New Railway Projects: ಕರಾವಳಿ ರೈಲ್ವೆ ಸಂಪರ್ಕ ಸುಧಾರಣೆ, ಬೆಂಗಳೂರಿನಿಂದ ಈ ರೈಲು ಮಾರ್ಗಗಳು ವಿಸ್ತರಣೆ
ಬೆಂಗಳೂರು, ಡಿಸೆಂಬರ್ 04: ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ, ವಿಜಯಪುರ-ಬೆಂಗಳೂರು ರೈಲು ಸಂಚಾರ ಸೇರಿದಂತೆ ವಿವಿಧ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕುರಿತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ರೈಲ್ವೆ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದರು. ಮುಖ್ಯವಾಗಿ ಕರಾವಳಿ ಭಾಗದ ರೈಲು ಸಾರಿಗೆ ಸುಧಾರಣೆಗೆ ಪ್ರಮುಖ ಪ್ರಸ್ತಾವನೆ ಕೈಗೆತ್ತಿಕೊಂಡಿದ್ದಾರೆ.
ಹೌದು, ಬೆಂಗಳೂರಿನಲ್ಲಿ ರಾಜ್ಯದ ವಿವಿಧ ವೆಚ್ಚ ಹಂಚಿಕೆ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ನೈರುತ್ಯ ರೈಲ್ವೆ ಉನ್ನತಾಧಿಕಾರಿಗಳ ಜೊತೆಗೆ ಹೊಸ ರೈಲುಗಳಿಗೆ ಬೇಡಿಕೆ, ವಿವಿಧ ರೈಲ್ವೆ ಮಾರ್ಗಗಳ ಅಭಿವೃದ್ಧಿ, ಜೋಡಿ ರೈಲು ಪಥ ಸೇರಿ ಪ್ರಮುಖ ಯೋಜನೆಗಳ ಫಾಲೋವಪ್ ಮಾಡಿದರು. ಬೆಂಗಳೂರು-ತುಮಕೂರು, ಬೆಂಗಳೂರು- ಮೈಸೂರು ನಡುವೆ ಚತುಷ್ಪಥ ರೈಲು ಮಾರ್ಗದ ಸಮೀಕ್ಷೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು-ಹಾಸನ-ಮಂಗಳೂರು ಮಾರ್ಗವನ್ನು ಜೋಡಿ ಹಳಿಗೇರಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಹಾಸನ-ಮಂಗಳೂರು ನಡುವೆ ಸ್ವಲ್ಪ ಸವಾಲಿದೆ. ಇಲ್ಲಿ ರಸ್ತೆ ಮತ್ತು ರೈಲು ಎರಡನ್ನೂ ಸಮಾನಾಂತರವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಅಧಿಕಾರಿಗಳ ಚಿಂತನೆ ಇದೆ. ಚಿತ್ರದುರ್ಗ-ಆಲಮಟ್ಟಿ ಹಾಗೂ ಯಾದಗಿರಿ-ಆಲಮಟ್ಟಿ ಹೊಸ ಮಾರ್ಗ, ಕೂಡಗಿ ಮಾರ್ಗಗಳಲ್ಲಿ ರೈಲ್ವೆ ಕಾರ್ಯಾಚರಣೆ, ಕಾಮಗಾರಿ ಪ್ರಗತಿ ಬಗ್ಗೆಯು ಮಹತ್ವದ ಚರ್ಚೆಗಳಾದವು.
ಹುಬ್ಬಳ್ಳಿ- ಅಂಕೋಲಾ ಯೋಜನೆ ಅಪ್ಡೇಟ್ಸ್
ಕರಾವಳಿಗೆ ಸಂಪರ್ಕ ಕಲ್ಪಿಸುವ ಹುಬ್ಬಳ್ಳಿ- ಅಂಕೋಲಾ ಯೋಜನೆಯಿಂದ ವನ್ಯಜೀವಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಡೆಹ್ರಾಡೂನ್ ನ ವನ್ಯಜೀವಿ ಸಂಸ್ಥೆ ಅಧ್ಯಯನ ನಡೆಸಲಾಗುತ್ತಿದೆ. 2026ರ ಜೂನ್ ಗೆ ವರದಿ ಬರಲಿದೆ. ಅದರ ಬಳಿಕ ಯೋಜನೆ ಆರಂಭವಾಗುವ ವಿಶ್ವಾಸ ಇದೆ ಎಂದು ಸಚಿವರು ತಿಳಿಸಿದರು.

