮಾರ್ಟ್ ಸಿಟಿಯಾಗಿ ಮತ್ತು 27 ನಗರಗಳನ್ನು ಅಮೃತ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು. ಬೆಂಗಳೂರು, ಮೈಸೂರು, ಕಲಬುರಗಿ ನಗರಗಳಲ್ಲಿ ರಾಜ್ಯ ಸರ್ಕಾರವೇ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಮಾಡಲಿದೆ ಎಂದರು. [ದೇಶಕ್ಕೆ 100 ಸ್ಮಾರ್ಟ್ ಸಿಟಿ, ಕರ್ನಾಟಕಕ್ಕೆ ಎಷ್ಟು?]

ಮಾನದಂಡಗಳು : ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಗೆ ನಗರಗಳಲ್ಲಿ ಆಯ್ಕೆ ಮಾಡಿಕೊಳ್ಳುವಾಗ ಸ್ವಚ್ಛ ಭಾರತ್ ಯೋಜನೆ ಅಡಿ ನಿರ್ಮಿಸಿದ ಶೌಚಾಲಯಗಳ ಸಂಖ್ಯೆ, ದೂರು ವಿಲೇವಾರಿಗೆ ಆನ್‌ಲೈನ್ ವ್ಯವಸ್ಥೆ, ತೆರಿಗೆ ಸಂಗ್ರಹದಲ್ಲಾದ ಹೆಚ್ಚಳ, ನರ್ಮ್ ಯೋಜನೆ ಅನುಷ್ಠಾನ ಮುಂತಾದ 15 ಅಂಶಗಳನ್ನು ಮಾನದಂಡವಾಗಿ ತೆಗೆದುಕೊಂಡಿದೆ ಎಂದು ಸಚಿವರು ಹೇಳಿದರು.
ಮಂಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು, ದಾವಣಗೆರೆ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ನಗರಗಳ ಅಭಿವೃದ್ಧಿಯ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವುದಕ್ಕೆ ಕೇಂದ್ರ ಸರ್ಕಾರ ತಲಾ 2 ಕೋಟಿ ಬಿಡುಗಡೆ ಮಾಡಲಿದೆ ಎಂದರು. [ಬೆಂಗಳೂರಲ್ಲಿ 24x7 ರಕ್ಷಣೆ ಸ್ಮಾರ್ಟ್ ಸಿಟಿ ಯೋಜನೆ]
ಅಮೃತ್ ಯೋಜನೆ : ಅಟಲ್ ಮಿಷನ್ ಫಾರ್ ರಿಜುವನೇಷನ್ ಆಂಡ್ ಅರ್ಬನ್ ಟ್ರಾನ್ಸ್ ಫರ್‌ಮೇಶನ್ (ಅಮೃತ್) ಯೋಜನೆಗೆ ರಾಜ್ಯದ 27 ನಗರಗಳನ್ನು ಆಯ್ಕೆ ಮಾಡಲಾಗಿದೆ. ಬಾದಾಮಿಯನ್ನು ಪಾರಂಪರಿಕ ನಗರವನ್ನಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ವಿವರಣೆ ನೀಡಿದರು.
ಚಿತ್ರದುರ್ಗ, ಭದ್ರಾವತಿ, ಕೋಲಾರ, ರಾಬರ್ಟ್‌ಸನ್ ಪೇಟೆ, ಉಡುಪಿ, ಹಾಸನ, ಚಿಕ್ಕಮಗಳೂರು, ಮಂಡ್ಯ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ-ಬೆಟಗೇರಿ, ರಾಣೆಬೆನ್ನೂರು, ಬೀದರ್, ಬಳ್ಳಾರಿ ಮುಂತಾದ ನಗರಗಳು ಅಮೃತ್ ಯೋಜನಗೆ ಆಯ್ಕೆಯಾಗಿವೆ ಎಂದರು.
ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ನಗರ : ಸ್ಮಾರ್ಟ್ ಸಿಟಿ ಯೋಜನೆಗೆ ಮಂಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು, ದಾವಣಗೆರೆ ನಗರಗಳನ್ನು ಆಯ್ಕೆ ಮಾಡಲಾಗಿದೆ.











Click it and Unblock the Notifications