ಬೆಳ್ಳಂದೂರು ಡಿನೋಟಿಫಿಕೇಷನ್ ಹಗರಣ: ವಿಶೇಷ ಕೋರ್ಟ್ ಮುಂದೆ ಬಿಎಸ್‌ವೈ ಹಾಜರ್
ಬೆಂಗಳೂರು ಜೂ.17. ಬೆಳ್ಳಂದೂರು ಬಳಿಯ ಭೂ ಡಿನೋಟಿಫಿಕೇಷನ್ ಹಗರಣದ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಹಾಜರಾಗಿದ್ದರು. ಬಿಎಸ್‌ವೈ ತಮ್ಮ ವಕೀಲರ ಮೂಲಕ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಬಿ.ಜಯಂತ್ ಕುಮಾರ್ ಅವರ ಮುಂದೆ ಹಾಜರಾದರು.
ಆನಂತರ ಅವರ ಪರ ವಕೀಲರು, ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅದನ್ನು ಪರಿಗಣಿಸಿದ ನ್ಯಾಯಾಲಯ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಅಭಿಯೋಜಕರಿಗೆ ಕೋರ್ಟ್ ಸೂಚನೆ ನೀಡಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು.
ಡಿನೋಟಿಫಿಕೇಷನ್ ಹಗರಣ ಬೆನ್ನು ಬಿಡದಂತೆ ಬಿಎಸ್ ವೈ ಅವರನ್ನು ಕಾಡುತ್ತಿದ್ದು, 9 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ ಬಂದಿದ್ದು, ಮತ್ತೆ ವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿತ್ತು.

2013ರಲ್ಲಿ ವಾಸುದೇವ ರೆಡ್ಡಿ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿರುವ ವಿಶೇಷ ನ್ಯಾಯಾಲಯ, ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿ ವಿಚಾರಣಾ ಪ್ರಕ್ರಿಯೆ ಕೈಗೆತ್ತಿಕೊಂಡಿದೆ.
ಪ್ರಕರಣದ ಹಿನ್ನೆಲೆ:
ಐ.ಟಿ. ಕಾರಿಡಾರ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಪೈಕಿ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪ ಮಾಜಿ ಸಿಎಂ ಬಿಎಸ್ ವೈ ಮೇಲಿದೆ. ಈ ಪ್ರಕರಣದಲ್ಲಿ ಮೂಲ ದೂರುದಾರರಾದ ವಾಸುದೇವ ರೆಡ್ಡಿ, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಯಡಿಯೂರಪ್ಪ ಸೇರಿದಂತೆ ಹತ್ತು ಮಂದಿಯ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು.
2015ರಲ್ಲಿ ಹೈಕೋರ್ಟ್ ದೇಶಪಾಂಡೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿತ್ತು. ಉಳಿದ ಎಂಟು ಜನರ ವಿರುದ್ಧದ ದೂರನ್ನು ವಿಚಾರಣಾ ನ್ಯಾಯಾಲಯ ರದ್ದುಗೊಳಿಸಿತ್ತು. ಆದರೆ ಎರಡನೇ ಆರೋಪಿಯಾಗಿರುವ ಯುಡಿಯೂರಪ್ಪ ವಿರುದ್ಧದ ಪ್ರಕರಣ ಹಾಗೆಯೇ ಇದೆ.
ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಆದೇಶಿಸಿತ್ತು. ತನಿಖೆ ನಡೆಸಿದ್ದ ಪೊಲೀಸರು ಎರಡು ಭಾರಿ ಯಡಿಯೂರಪ್ಪ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂದು 'ಬಿ' ವರದಿ ಸಲ್ಲಿಸಿದ್ದರು. ಎರಡೂ ವರದಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು.2021ರ ನ. 27ರಂದು ಎರಡನೇ 'ಬಿ' ವರದಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ ವಿಚಾರಣೆ ಆರಂಭಿಸುವುದಾಗಿ ಆದೇಶಿಸಿತು.












Click it and Unblock the Notifications