ಬೆಂಗಳೂರು-ತುಮಕೂರು, ಮೈಸೂರು ಮಾರ್ಗ ಚತುಷ್ಪಥ..
ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರು ನಡುವೆ ಈಗ ಜೋಡಿ ಹಳಿ ಇದೆ. ಇದನ್ನು ನಾಲ್ಕು ಹಳಿಗಳ ಮಾರ್ಗವಾಗಿ ಮಾಡುವ ಬಗ್ಗೆ ಕಾರ್ಯಸಾಧ್ಯತಾ ವರದಿ ನೀಡುವಂತೆ ಹೇಳಲಾಗಿತ್ತು. ಈ ವರದಿಗಳು ಕ್ರಮವಾಗಿ ಈ ತಿಂಗಳ 25ರಂದು ಮತ್ತು 2026ರ ಮೇ ತಿಂಗಳಲ್ಲಿ ಸಲ್ಲಿಕೆ ಆಗಲಿದೆ. ಮೂಲಗಳ ಪ್ರಕಾರ, ಈ ಚತುಷ್ಪಥ ಮಾರ್ಗ ಲಾಭದಾಯಕವಾಗಲಿದೆ. ಇದರಿಂದ ಸ್ಥಳೀಯ ಜನರಿಂಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿವರಿಸಿದರು.
ಜೋಡಿ ಹಳಿ: ತುಮಕೂರು-ಊರುಕೆರೆ ರೈಲು ಆರಂಭ
ತುಮಕೂರು-ರಾಯದುರ್ಗ ನಡುವೆ ರೈಲು ಹಳಿ ಜೋಡಣೆ ನಡೆಯುತ್ತಿದೆ. ತುಮಕೂರು-ಊರುಕೆರೆ ಮತ್ತು ದೊಡ್ಡಹಳ್ಳಿ-ಪಾವಗಡ ನಡುವೆ ನಡೆಯುತ್ತಿರುವ 27 ಕಿ.ಮೀ. ಕಾಮಗಾರಿ ಈ ವರ್ಷ ಮುಗಿಯಲಿದೆ. ತುಮಕೂರು-ಊರುಕೆರೆ ನಡುವೆ (10 ಕಿ.ಮೀ) ನೂರಾರು ಕೈಗಾರಿಕೆಗಳಿವೆ. ನಿತ್ಯ ಸಾವಿರಾರು ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಇನ್ನೊಂದು ಬದಿಯಲ್ಲಿ ದೊಡ್ಡಹಳ್ಳಿ-ಪಾವಗಡ ನಡುವೆಯೂ (20 ಕಿ.ಮೀ) 2026ರ ಜನವರಿಯಿಂದ ರೈಲು ಕಾರ್ಯಾಚರಣೆ ಆರಂಭಿಸಲಾಗುವುದು. ಮಡಕಶಿರಾ-ಪಾವಗಡ ನಡುವಿನ ಕಾಮಗಾರಿ 2026ರ ಡಿಸೆಂಬರ್ ಹೊತ್ತಿಗೆ, ಮಧುಗಿರಿ-ಪಾವಗಡ ಮಧ್ಯದ ಹಳಿ ಜೋಡಣೆ 2028ರ ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.
ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗದಲ್ಲಿ ಊರುಕೆರೆ-ತಿಮ್ಮರಾಯನಹಳ್ಳಿ ನಡುವೆ 13 ಕಿ.ಮೀ. ಹಳಿ ಜೋಡಣೆ ಈ ತಿಂಗಳೇ ಮುಗಿಯಲಿದೆ. ಭರಮಸಾಗರ-ಹೆಬ್ಬಾಳು, ಹೆಬ್ಬಾಳು-ತೋಳಹುಣಸೆ ನಡುವೆ 2026ರ ಫೆಬ್ರವರಿ ಕೊನೆಯ ವೇಳೆಗೆ ಹಳಿ ಜೋಡಣೆ ಆಗಲಿದೆ ಎಂದರು.












Click it and Unblock the Notifications