Vande Bharat; ಬೆಂಗಳೂರು-ಹುಬ್ಬಳ್ಳಿ ಮಾರ್ಗದ ಅಪ್‌ಡೇಟ್ ಕೊಟ್ಟ ಜೋಶಿ
ಹುಬ್ಬಳ್ಳಿ, ಡಿಸೆಂಬರ್ 13; ಕರ್ನಾಟಕದ ಮೊದಲ ವಂದೇ ಭಾರತ್ ರೈಲು ಸಂಚಾರ ನವೆಂಬರ್‌ನಲ್ಲಿ ಆರಂಭವಾಗಿದೆ. 2023ರ ಮಾರ್ಚ್‌ನಲ್ಲಿ ರಾಜ್ಯದಲ್ಲಿ ಮತ್ತೊಂದು ರೈಲು ಸಂಚಾರ ನಡೆಸಲಿದೆ, ಇದಕ್ಕಾಗಿ ರೈಲ್ವೆ ಇಲಾಖೆ ಸಿದ್ಧತೆ ನಡೆಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಮೈಸೂರು ಮತ್ತು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ಇದು ರಾಜ್ಯದ ಮೊದಲ ಮತ್ತು ದೇಶದ 5ನೇ ವಂದೇ ಭಾರತ್ ರೈಲಾಗಿದೆ, ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವುದಾಗಿ ರೈಲ್ವೆ ಇಲಾಖೆ ಈಗಾಗಲೇ ಹೇಳಿದೆ. ಕೇಂದ್ರ ರೈಲ್ವೆ ಸಚಿವಾಲಯ ನೈಋತ್ಯ ರೈಲ್ವೆಯಿಂದ ಈಗಾಗಲೇ ರೈಲು ಸಂಚಾರಕ್ಕೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪಡೆದಿದೆ. ನೈಋತ್ಯ ರೈಲ್ವೆ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಬೇಕಾದ ಅಗತ್ಯ ಕಾಮಗಾರಿಗಳನ್ನು ಸಹ ಕೈಗೊಂಡಿದೆ.
ಧಾರವಾಡ ಸಂಸದ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಬೆಂಗಳೂರು-ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರದ ಬಗ್ಗೆ ಹೊಸ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.

ಪ್ರಹ್ಲಾದ್ ಜೋಶಿ ನೀಡಿದ ಮಾಹಿತಿ
ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದು, ನಮ್ಮ ಧಾರವಾಡ- ಹುಬ್ಬಳ್ಳಿಯಿಂದ ಬೆಂಗಳೂರಿಗೆ ಅತ್ಯಾಧುನಿಕ, ಅತಿವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕೇಂದ್ರ ರೇಲ್ವೆ ಸಚಿವಾಲಯ ತೀವ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
ಈಗ ಹಾವೇರಿ ಮತ್ತು ಬ್ಯಾಡಗಿ ರೈಲು ನಿಲ್ದಾಣಗಳ ಮಧ್ಯ ಹಳಿಗೆ ವೇಗ ನಿಯಂತ್ರಕವನ್ನು ತೆಗೆಯುವ ಮತ್ತು ಹೆಚ್ಚಿನ ವೇಗಕ್ಕೆ ಅನಕೂಲವಾಗುವ ಕಾರ್ಯ ಆರಂಭವಾಗಿದೆ. ಇದರಿಂದ ಗಂಟೆಗೆ 130 ಕಿ. ಮೀ. ವೇಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಅನಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಈ ಕಾಮಗಾರಿ ಕುರಿತ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಕೇಂದ್ರ ರೈಲ್ವೆ ಸಚಿವರ ಹೇಳಿಕೆ
ನವೆಂಬರ್‌ನಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ರಾಜ್ಯದ ರೈಲು ಯೋಜನೆಗಳ ವಿವರ ಪಡೆದಿದ್ದರು. ಕೆಲವು ಕಾಮಗಾರಿ ಚುರುಕುಗೊಳಿಸುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಸಭೆಯಲ್ಲಿ ಮಾತನಾಡಿದ್ದ ಸಚಿವರು, "ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಜೋಡಿಮಾರ್ಗ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಎರಡು ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಿಸಲು ಯೋಜಿಸಲಾಗಿದೆ" ಎಂದು ಹೇಳಿದ್ದರು.
ಮಾರ್ಚ್ 2023ರೊಳಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಈ ಮಾರ್ಗದಲ್ಲಿ ಓಡಿಸಲು ಅನುವಾಗುವಂತೆ ವಿದ್ಯುದ್ದೀಕರಣ ಸಂಬಂಧಿಸಿದ ಕೆಲವು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೆಪಿಟಿಸಿಎಲ್‌ಗೆ ಸಭೆಯಲ್ಲಿ ಸೂಚನೆ ನೀಡಲಾಗಿತ್ತು.

