2016ರಲ್ಲಿ ಹಾಸನ-ಬೆಂಗಳೂರು ನಡುವೆ ರೈಲು ಸಂಚಾರ
ಹಾಸನ, ಜೂ. 03 : ಬಹು ನಿರೀಕ್ಷಿತ ಬೆಂಗಳೂರು-ಹಾಸನ ರೈಲು ಮಾರ್ಗದ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, 2016ರಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಹಾಸನ ಹೊರವಲಯದ ಕೋರಮಂಗಲದಲ್ಲಿ ಕ್ರಾಸಿಂಗ್ ಜಂಕ್ಷನ್ ನಿರ್ಮಿಸಲು ಇಲಾಖೆ ಯೋಜನೆ ರೂಪಿಸಿದೆ.
ಹಾಸನ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಮೈಸೂರು ವಿಭಾಗದ ವ್ಯವಸ್ಥಾಪಕರಾದ ರಾಜಕುಮಾರ್ ಲಾಲ್ ಅವರು ಈ ಕುರಿತು ಮಾಹಿತಿ ನೀಡಿದರು. ಬೆಂಗಳೂರು-ಹಾಸನ ರೈಲು ಮಾರ್ಗದ ಕಾಮಗಾರಿ 2015ರ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು. [ಕುಣಿಗಲ್ ಮಾರ್ಗದ ಬೆಂಗಳೂರು-ಹಾಸನ ರೈಲಿಗೆ ಚಾಲನೆ]

2016ರಲ್ಲಿ ಬೆಂಗಳೂರು-ಹಾಸನ ನಡುವೆ ರೈಲು ಸಂಚಾರ ಆರಂಭವಾಗಲಿದೆ. ಹಾಸನ ರೈಲು ನಿಲ್ದಾಣದಲ್ಲಿ ಕ್ರಾಸಿಂಗ್ ಜಂಕ್ಷನ್ ನಿರ್ಮಾಣ ಮಾಡುವುದಿಲ್ಲ. ನಗರದ ಹೊರವಲಯದ ಕೋರಮಂಗಲದಲ್ಲಿ ಕ್ರಾಸಿಂಗ್ ಜಂಕ್ಷನ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ರಾಜಕುಮಾರ್ ಲಾಲ್ ವಿವರಣೆ ನೀಡಿದರು. [ಮಲ್ಯ ಕುಣಿಗಲ್ ಕುದುರೆಯ ಮೇಲೆ ರೈಲ್ವೆ ಸವಾರಿ!]
ಸಹಾಯವಾಣಿ ಸಂಖ್ಯೆಗಳು : ಮೈಸೂರು ವಿಭಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 138 ಸಂಖ್ಯೆಯ ಸಹಾಯವಾಣಿ ಆರಂಭಿಸಲಾಗಿದೆ. ಈ ನಂಬರ್‌ಗೆ ಕರೆ ಮಾಡಿ ಸ್ವಚ್ಛತೆ, ತುರ್ತು ಚಿಕಿತ್ಸೆ, ಆಹಾರ ಮತ್ತು ರೈಲ್ವೆ ಬೋಗಿಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದರು. [ಜೂ.1 ರಿಂದ ರೈಲ್ವೆ ಪ್ರಯಾಣ ದರ ತುಸು ದುಬಾರಿ]
ಕೆಲವು ದಿನಗಳಲ್ಲಿ ಹಾಸನ ಮತ್ತು ಅರಸೀಕೆರೆ ರೈಲು ನಿಲ್ದಾಣಗಳಲ್ಲಿ ಎಟಿಎಂ ಮಾದರಿಯಲ್ಲಿ ರೈಲು ಪ್ರಯಾಣದ ಟಿಕೆಟ್ ಪಡೆಯುವ ಯಂತ್ರವನ್ನು ಸ್ಥಾಪನೆ ಮಾಡಲಾಗುತ್ತದೆ. ಹಾಸನದಲ್ಲಿ ಪ್ರಸ್ತುತ ಇರುವ ಟಿಕೆಟ್ ಕೌಂಟರ್ ಜೊತೆ ಮತ್ತೊಂದು ಕೌಂಟರ್ ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮಂಗಳೂರಿಗೆ ರೈಲು ಇಲ್ಲ : ಬೆಂಗಳೂರು-ಮಂಗಳೂರು ನಡುವೆ ನೂತನ ರೈಲು ಸೇವೆಯನ್ನು ಆರಂಭಿಸುವ ಚಿಂತನೆ ಇಲಾಖೆ ಮುಂದಿಲ್ಲ ಎಂದು ರಾಜಕುಮಾರ್ ಲಾಲ್ ಸ್ಪಷ್ಟಪಡಿಸಿದರು. ನೂತನ ರೈಲನ್ನು ಪರಿಚಯಿಸಿದರೆ ಕ್ರಾಸಿಂಗ್ ನೀಡುವುದು ಕಷ್ಟ. ಆದ್ದರಿಂದ ಹೊಸ ರೈಲನ್ನು ಓಡಿಸುವುದಿಲ್ಲ ಎಂದು ಹೇಳಿದರು.












Click it and Unblock the Notifications