CM ಸಿದ್ದರಾಮಯ್ಯ ಸರ್ಕಾರಕ್ಕೆ 17 ತಿಂಗಳು 17 ಅವಾಂತರ: ಪಟ್ಟಿ ಕೊಟ್ಟ ಆರ್.ಅಶೋಕ್
ಬೆಳಗಾವಿ, ಡಿಸೆಂಬರ್ 09: ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ 2023 ನಡೆದು ಒಂದೂವರೆ ವರ್ಷ ಸಮೀಪಿಸುತ್ತಿದೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 17 ತಿಂಗಳಲ್ಲಿ 17 ಅವಾಂತರಗಳನ್ನು ಮಾಡಿಕೊಂಡಿದೆ. ಇಡೀ ಸರ್ಕಾರ ನಿದ್ದೆಗೆ ಜಾರಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಕಿಡಿಕಾರಿದರು.
ಸೋಮವಾರ (ಡಿ.9) ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೂ ಮೊದಲು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ನೀಡಿದ್ದ ರೀತಿಯ ಆಡಳಿತ ಈ ಬಾರಿ ನೀಡುತ್ತಿಲ್ಲ. ಸಿಎಂ ಮುಡಾ ಕೇಸ್‌ನಲ್ಲಿ ನರಳುತ್ತಿದ್ದರೆ, ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆ ಒಂದರಲ್ಲಿಯೇ 325 ಮಕ್ಕಳು ಮೃತರಾಗಿದ್ದಾರೆ. ಯಾವ ಇಲಾಖೆಯ ಮೇಲೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಡಿತ ಇಲ್ಲ. ಬಾಣಂತಿಯರು, ಮಕ್ಕಳು ಸಾಯುತ್ತಿದ್ದರೂ ಸರ್ಕಾರ ನಿದ್ದೆಗೆ ಜಾರಿದೆ ಎಂದು ಪುನರುಚ್ಚರಿಸಿದರು. ಕಾಂಗ್ರೆಸ್ ಆಡಳಿತ ವಿರುದ್ಧ ಅಸಮಾಧಾನ ಹೊರ ಹಾಕಿದರು.
17 ತಿಂಗಳಲ್ಲಿ 17 ಅವಾಂತರ
ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರ 17 ತಿಂಗಳಲ್ಲಿ 17 ಅವಾಂತರಗಳನ್ನು ಮಾಡಿಕೊಂಡಿದೆ. ಅಭಿವೃದ್ದಿ ಕಾರ್ಯ ಮರೆತಿರುವುದು, ವಕ್ಫ್ ಅವಾಂತರ, ಬಾಣಂತಿಯರ ಸಾವು, ಲಿಕ್ಕರ್ ಹಗರಣದ ಜೊತೆ ಈಗ ಮೆಡಿಕಲ್ ಮಾಫಿಯಾ ಸೇರಿಕೊಂಡಿದೆ. ಹೀಗೆ ಎಲ್ಲ ವಿಚಾರಗಳನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರಕ್ಕೆ ಕಲಾಪದಲ್ಲಿ ಟಕ್ಕರ್ ಕೊಡಲು ಸಜ್ಜಾಗಿದೆ ಎಂದು ಅವರು ತಿಳಿಸಿದರು.
ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಇಲಾಖೆಗಳ ಮೇಲೆ ಹಿಡಿತ ಕೈ ತಪ್ಪಿದ ಕಾರಣದಿಂದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ, ಆಕ್ರಮಗಳು ಅವ್ಯಾಹತವಾಗಿ ನಡೆಯುತ್ತಿವೆ ಎಂದು ಅವರು ಆರೋಪಿಸಿದರು. ಎಲ್ಲ ಸಚಿವರು ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಇದು ಗುರುವಾರದ ಸರ್ಕಾರವಾಗಿದೆ.
ಏಕೆಂದರೆ ಹಣ ಮಾಡಲು ಮಾತ್ರ ಸಚಿವರು ಗುರುವಾರ ವಿಧಾನಸೌಧಕ್ಕೆ ಆಗಮಿಸುತ್ತಾರೆ. ಹೊಸದಾಗಿ ಬಂದಾಗ ಧರ್ಮ ದರ್ಶನ ಮಾಡುತ್ತೇವೆ, ಜನಸಂಪರ್ಕ ಮಾಡುತ್ತೇವೆ ಎಂದು ಹೇಳಿದ್ದ ಮಾತನ್ನು ಮರೆತು ಹಣ ಮಾಡುವುದರಲ್ಲಿ ಇಡೀ ಸರ್ಕಾರ ನಿರತವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕಕ್ಕೆ ಕೊಟ್ಟಿದ್ದೇನು?
ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ರಾಜ್ಯ ಸರ್ಕಾರ,ನಾಯಕರು ಈ ಹಿಂದೆ ಹೇಳಿದ್ದೇನು? ಈಗ ಮಾಡುತ್ತಿರುವುದೇನು?. ಈ ವಿಚಾರವನ್ನು ಸಹ ಸದನದಲ್ಲಿ ಪ್ರಸ್ತಾಪಿಸುತ್ತೇವೆ. ಉತ್ತರ ಕರ್ನಾಟಕವನ್ನು ಚಿನ್ನದ ನಾಡು ಮಾಡುತ್ತೇವೆ ಎಂದು ಹೇಳಿದ್ದವರು ಇಗ ಅವರೆಲ್ಲ ಎಲ್ಲಿ ಹೋದರು? ಎಂದು ಪ್ರಶ್ನಿಸಿದ ಅವರು, ರಾಜ್ಯದ ಇತಿಹಾಸದಲ್ಲೇ ಈ ಸರ್ಕಾರ ಅತ್ಯಂತ ಕಳಪೆ ಎಂದು ಅವರು ದೂರಿದರು.












Click it and Unblock the Notifications