ತಾತ್ಕಾಲಿಕ ವೇಳಾಪಟ್ಟಿ ನೀಡಿರುವ ನೈಋತ್ಯ ರೈಲ್ವೆ
ಭಾರತೀಯ ರೈಲ್ವೆ ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲು ಭಾರತೀಯ ರೈಲ್ವೆ ಸಿದ್ಧತೆ ನಡೆಸುತ್ತಿದೆ. ನೈಋತ್ಯ ರೈಲ್ವೆಗೆ ಪತ್ರ ಬರೆದು ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ವೇಳಾಪಟ್ಟಿ ನೀಡುವಂತೆ ಕೇಳಲಾಗಿತ್ತು. ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನು ಕಳುಹಿಸಿಕೊಟ್ಟಿದೆ. ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಸಹ ಇದನ್ನು ಖಚಿತಪಡಿಸಿದ್ದಾರೆ.
ಬೆಂಗಳೂರು-ಹುಬ್ಬಳ್ಳಿ ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾದರೆ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.

ಧಾರವಾಡದ ತನಕ ವಿಸ್ತರಣೆಗೆ ಬೇಡಿಕೆ
ಸದ್ಯ ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು. ರೈಲನ್ನು ಧಾರವಾಡದ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಈ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಆದರೆ ರೈಲ್ವೆ ಇಲಾಖೆ ಈ ಕುರಿತು ಯಾವುದೇ ಅಧಿಕೃತವಾದ ಹೇಳಿಕೆಯನ್ನು ಇದುವರೆಗೂ ನೀಡಿಲ್ಲ. ರೈಲು ಬೆಂಗಳೂರಿನಿಂದ ಧಾರವಾಡ ತನಕ ಸಂಚಾರ ನಡೆಸಿದರೆ ಮತ್ತಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

6 ವಂದೇ ಭಾರತ್ ರೈಲುಗಳ ಸಂಚಾರ
ಸದ್ಯ ಮೈಸೂರು-ಬೆಂಗಳೂರು-ಚೆನ್ನೈ ಸೇರಿದಂತೆ ದೇಶದಲ್ಲಿ ಒಟ್ಟು 6 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶದಲ್ಲಿ ಸಂಚಾರ ನಡೆಸುತ್ತಿವೆ. ವಂದೇ ಭಾರತ್ ರೈಲುಗಳನ್ನು ಚೆನ್ನೈನ ಪೆರಂಬೂರ್‌ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ದೇಶದಲ್ಲಿ ಸದ್ಯ ಇರುವ ಶತಾಬ್ದಿ ರೈಲಿಗೆ ಪರ್ಯಾಯವಾದ ರೈಲು ಇದು ಎಂಬ ಲೆಕ್ಕಾಚಾರವಿದೆ.
ಈ ರೈಲುಗಳು ಕೆಲವು ವಿಶಿಷ್ಟ ಮೂಲಭೂತ ಸೌಲಭ್ಯಗಳನ್ನು ಹೊಂದಿವೆ. ಸಂಚಾರದ ಸಂದರ್ಭದಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಕವಚ (ರೈಲು ಅವಘಡ ತಪ್ಪಿಸುವ ವ್ಯವಸ್ಥೆ)ಯನ್ನು ಇದು ಹೊಂದಿದೆ. ಪ್ರತಿಯೊಂದು ಕೋಚ್‌ನಲ್ಲಿ 4 ತುರ್ತು ಕಿಟಕಿಗಳಿವೆ. ಕೋಚ್‌ನ ಹೊರಗಡೆ ಹಿಂಭಾಗದಿಂದ ವೀಕ್ಷಣೆಯ ಕ್ಯಾಮರಾಗಳು ಸೇರಿದಂತೆ ನಾಲ್ಕು ಪ್ಲಾಟ್ ಫಾರ್ಮ್‌ಗಳ ಬದಿಯಲ್ಲಿ ಕ್ಯಾಮರಾಗಳಿವೆ.
ಎಲ್ಲಾ ದರ್ಜೆ ಪ್ರಯಾಣಿಕರಿಗೆ ಸೈಡ್ ರೀಕ್ಲೈನರ್ ಆಸನ ಸೌಲಭ್ಯ ಒದಗಿಸಲಾಗಿದೆ. ಎಕ್ಸಿಕ್ಯೂಟಿವ್ ಕೋಚ್‌ಗಳಲ್ಲಿ ಆಸನಗಳು 180 ಡಿಗ್ರಿ ತಿರುಗುವ ವಿಶೇಷತೆಗಳನ್ನು ಹೊಂದಿವೆ. ಜೈವಿಕವಾಗಿ ಸ್ವಚ್ಛವಾಗುವ ಟಚ್ ಫ್ರೀ ಸೌಲಭ್ಯವಿರುವ ಶೌಚಾಲಯಗಳು ಮತ್ತು ಬೇಡಿಕೆಗೆ ಅನುಗುಣವಾಗಿ ವೈ-ಫೈ ವ್ಯವಸ್ಥೆಯೂ ಇದೆ.












Click it and Unblock the Notifications